ಮಂಗಳೂರು: ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ನೀಡಬೇಕೆಂದು ಹಾಗೂ 557 ಮನೆಗಳ ತೆರಿಗೆ ಸಂಗ್ರಹವನ್ನು ಈ ಕೂಡಲೇ ಮಾಡಬೇಕೆಂದು ಒತ್ತಾಯಿಸಿ ಇಂದು(11-01-2024) ನಿವೇಶನರಹಿತರು CPIM ನೇತ್ರತ್ವದಲ್ಲಿ ಹರೇಕಳ ಗ್ರಾಮ ಪಂಚಾಯತ್ ಚಲೋ ಹೋರಾಟ ನಡೆಸಿದರು .
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ CPIM ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅಮ್ರತ ಮಹೋತ್ಸವವನ್ನು ದಾಟಿ ಮುನ್ನಡೆಯುತ್ತಿದ್ದರೂ ದೇಶದ ಬಡಪಾಯಿ ಜನತೆಗೆ ಇನ್ನೂ ಕೂಡ ತುಂಡು ಭೂಮಿ ಲಭಿಸದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹರೇಕಳ ಗ್ರಾಮದಲ್ಲಿ ಕಳೆದ 4 ದಶಕಗಳಿಂದ ಬಡವರಿಗೆ ಮನೆ ನಿವೇಶನ ಒದಗಿಸದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳ ನಿರಂತರ ಹೋರಾಟದ ಫಲವಾಗಿ ಇಲ್ಲಿನ ಗ್ರಾಮ ಪಂಚಾಯತ್ ನಿವೇಶನರಹಿತರ ಪಟ್ಟಿಯನ್ನು ಸಿದ್ಧಗೊಳಿಸಿದೆ ಎಂದರು.
ಆದರೆ ಅದಕ್ಕಾಗಿ ನಿವೇಶನವನ್ನು ಇನ್ನೂ ಕೂಡ ಕಾದಿರಿಸದೆ ಸ್ಥಳೀಯ ಜನತೆಯನ್ನು ವಂಚಿಸಿದೆ.ಮಾತ್ರವಲ್ಲದೆ ಕಳೆದ ಹಲವಾರು ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದ 557 ಮನೆಗಳ ತೆರಿಗೆ ಕಟ್ಟುವುದನ್ನು ಏಕಾಏಕಿ ನಿಲ್ಲಿಸಿ ಅವರನ್ನೂ ಕೂಡ ಗ್ರಾಮದಿಂದಲೇ ಒದ್ದೋಡಿಸಲು ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ಹರೇಕಳ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆದ್ದೇಶಿಸಿ ಮಾತನಾಡಿದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್, ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಎಕರೆ ಭೂಮಿ ಸರಕಾರದ ವಶದಲ್ಲಿದ್ದರೂ ಇಲ್ಲಿನ ಬಡಪಾಯಿ ಜನತೆಯ ಮನೆ ನಿವೇಶನಕ್ಕಾಗಿ ಜಾಗ ಕಾದಿರಿಸಲು ಇನ್ನೂ ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಈ ಹೋರಾಟವನ್ನು ದಾರಿ ತಪ್ಪಿಸಲು 9 ಎಕರೆಯಷ್ಟು ಭೂಮಿ ನಿವೇಶನ ರಹಿತರಿಗೆ ಕಾದಿರಿಸಲಾಗಿದೆ ಎಂದು ಪಂಚಾಯತ್ ಆಡಳಿತ ಪತ್ರಿಕಾಗೋಷ್ಠಿಯ ಮೂಲಕ ಹೇಳಿದ್ದು,ಇದು ನಿಜಕ್ಕೂ ದಾಖಲೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಂತ ನಮೂದಿಸಲಾಗಿದೆಯೇ ಹೊರತು ನಿವೇಶನರಹಿತರಿಗೆ ಅಂತ ಇನ್ನೂ ಕೂಡ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ CPIM ಯುವ ನಾಯಕ ರಫೀಕ್ ಹರೇಕಳ, ನಿವೇಶನರಹಿತರ ಪ್ರಶ್ನೆಗಳನ್ನು ಮುಂದಿಟ್ಟು ಕಳೆದ ಹಲವಾರು ಬಾರಿ ಹೋರಾಟಗಳನ್ನು ನಡೆಸಿದ್ದರೂ ಪಂಚಾಯತ್ ಆಡಳಿತ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಜನತೆಯ ನೋವುಗಳಿಗೆ ಸ್ಪಂದಿಸಿಲ್ಲ ಎಂದರು.
ಹರೇಕಳ ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಅಸಂಖ್ಯಾತ ಬಡ ಜನತೆಗೆ ಒಂದು ಕಡೆ ನಿವೇಶನವನ್ನೂ ನೀಡದೆ ಮತ್ತೊಂದು ಕಡೆ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸಿಸುತ್ತಿರುವ 557 ಮನೆಗಳಿಗೆ ಏಕಾಏಕಿ ತೆರಿಗೆ ಕಟ್ಟಲು ಅವಕಾಶ ನಿರಾಕರಿಸುವ ಮೂಲಕ ಹರೇಕಳ ಗ್ರಾಮದಲ್ಲಿ ಬಡವರನ್ನು ಊರಿನಿಂದಲೇ ಎತ್ತಂಗಡಿ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಸ್ಥಳೀಯ ಆಡಳಿತದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯನ್ನುದ್ದೇಶಿಸಿ CPIM ಜಿಲ್ಲಾ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸುಕುಮಾರ್ ತೊಕ್ಕೋಟು, ಜಯಂತ ನಾಯಕ್ ರವರು ಮಾತನಾಡಿದರು. ಪ್ರತಿಭಟನೆಯಲ್ಲಿ CPIM ಯುವ ನಾಯಕರಾದ ಜಯಂತ ಅಂಬ್ಲಮೊಗರು, ಇಬ್ರಾಹಿಂ ಮದಕ, ರಿಜ್ವಾನ್ ಹರೇಕಳ ಮೊದಲಾದವರು ಭಾಗವಹಿದ್ದರು.
ಹೋರಾಟದ ನೇತೃತ್ವವನ್ನು ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, CPIM ಸ್ಥಳೀಯ ನಾಯಕರಾದ ಕೆ.ಎಚ್ ಹಮೀದ್, ಜನಾರ್ದನ ಅಮೀನ್, ಕೆ.ಉಮ್ಮರಬ್ಬ, ಸತ್ತಾರ್ ಕೊಜಪ್ಪಾಡಿ, ಇಸ್ಮಾಯಿಲ್, ಕೆ.ಎಚ್ ಇಕ್ಬಾಲ್, ಹೈದರ್ ಹರೇಕಳ, ಬಶೀರ್ ಲಚ್ಚಿಲ್, ನಿಝಾಮ್ ಆಲಡ್ಕ, ಯಾಕೂಬ್ ಖಂಡಿಗ ಮುಂತಾದವರು ವಹಿಸಿಕೊಂಡಿದ್ದರು.




