ದೆವ್ವದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ : ಆರ್. ಅಶೋಕ್

2 years ago

ಬೆಂಗಳೂರು: ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುವ ಕಾಂಗ್ರೆಸ್ ಮುಖಂಡರು ಪ್ರಜಾಪ್ರಭುತ್ವ ಉಳಿಸಿ ಎಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ ಸಂಸದರ ಅಮಾನತು ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ಏಳು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆ ಪಕ್ಷದ ಹಿರಿಯ ಶಾಸಕರಾದ ಬಿ.ಆರ್. ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿ ಆರೋಪಿಸಿದ್ದಾರೆ. ಇದುವರೆಗೂ ಒಂದೇ ಒಂದು ಅಭಿವೃದ್ಧಿ ಪರವಾದ ಶಿಲಾನ್ಯಾಸ ಮಾಡಿಲ್ಲ ಎಂದರು.

ಈ ಹಿಂದೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ್ದ ಪತ್ರವನ್ನೂ ಅವರು ಮುಖ್ಯಮಂತ್ರಿಗಳಿಗೆ ನೀಡಿದ್ದರು. ಇದೀಗ ಸಚಿವರ ಸಮ್ಮುಖದಲ್ಲೇ, ಕೆಡಿಪಿ ಸಭೆಯಲ್ಲೇ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ ಎಂಬ ಆರೋಪ ಮಾಡಿದ್ದಾರೆ. ಇದು ಅಕ್ಷರಶಃ ಸತ್ಯ ಎಂದರು.

ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪರಿಸ್ಥಿತಿಯೂ ಇದೇ ರೀತಿ ಇದೆ. ಎಲ್ಲಿಯೂ ಒಂದೇ ಒಂದು ಹೊಸ ಕಾಮಾಗಾರಿಗೆ ಚಾಲನೆ ನೀಡಿಲ್ಲ. ರಾಜ್ಯದ ಏಳೂವರೆ ಕೋಟಿ ಜನರ ತಲೆ ಮೇಲೆ ಈ ಸರಕಾರ ಕಲ್ಲು ಹಾಕಿದೆ ಹೊರತು ಹೊಸ ಶಿಲಾನ್ಯಾಸ ಕಾರ್ಯಕ್ರಮ ಮಾಡಿದ ನಿದರ್ಶನವಿಲ್ಲ ಎಂದರು.

ಪ್ರಜಾಪ್ರಭುತ್ವ ಉಳಿಸಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದ ಅಶೋಕ್ ಅವರು, ಪ್ರಜಾಪ್ರಭುತ್ವ ಉಳಿಸಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ. ಮೊದಲು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಪ್ರಶ್ನೆಗಳನ್ನು ಕೇಳಿದರು.

ಬೆಳಗಾವಿ ಅಧಿವೇಶನ ನಡೆಯುವಾಗ ಸದನ ಸರಿದಾರಿಯಲ್ಲಿ ಇಲ್ಲದಿದ್ದಾಗ, ಪ್ರತಿಪಕ್ಷಗಳ ಎಲ್ಲ ಸದಸ್ಯರು ಧರಣಿ ನಡೆಸುತ್ತಿದ್ದಾಗ ವಿಧೇಯಕಗಳನ್ನು ಅನುಮೋದನೆ ಮಾಡಿಕೊಂಡಾಗ ಪ್ರಜಾಪ್ರಭುತ್ವದ ಆಶಯಗಳು ನೆನಪಿಗೆ ಬರಲಿಲ್ಲವೇ?

ಬರಗಾಲಕ್ಕೆ ಸಂಬಂಧಿಸಿದಂತೆ ನಾವು ಸುದೀರ್ಘವಾಗಿ ಮಾತನಾಡಿ ಅನೇಕ ಬೇಡಿಕೆಗಳನ್ನು ಮುಂದಿಟ್ಟು ಸರಕಾರದ ಉತ್ತರಕ್ಕೆ ಕಾಯುತ್ತಿದ್ದಾಗ ಎಲ್ಲ ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸುತ್ತಿದ್ದಾಗ ಉತ್ತರ ನೀಡಿ ಪಲಾಯನ ಮಾಡಿದಾಗ ಪ್ರಜಾಪ್ರಭುತ್ವ ನೆನಪಿಗೆ ಬರಲಿಲ್ಲವೇ?

ಡಿಕೆ.ಶಿವಕುಮಾರ್ ವಿರುದ್ಧದ ತನಿಖೆ ಹಿಂತೆಗೆತ ಮತ್ತು ಸಚಿವ ಜಮೀರ್ ತೆಲಂಗಾಣದಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಚರ್ಚಿಸಲು ಅವಕಾಶ ನೀಡದೆ ಪಲಾಯನ ಮಾಡಿದಾಗ ಪ್ರಜಾಪ್ರಭುತ್ವ ನೆನಪಿಗೆ ಬರಲಿಲ್ಲವೇ?

ಉಪರಾಷ್ಟ್ರಪತಿಗಳ ಬಗ್ಗೆ ಸಂಸತ್ತಿನ ಮೆಟ್ಟಿಲುಗಳ ಮೇಲೆ ಆಡಿಕೊಂಡು ಗೇಲಿ ಮಾಡುವ ನೀವು ಮುಂದೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ, ರಾಷ್ಟ್ರಪತಿಗಳ ಬಗ್ಗೆ ವ್ಯಂಗ್ಯ ಮಾಡುವುದಿಲ್ಲ ಎನ್ನಲು ಆಗುವುದಿಲ್ಲ. ಆಗ ನಿಮಗೆ ಪ್ರಜಾಪ್ರಭುತ್ವದ ಆಶಯಗಳು ನೆನಪಿಗೆ ಬರಲಿಲ್ಲವೇ? ನಮ್ಮನ್ನು ಹೊರ ಹಾಕಿದ್ದಾಗ ನೆನಪಾಗಲಿಲ್ವೇ?

ಕಳೆದ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ನಾನು ಸೇರಿದಂತೆ ಹತ್ತು ಬಿಜೆಪಿ ಶಾಸಕರನ್ನು ಪೇಪರ್ ಹರಿದ ಕಾರಣಕ್ಕೆ ಸದನದಿಂದ ಹೊರ ಹಾಕಿದಾಗ ಪ್ರಜಾಪ್ರಭುತ್ವದ ನೆನಪು ಆಗಲಿಲ್ಲವೇ?

ಏಳು ತಿಂಗಳ ಆಡಳಿತದ ಅವಧಿಯಲ್ಲಿಸರ್ವಾಧಿಕಾರಿ ಧೋರಣೆ ಅನುಸರಿಸಿರುವ ನಿಮಗೆ ಮೋದಿ ಸರಕಾರದ ಆಡಳಿತದ ಬಗ್ಗ ಪ್ರಶ್ನಿಸುವ ನೈತಿಕತೆ ಎಲ್ಲಿದೆ. ಇಡೀ ರಾಜ್ಯದಲ್ಲಿ ಕಾನನೂನು ಸುವ್ಯವಸ್ಥೆ ಕುಸಿದು ಜನರು ಶಾಪ ಹಾಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂಬ ನಿಮ್ಮ ಹೇಳಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಗೇಲಿ ಮಾಡಿದರು.

Leave a Reply