ಚಟದಿಂದ ಬಿಡಿಸಲು ಸ್ವಲ್ಪ ಕೌನ್ಸಿಲಿಂಗ್ ಮಾಡಬೇಕಿತ್ತು

4 years ago

“ಈ ನಡುವೆ ನಮ್ಮ ಹುಡುಗ ಹೇಳಿದ ಮಾತೇ ಕೇಳೊಲ್ಲ ಸಾರ್. ನಾವೂಂದ್ರೆ ಅವನಿಗೆ ಏನೋ ಕೇವಲ. ಸ್ವಲ್ಪ ನೀವಾದರೂ ಹೇಳಿ. ನೀವು ಅಂದ್ರೆ ಅವನಿಗೆ ಗೌರವ, ಅಭಿಮಾನ. ನಿಮ್ಮ ಮಾತನ್ನು ಅವನು ತೆಗೆದುಹಾಕಲ್ಲ” ಅಂತ ಯಾವುದೇ ಅಪ್ಪ ಅಮ್ಮ ಅವಲತ್ತುಕೊಂಡರೂ ತಕ್ಷಣ, “ನೀವೇಳೋ ಮಾತೇ ನಾನೂ ಹೇಳಿ, ನಿಮ್ಮ ಹಾಗೆನೇ ನಾನೂ ಕೇವಲ ಆಗಬೇಕೂಂತಾನಾ ನಿಮ್ಮ ಸಂಚು?” ಅಂತ ಅನ್ನಿಸಿದರೂ, “ನಾನು ಏನೂ ಹೇಳಲ್ಲ. ಅವನೇನು ಹೇಳ್ತಾನೋ ಕೇಳ್ತೀನಿ” ಅಂತ ಹೇಳಿ ಕಳುಹಿಸುತ್ತೇನೆ.

ತಮ್ಮ ಹರೆಯದ ಮಕ್ಕಳಿಗೆ ಕೌನ್ಸಿಲಿಂಗ್‌ಗೆ ಬರೋಂತ ಬಹಳಷ್ಟು ಪೋಷಕರಿಗೆ ಕೌನ್ಸಿಲಿಂಗ್ ಬೇಕಾಗಿರೋದು. ಅವರು ತರುವ ವಿಚಾರಗಳಾದರೂ ಎಂತವು ನೋಡಿ.

“ಇತ್ತೀಚೆಗೆ ಅವನು ಹೊರಗೆ ಜಾಸ್ತಿ ಸುತ್ತುತ್ತಾ ಇದ್ದಾನೆ. ಯಾವಾಗ್ಲೂ ಫ್ರೆಂಡ್ಸು ಫ್ರೆಂಡ್ಸು ಅಂತ ಮನೆಯಿಂದ ಹೊರಗೇ ಇರ‍್ತಾನೆ. ಅವನಿಗೆ ಸ್ವಲ್ಪ ಬುದ್ಧಿ ಹೇಳಿ ಸಾರ್.”
“ಏನಂತಾ ಬುದ್ಧಿ ಹೇಳಬೇಕು?”
“ಕರೆಕ್ಟು ಟೈಮ್‌ಗೆ ಮನೆಗೆ ಹೋಗು. ಕಾಲೇಜು ಆಗ್ತಿದ್ದಂತೆ ಮನೆ ಸೇರ್ಕೋ. ಅವರು ಇವರ ಜೊತೆ ಸೇರಿ ಪೊರಕಿ ಬೀಳಬೇಡ. ಆಮೇಲೆ ಸಿಗರೇಟು, ಕುಡಿತ ಅಂತ ಚಟಕ್ಕೆ ಬಿದ್ದು ಬಿಟ್ಟರೆ ಬಾಳು ಹಾಳಾಗತ್ತೆ. ಓದು, ಕೆಲಸ ಎಲ್ಲಾ ಕೈ ತಪ್ಪತ್ತೆ ಅಂತ ಹೇಳಿ ಸಾರ್.”
“ಅದನ್ನ ನೀವೇ ಹೇಳಿ.”
“ನಾವು ಹೇಳಿದರೆ ಕೇಳಲ್ಲ.”
ನಾನು ಹೇಳಿದರೆ ಕೇಳುತ್ತಾನೆ ಅಂತ ಹೇಗೆ ನಂಬ್ತಾರೋ ನಂಗೊತ್ತಿಲ್ಲ. ಈ ಹಿರಿಯರು ಯಾವುದನ್ನು ಚಟವೆನ್ನುತ್ತಾರೋ ನನಗೆ ತಿಳಿಯದು. ನನ್ನ ಪ್ರಕಾರ ದುಶ್ಚಟ, ಸದ್ಚಟವೆಂಬುದಿಲ್ಲ. ಚಟವೆಂದರೆ ಚಟವಷ್ಟೇ. ಸಿಗರೆಟ್, ಮದ್ಯಪಾನಾದಿಗಳ ಚಟಗಳನ್ನು ದೂಷಿಸುವವರು ಕಾಫಿ, ಟೀ, ಅಡಿಕೆ ಇತ್ಯಾದಿಗಳನ್ನು ಕೆಟ್ಟದ್ದು ಎಂತೇನೂ ಭಾವಿಸುವುದಿಲ್ಲ. ಚಟಗಳ ವ್ಯಾಪ್ತಿ ಬಹಳ ದೊಡ್ಡದು.

ಯಾವುದನ್ನು ತಾವು ಸತತವಾಗಿ ಅಭ್ಯಾಸ ಮಾಡಿಕೊಂಡಿದ್ದು, ಅದನ್ನು ಪಡೆಯದೇ ಹೋದಾಗ ಅಸಹನೆ, ಚಡಪಡಿಕೆ ಪ್ರಾರಂಭವಾಗಿ ಆ ತಳಮಳ ತಮ್ಮ ನಿತ್ಯ ಕರ್ತವ್ಯಕ್ಕೆ ತೊಡಗಾಗುವಂತಾದಾಗ ಅದನ್ನು ಚಟವೆಂದು ಪರಿಗಣಿಸಬಹುದು. ಇನ್ನೂ ಕೆಲವೊಮ್ಮೆ ಆ ಚಟದ ಪರಿಣಾಮವನ್ನು ಮನಗಂಡು, ಅದಕ್ಕೆ ವಾಲಬಾರದು ಎಂದು ನಿರ್ಧರಿಸುತ್ತಲೇ ಇದ್ದರೂ, ಆ ಸೆಳೆತ ಉಂಟಾದಾಗ ಮಾಡಿದ ನಿರ್ಧಾರವನ್ನು ಮರೆತು ತಮ್ಮ ಇಚ್ಛೆಗೆ ವಿರುದ್ಧವಾಗಿಯೇ ಹೋಗುವುದು ಚಟದ ಇನ್ನೊಂದು ಬಗೆ.

ಮಕ್ಕಳು ಚಟಗಳಿಂದ ಹಾಳಾಗುತ್ತಾರೆ ಎಂದು ದೂರುವ ತಂದೆ ತಾಯಿಯರಿಗೆ ನಾನು ಕೇಳುವ ಪ್ರಶ್ನೆಯೆಂದರೆ, ‘ನೀವು ಕಾಫಿ ಟೀ ಕುಡಿಯುತ್ತೀರಾ?’ ಎಂದು. ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯದಿದ್ದರೆ ತಲೆಯೇ ಓಡುವುದಿಲ್ಲ ಎನ್ನುವವರು, ಕಾಫಿ ಅಥವಾ ಟೀ ಕುಡಿದರೇನೇ ಶೌಚಾದಿ ಕರ್ಮಗಳಾಗೋದು ಇತ್ಯಾದಿಗಳನ್ನೆಲ್ಲಾ ಹೇಳುವ ಪೋಷಕರು ಅವುಗಳನ್ನು ಚಟವೆಂದು ಪರಿಗಣಿಸುವುದೇ ಇಲ್ಲ. ಅದನ್ನು ಅಭ್ಯಾಸ ಎಂದು ಮಾತ್ರ ಗುರುತಿಸುತ್ತಾರೆ. ಏಕೆಂದರೆ ಅದು ಅವರ ಚಟ. ತನಗಾದರೆ ಅಭ್ಯಾಸ, ಪರರಿಗಾದರೆ ಅದು ಚಟ ಮಾತ್ರವಲ್ಲ, ದುಶ್ಚಟ!!

ಹದಿಹರೆಯದ ಹುಡುಗರನ್ನು ಕೂರಿಸಿಕೊಂಡು ತಮ್ಮ ಯೌವನ ಕಾಲದಲ್ಲಿ ತಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಹೇಳುತ್ತಾ, ತಾವೆಂಥಾ ಅದ್ಭುತವಾದ ಜೀವಿಗಳೆಂಬಂತೆ, ಅಮೋಘ, ಅಪ್ರತಿಮ ನಾಯಕ ಅಥವಾ ನಾಯಕಿಯರೆಂಬಂತೆ ಬ್ಲೇಡ್ ಹಾಕುತ್ತಾ ಕುಳಿತುಕೊಳ್ಳುವ ಎಷ್ಟೋ ಜನ ತಂದೆ ತಾಯಿಯರಿಗೆ ಇದೊಂದು ಚಟ ಎಂದು ಎನ್ನಿಸುವುದೇ ಇಲ್ಲ. ತಾವು ಸಣ್ಣವರಿದ್ದಾಗಿನಿಂದ ಎಷ್ಟೋ ಮುಂದುವರೆದ ಮಾಹಿತಿಯ ಯುಗದಲ್ಲಿ ಹುಟ್ಟಿದ ಮಕ್ಕಳಿವರು ಎಂಬುದನ್ನೂ ಮರೆತು ಹಾಕುವ ಗರಗಸದಿಂದ ತಪ್ಪಿಸಿಕೊಳ್ಳಲು ಎಷ್ಟೋ ಯುವಜನ ದೊಡ್ಡವರ ಕೈಗೆ ಸಿಗುವುದಿರಲಿ, ಕಣ್ಣಿಗೆ ಬೀಳುವುದನ್ನೂ ತಪ್ಪಿಸುತ್ತಾರೆ. ಇದರಿಂದಾಗಿ ತಲೆಮಾರುಗಳ ನಡುವೆ ನಡೆಯಬೇಕಾದ ಸಂವಾದಗಳು, ಸಂವಹನಗಳೇ ತಪ್ಪಿಹೋಗುತ್ತವೆ. ತಮ್ಮನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸಿಕೊಂಡು ಮಾತಾಡುತ್ತಾ ಹೋಗುವ ದೊಡ್ಡವರ ಚಟಗಳು ಯುವಕರಲ್ಲಿ ಕ್ಲೀಷೆಯ ಭಾವವನ್ನು ತುಂಬುವುದಲ್ಲದೇ, ಕೇವಲವಾಗಿಯೂ ಕಾಣುವ ಅಥವಾ ಹಾಸ್ಯವಾಗಿ ಪರಿಗಣಿಸುತ್ತಾ ಗಂಭೀರವಾದ ಸಾಮರಸ್ಯವನ್ನು ಕಳೆದುಕೊಂಡುಬಿಡುತ್ತಾರೆ.

ಇಂಥಾ ದೊಡ್ಡವರಿಗೆ ಬೇಕಾಗಿರುವುದು ಕೌನ್ಸಿಲಿಂಗ್.

ಎಷ್ಟೋ ಬಾರಿ ಪೋಷಕರಿಗೆ ಬೇಕಾಗಿರುವುದು ಮಕ್ಕಳಿಗೆ ಕೌನ್ಸಿಲಿಂಗ್ ಅಲ್ಲ. ತಾವು ಅವರಿಂದ ಏನನ್ನು ಅಪೇಕ್ಷಿಸುವರೋ ಅದನ್ನು ಸಮಾಲೋಚಕರ ಮುಖಾಂತರ ಹೇಳಿಸುವುದು. ಬಹಳಷ್ಟು ಬಾರಿ ಪೋಷಕರಲ್ಲಿಯೇ ತಪ್ಪಿರುತ್ತದೆ. ಹರೆಯದ ಸಹಜವಾದ ಗುಣಧರ್ಮಗಳನ್ನು ಮತ್ತು ಸಹಜ ದೋಷಗಳನ್ನು ಅವರು ಅತ್ಯಂತ ಅಸಹಜವಾದ ನೆಲೆಯಿಂದ ನೋಡುವುದೇ ಇದಕ್ಕೆ ಮೂಲ ಕಾರಣ.

ನನ್ನ ರಂಗತಂಡದಲ್ಲಿ ಒಂದು ಯುವಜೋಡಿಯು ಪರಸ್ಪರ ಪ್ರೀತಿಸಿತು. ಪ್ರೀತಿಯು ಗಾಢವಾಗಿ, ಆಳವಾಗಿ ಮದುವೆಯನ್ನು ಮಾಡಿಕೊಳ್ಳುವುದರ ಮೂಲಕ ಸಮಾಜದಲ್ಲಿ ನೈತಿಕ ಬದ್ಧತೆಯನ್ನು ಪ್ರದರ್ಶಿಸುವ ನಿರ್ಧಾರ ಮಾಡಿದರು.

ಆಗ ಹುಡುಗಿಯ ಮನೆಯವರು ನನ್ನ ಬಳಿಗೆ ಬಂದು ಅವರ ಮಗಳಿಗೆ ಕೌನ್ಸಿಲಿಂಗ್ ಮಾಡಲು ಹೇಳಿದರು. ಅವರ ಕೌನ್ಸಿಲಿಂಗ್ ಅರ್ಥದಲ್ಲಿ ನಾನು ಅವಳಿಗೆ ಈ ರೀತಿ ಬುದ್ಧಿ ಹೇಳಬೇಕಾಗಿತ್ತು. “ನೋಡಮ್ಮಾ, ನೀನು ನಮ್ಮ ತಂಡದಲ್ಲಿ ಕಲಾವಿದೆಯಾಗಿ ಇದ್ದೀಯ. ಹಾಗೆಲ್ಲಾ ಪ್ರೀತಿ ಗೀತಿ ಅಂತ ಮಾಡಿಕೊಂಡು ಆ ಹುಡುಗನ ಮದುವೆ ಗಿದುವೆ ಮಾಡಿಕೊಂಡು ಹೋದರೆ, ಮುಂದೆ ಏನಾದರೂ ಹೆಚ್ಚೂ ಕಡಿಮೆಯಾಗಬಹುದು. ನಮ್ಮ ರಂಗತಂಡಕ್ಕೆ ಅದರಿಂದ ಕೆಟ್ಟ ಹೆಸರು ಬರುತ್ತದೆ. ಇತರ ಹೆಣ್ಣು ಮಕ್ಕಳು ನಮ್ಮ ತಂಡಕ್ಕೆ ಬರುವುದರ ಸಾಧ್ಯತೆಗಳು ಕಡಿಮೆಯಾದಾಗ ನಮಗೆ ತೊಂದರೆಯಾಗುತ್ತದೆ.”

ಈ ಮಾತುಗಳನ್ನು ನಾನೇ ಅವರಿಗೆ ಖುದ್ದಾಗಿ ಹೇಳಿದರೂ ಅವರಿಗೆ ಖಂಡಿತ ತಿಳಿಯುತ್ತವೆ. ಇವು ನನ್ನ ಮಾತುಗಳಲ್ಲ ಎಂದು. ನಾನು ನನ್ನವೇ ಎಂಬಂತೆ ಹೇಳಿದರೆ, ಅವರು ಅವರ ಪೋಷಕರಾರಾದರೂ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾರಾ ಎಂದು ಮನೆಗೆ ಫೋನಾಯಿಸುತ್ತಾರೆ, ಬಹುಶಃ ಅವರ ಭೂತವೇನಾದರೂ ನನ್ನ ಮೆಟ್ಟಿಕೊಂಡಿರಬಹುದು ಎಂದು.

“ಅವರಿಗೆ ಮದುವೆ ಮಾಡಿಕೊಳ್ಳಿ ಎಂದೂ ಹೇಳುವುದಿಲ್ಲ. ಮದುವೆಯಾಗಬೇಡಿ ಎಂದೂ ಹೇಳುವುದಿಲ್ಲ. ಮದುವೆಯಾಗುವುದಿಲ್ಲ ಎಂದರೆ ಹೋಗಲಿ ಬಿಡಿ ಎನ್ನುತ್ತೇನೆ. ಮದುವೆಯಾಗುತ್ತೇವೆ ಎಂದು ಹೇಳಿ ಮದುವೆಗೆ ಕರೆದರೆ ಹೋಗಿ ಸುಖವಾಗಿ ಬಾಳಿ ಎಂದು ಹಾರೈಸುತ್ತೇನೆ. ವ್ಯಕ್ತಿಗತವಾದ ಅವರ ಈ ಒಪ್ಪಂದದಲ್ಲಿ ನಾನು ಹಸ್ತಕ್ಷೇಪ ಮಾಡಲಾಗದು” ಎಂದು ಅವರಿಗೆ ಹೇಳಿದರೆ ನನ್ನ ಕ್ರೂರವಾಗಿ ನೋಡುತ್ತಾರೆ. ತಮ್ಮ ಮನೆತನದ ಮಾನ ಮರ್ಯಾದೆಗಳನ್ನು ನಾನು ಲೆಕ್ಕಿಸುತ್ತಿಲ್ಲ ಎಂದು ಜಗಳಕ್ಕೆ ಬರುತ್ತಾರೆ. ನಿಮ್ಮ ರಂಗತಂಡದಲ್ಲಿರುವಾಗ ಅವರು ಪ್ರೀತಿ ಮಾಡಿದ್ದು, ಅವರು ಮದುವೆಯಾಗುತ್ತಿರುವುದಕ್ಕೆ ನೀವೇ ಜವಾಬ್ದಾರಿ. ಆ ಮದುವೆಯನ್ನು ನಿಲ್ಲಿಸಿ ಎಂದು ಗಲಾಟೆ ಮಾಡುತ್ತಾರೆ.

ಹುಡುಗನಿಗಾಗಲಿ, ಹುಡುಗಿಗಾಗಲಿ, ಇಬ್ಬರ ಮನೆಯವರಿಗಾಗಲಿ ಕೌನ್ಸಿಲಿಂಗ್ ಏನೂ ಮಾಡಲಾಗದೇ ಮುಂದೇನಾಗುವುದೋ ಎಂದು ನೋಡುತ್ತಾ ಕುಳಿತುಕೊಳ್ಳುತ್ತೇನೆ.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply