ಮಹದಾಯಿ ನಾಲಾ ತಿರುವು ಯೋಜನೆ ಪರಿಶೀಲನೆಗೆ ತಜ್ಞರ ತಂಡ ರಚನೆ

2 years ago

ಬೆಂಗಳೂರು: ಕಿತ್ತೂರು ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಮಹದಾಯಿ ಯೋಜನೆಯ ಪ್ರಮುಖ ಭಾಗವಾದ ಕಳಸಾ ನಾಲಾ ತಿರುವು ಯೋಜನಾ ಪ್ರದೇಶ ಹಾಗೂ ವನ್ಯಜೀವಿ ಸಂರಕ್ಷಣಾ ಯೋಜನೆಯ ಪರಿಶೀಲನೆಗೆ ತಜ್ಞರ ತಂಡವನ್ನು ರಚಿಸಲಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) 4 ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿದ್ದು, ಈ ತಂಡ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

ತಂಡದಲ್ಲಿ ಎನ್ಟಿಸಿ ಹುಲಿ ಘಟಕದ ವಿಜ್ಞಾನಿ, ಎನ್ಟಿಸಿಎ ಪ್ರಾಧಿಕಾರದ ಸಹಾಯಕ ಅರಣ್ಯ ಮಹಾನಿರ್ದೇಶಕ, ಕಾವೇರಿ ನೀರಾವರಿ ನಿಗಮದ ಸಲಹೆಗಾರ ವಿಜಯಕುಮಾರ್ ಗೋಗಿ ಹಾಗೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇದ್ದಾರೆ.

ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಗೆ ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿ 2018ರ ಆಗಸ್ಟ್ 14ರಂದು 3.90 ಟಿಎಂಸಿ ಅಡಿ ನೀರಿನ ಹಂಚಿಕೆಯನ್ನು ಮಾಡಿ ಆದೇಶಿಸಿತ್ತು.

ಸದರಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್ 29ರಂದು ಅನುಮೋದನೆ ಕೊಟ್ಟಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್ವೆಲ್ ನಿರ್ಮಾಣ, ಪಂಪ್ ಹೌಸ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್, ಪೈಪ್ಲೈನ್) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರ ಸಚಿವಾಲಯಕ್ಕೆ ಪ್ರಸ್ತಾವನೆ ನೀಡಿತ್ತು.

ವನ್ಯಜೀವಿ ಧಾಮದಿಂದ ಈ ಯೋಜನೆಗೆ ನೀರು ಹರಿಸಲಾಗುತ್ತಿದೆ ಎಂದು ಗೋವಾ ಸರ್ಕಾರ ತಗಾದೆ ಎತ್ತಿದ್ದರಿಂದ ವನ್ಯಜೀವಿ ಅನುಮೋದನೆಯನ್ನು ಕೂಡ ಪಡೆಯುವ ಅಗತ್ಯವಿದೆ. ಇದಕ್ಕಾಗಿ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ರಾಜ್ಯ ಪ್ರಸ್ತಾವವನ್ನು ಸಲ್ಲಿಸಿತ್ತು. ಯೋಜನೆಯ ಅನುಷ್ಠಾನಕ್ಕೆ 26.92 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತಿದೆ. ಯೋಜನೆಗಾಗಿ ಕಾಳಿ ಹುಲಿ ಕಾರಿಡಾರ್ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 7.96 ಹೆಕ್ಟೇರ್ ಅರಣ್ಯ ಹಾಗೂ 2.71 ಹೆಕ್ಟೇರ್ ಅರಣ್ಯೇತರ ಪ್ರದೇಶ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಸ್ತಾವದಲ್ಲಿ ದಾಖಲಿಸಿತ್ತು.

ಅಲ್ಲದೆ, ರಾಜ್ಯ ಸರ್ಕಾರ ರೂಪಿಸಿರುವ ವನ್ಯಜೀವಿ ಸಂರಕ್ಷಣಾ ಯೋಜನೆ ವೈಜ್ಞಾನಿಕವಾಗಿಲ್ಲ. ಪರ್ಯಾಯವಾಗಿ ಕಾಡು ಬೆಳೆಸಲು ಇನ್ನಷ್ಟು ಉಪಕ್ರಮಗಳನ್ನು ಕೈಗೊಳ್ಳಲು ಅವಕಾಶ ಇತ್ತು. ಈ ಬಗ್ಗೆ ರಾಜ್ಯಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದ ವನ್ಯಜೀವಿ ತಜ್ಞರು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು.

ತಜ್ಞರ ತಂಡ ರಚನೆ ವೇಳೆ ಆದೇಶದಲ್ಲಿ ಇನ್ನಷ್ಟು ವಿಷಯಗಳನ್ನು ಪ್ರಸ್ತಾಪಿಸಿರುವ ಪ್ರಾಧಿಕಾರ, ರಾಜ್ಯ ಸರ್ಕಾರದ ವನ್ಯಜೀವಿ ಸಂರಕ್ಷಣಾ ಯೋಜನೆ ಚೆನ್ನಾಗಿದೆ. ಆದರೆ, ಯೋಜನೆಯನ್ನು ಇನ್ನಷ್ಟು ಸಮಗ್ರಗೊಳಿಸಲು ಅವಕಾಶ ಇದೆ. ತಂಡ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ಪರಿಶೀಲನೆ ನಡೆಸಿ ಸೂಕ್ತ ಶಿಫಾರಸುಗಳನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟಿದೆ.

Leave a Reply