ಆಕೆಗಿನ್ನೂ ಹತ್ತೊಂಬತ್ತರ ಪ್ರಾಯ. ಆಗಲೇ ಮೂರು ಜನ ಬಾಯ್‌ಫ್ರೆಂಡುಗಳಿಗೆ ಬಾಯ್ ಹೇಳಿದ್ದಳು. ನಾಲ್ಕನೇ ಬಾಯ್‌ಫ್ರೆಂಡ್‌ಗೆ ಬಾಯ್ ಹೇಳಲು ಆಗಲಿಲ್ಲ.
“ಅಣ್ಣಾ, ಹುಡುಗರೇಕೆ ಹೀಗೆ?”
“ಯಾವ ಹುಡುಗರಮ್ಮಾ?”
“ಪ್ರೀತಿ ಗೀತಿ ಅಂತ ಹಿಂದೆ ಬಿದ್ದು, ನೀನಿಲ್ದೇ ಇರಕ್ಕಾಗಲ್ಲಾಂತ ಅಂದು. ನೀನೇ ನನ್ನ ಪ್ರಾಣ ಅಂದು, ಆಮೇಲೆ ನಿನ್ನ ಪ್ರಾಣ ತೆಗೀತೀನಿ ಅಂತಾರಲ್ಲಾ? ಯಾಕಣ್ಣಾ?”
“ಹೌದಾ? ಯಾಕಮ್ಮಾ ಏನಾಯ್ತು?”
“ನಾನು ಎಲ್ಲೆಲ್ಲಿ ಹೋದರೂ ಹಿಂದೆ ಹಿಂದೆ ಬರುತ್ತಿದ್ದ. ನಾನು ಯಾರ ಜೊತೆ ಮಾತಾಡಿದರೂ ಬೇಜಾರು ಮಾಡಿಕೊಂಡ ಹಾಗೆ ಹೊರಟು ಹೋಗುತ್ತಿದ್ದ. ನೀನು ನನ್ನ ಪ್ರೀತ್ಸಲ್ವಾ ಅಂತ ನೇರವಾಗಿ ಕೇಳಿದ್ದ. ನೀನಿಲ್ದೇ ನಾನಿಲ್ಲ ಅಂತಿದ್ದ. ನಾನೆಲ್ಲಿಗೆ ಹೋದರೂ ಅಲ್ಲಿಗೇ ಬೈಕ್ ಮೇಲೆ ಹಿಂಬಾಲಿಸಿಕೊಂಡು ಬರುತ್ತಿದ್ದ. ಆಮೇಲೆ, ದೂರದಲ್ಲಿ ನಿಂತುಕೊಂಡು ನೋಡ್ತಿರುತ್ತಿದ್ದ. ಕಾಡಿ ಬೇಡಿ ಫೋನ್ ನಂಬರ್ ತಗೊಂಡ. ಆಮೇಲೆ ನಾನು ಸುಮ್ನೆನೇ ಇದ್ರೂ ಇವತ್ತು ನಿನ್ನ ಡ್ರೆಸ್ ತುಂಬಾ ಚೆನ್ನಾಗಿದೆ. ನಿನಗೆ ನಾನೊಂದು ಡ್ರೆಸ್ ಕೊಡಿಸ್ಬೇಕು. ನಿನಗೆ ಅಲ್ಲೆಲ್ಲೋ ಕರ‍್ಕೊಂಡು ಹೋಗಿ ನಿನಗೆ ಸ್ಪೆಷಲ್ ಭೇಲ್‌ಪುರಿ ತಿನ್ನಿಸಬೇಕು. ಅಲ್ಲೆಲ್ಲೋ ಬೊಂಬಾಟ್ ಐಸ್‌ಕ್ರೀಂ ಸಿಗತ್ತೆ, ನಿನಗೆ ಖಂಡಿತ ಇಷ್ಟ ಆಗತ್ತೆ. ಇದ್ಯಾವುದೋ ಸಿನಿಮಾ ಬಂದಿದೆ. ಜೋಡಿಗಳೇ ಹೋದರೆ ಚೆನ್ನಾಗಿರತ್ತಂತೆ. ಬರ‍್ತೀಯಾ? ಪ್ಲೀಸ್ ಪ್ಲೀಸ್ ಪ್ಲೀಸ್ ಅಂತ ಅದೆಷ್ಟು ಸಲ ಕಳಿಸಿದ್ದನೋ.”
“ಆಮೇಲೆ?”
“ಸರೀಂತ ಒಂದು ಸಿನಿಮಾಗೆ ಹೋದೆ. ಅದೇ ಸಿನಿಮಾ ನೋಡೋ ದಿವಸದಲ್ಲೇ ಐಸ್ ಕ್ರೀಮ್, ಭೇಲ್ ಪುರಿ, ಅವನು ಇಷ್ಟ ಪಟ್ಟ ಡ್ರೆಸ್ ನನಗೆ ಎಲ್ಲಾ ಆಯ್ತು. ಆಮೇಲೆ ಸಮಯಕ್ಕೆ ಅಂತ ಏನಾದ್ರೂ ಚಿಕ್ಕ ಚಿಕ್ಕ ಸಹಾಯ ಮಾಡ್ತಿದ್ದ. ನಾನು ಬೇಡ ಬೇಡ ಅಂತಂದ್ರೂ ಏನಾದ್ರೂ ಕೊಡ್ತಿದ್ದ. ನಾನೂ ಏನೋ ಫ್ರೆಂಡ್ ಆದನಲ್ಲಾ ಅಂತ ಸ್ವಲ್ಪ ಫ್ರೀಯಾಗಿ ಏನಾದರೂ ಸಣ್ಣ ಪುಟ್ಟ ಸಮಸ್ಯೆ ಬಂದರೆ ಹೇಳಿಕೊಳ್ತಿದ್ದೆ. ಅವನಾಗೇ ಓಡಿ ಹೋಗಿ ಎಲ್ಲೋ ದುಡ್ಡು ಅರೇಂಜ್ ಮಾಡಿಕೊಂಡು ಬಂದು ಕೊಟ್ಟುಬಿಡ್ತಿದ್ದ. ನಾನು ನಿನ್ನ ಪ್ರೀತಿಸ್ತೀನಿ. ನೀನು ನನ್ನ ಪ್ರೀತಿಸ್ತೀನಿ ಅಂತ ಹೇಳಲೇ ಇಲ್ಲ. ನಿನ್ನ ಮನಸ್ಸಲ್ಲಿ ಏನಿದೆ ಹೇಳಿಬಿಡು. ನಾನು ತೊಂದರೆ ಕೊಡಲ್ಲ ಅಂತಿದ್ದ.”
“ಆಮೇಲೆ ಏನಾಯ್ತಮ್ಮಾ?”
“ಈಗ ನಾನಿಷ್ಟು ಕೊಡಿಸಿದ್ದೀನಿ. ಇಷ್ಟು ಸುತ್ತಾಕಿಸಿದ್ದೀನಿ. ಏನಕ್ಕೆ ಇವೆಲ್ಲಾ ಮಾಡೋದು? ನನ್ನ ಪ್ರೀತಿಸ್ಲಿಲ್ಲಾಂದ್ರೆ ಎತ್ತಿಬಿಡ್ತೀನಿ. ನನ್ನ ಸವಾಸ ಸರಿ ಇಲ್ಲ ಉಶಾರ್ ಅಂತಿದ್ದಾನಣ್ಣಾ…” ಮುಸಮುಸನೆ ಅಳುತ್ತಾ ಗದ್ಗದ ಕಂಠದಲ್ಲಿ, “ನಾನು ಫ್ರೆಂಡ್ ಅಂತ ನಂಬಿದ್ದೇ ತಪ್ಪಾಯ್ತಾ ಅಣ್ಣಾ? ಏನೋ ನನ್ನ ಅಣ್ಣನ ಸಮಾನದಲ್ಲಿ, ಫ್ರೆಂಡ್ ಥರಾ ನನಗೆ ಹೆಲ್ಪ್ ಮಾಡ್ತಿದ್ದಾನೆ ಅಂದ್ರೆ, ಈಗ ಏನೇನೋ ಹೇಳ್ತಿದ್ದಾನಣ್ಣಾ. ನನಗೆ ತುಂಬಾ ಭಯವಾಗತ್ತೆ.”
“ಅಲ್ಲಮ್ಮಾ, ನಿನಗೆ ಅವನು ಪ್ರೀತಿಸ್ತೀನಿ ಅಂತ ಮೊದಲೇ ಹೇಳ್ತಿದ್ದನಲ್ಲಮ್ಮಾ. ಅವನು ಏನೇನೋ ಕೊಡಿಸ್ತಿದ್ದನಲ್ಲಾ, ನಿನ್ನ ಮೇಲೆ ವ್ಯಾಮೋಹ ಇದೆ ಅಂತ ಗೊತ್ತಾಗಲಿಲ್ಲವೇನಮ್ಮಾ?”
“ನನಗೆ ಅವನ ಮೇಲೆ ಯಾವ ಮೋಹವೂ ಇಲ್ಲ ಕಣಣ್ಣಾ. ನನಗೆ ನನ್ನ ಹೆತ್ತ ತಂದೆ ತಾಯಿಗಳು ಮುಖ್ಯ. ಅವರು ನನಗೋಸ್ಕರ ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲವಿ ಬೆಳಿಸಿದ್ದಾರೆ. ಅವರಿಗೆ ನಾನು ಹೆಂಗಣ್ಣಾ ಬೆನ್ನು ತೋರಿಸಿಕೊಂಡು ಅವರ ಇಷ್ಟಕ್ಕೆ ವಿರೋಧ ಹೋಗ್ಲಿ? ಅವರಿಗೆ ಈ ಥರದ ಲವ್ಹ್ ಗಿವ್ಹ್ ಅಂತೆಲ್ಲಾ ಗೊತ್ತಾದ್ರೆ ನನ್ನ ಸಾಯ್ಸಾಕಿ ಬಿಡ್ತಾರೆ ಅಷ್ಟೇ. ನಾನು ಏನು ಮಾಡ್ಲಣ್ಣಾ ಹಿಂಗೆ ಸಿಕ್ಕಾಕ್ಕೊಂಡು ಬಿಟ್ಟಿದ್ದೀನಿ.”
“ಅದೆಲ್ಲಾ ಸರಿ, ಅಂಗೇ ಅಲಕ್ಕಾಗಿ ಓಡಾಡಿಕೊಂಡಿರೋದು ಬಿಟ್ಟು, ಈಗೇನು ಇದ್ದಕ್ಕಿದಂತಲೇ ಕಿರಿಕ್ಕು?”
“ಅಣ್ಣಾ, ನಮ್ಮ ಕಾಲೇಜಲ್ಲಿ ಒಬ್ಬರು ಹೊಸದಾಗಿ ಸೇರ‍್ಕಂಡ್ರು. ಮಗು ಮನಸ್ಸಂತವರು. ಅವರು ನನಗೆ ಸಬ್ಜೆಕ್ಟ್ ನಲ್ಲಿ ಏನಾದ್ರೂ ಫ್ರಾಬ್ಲಂ ಆದ್ರೆ ಅದೂ ಇದೂ ಹೇಳಿಕೊಡ್ತಾರೆ. ಕಾಲೇಜಿಗೆ ಹೋಗಿ ಬರೋರು ಸ್ಟಡೀಂತ ಮಾಡೋದಿಲ್ಲೇನಣ್ಣಾ? ಕಂಬೈನ್ ಸ್ಟಡಿ ಅದೂ ಇದೂ ಮಾಡಲ್ಲೇನಣ್ಣಾ? ಅವರ ರೂಮಿಗೆ ಹೋಗಿ ಬರ‍್ತಿದ್ರೆ, ನೀನು ಅವನ ಮನೆಗೆ ಹೋಗೋದ್ಯಾಕೆ ಅಂತ ರೋಡಲ್ಲಿ ಕುಡ್ಕೊಂಡು ಬಂದು ಇವನು ಗಲಾಟೆ ಮಾಡ್ತಾನಣ್ಣಾ. ಯಾರಾದ್ರೂ ನೋಡಿದ್ರೆ ಏನು ಗತಿಯಣ್ಣಾ? ನಾವು ಮನೆಯಲ್ಲಿ ಗಂಜೀ ಕುಡಿದ್ರೂ ಮಾನ ಮರ‍್ವಾದೆ ಅಂತ ಬಾಳೋರು. ಇನ್ನು ರೋಡಲ್ಲಿ ಇಂಥಾ ರಂಪ ರಾಮಾಯಣ ಎಲ್ಲಾ ನೋಡಿದರೆ, ಮನೆಯಲ್ಲಿ ನನ್ನ ಉಳಿಸಾರಾ ಅಣ್ಣಾ?” ಮತ್ತಷ್ಟು ಸೊರಸೊರ, ಮಗದಷ್ಟು ಬಿಕ್ಕುವಿಕೆ.
“ಈಗ ನಾನು ಏನು ಮಾಡ್ಬೇಕಮ್ಮಾ?”
“ಅವನಿಗೆ ಹೇಳಿ ಅಣ್ಣಾ, ನನ್ನ ತಂಟೆಗೆ ಬರಬೇಡಾಂತ. ನಾನು ಆ ಥರದವಳಲ್ಲ ಅಂತ ಅವನಿಗೆ ಹೇಳಣ್ಣಾ. ಇನ್ನು ಪೊಲೀಸು ಅದೂ ಇದೂ ಅಂತ ಹೋದ್ರೆ ಅಷ್ಟೇ ನನ್ನ ಮಾನ ಪ್ರಾಣ ಎರಡೂ ಹೋಯ್ತೂಂತ ಕಣ್ಣಣ್ಣಾ.” ಜೋರು ಬಿಕ್ಕು, ಜೋರು ಅಳು, ಕಣ್ಣೀರಿನ ಮುಸಲಧಾರೆ.
ಆ ಹುಡುಗನ ಕಂಡು ಏನೋ ಮಾತಾಡುವ ಬದಲು, ನನ್ನ ಜೋಳಿಗೆಯಿಂದ ವಶೀಕರಣದ ಮಂತ್ರಬೂದಿಯನ್ನು ತೆಗೆದು ಅವಳ ಮೇಲೆರೆಚಿದೆ.
“ಅಭ್ರಕದಬ್ರ, ಹ್ರಾಂ, ಹ್ರೀಂ, ಹ್ರೂಂ, ಹೂಂ ಹೇಳು.”
ಪುಂಗಿಯ ನಾದದಲೆಯ ವಶೀಕರಣಕ್ಕೆ ಒಳಗಾದ ನಾಗಿಣಿ ಬುಸುಗುಟ್ಟತೊಡಗಿತು.
“ಅಲ್ಲಾ ಕಣಯ್ಯಾ, ನಾವು ಮಿಡ್ಲ್ ಕ್ಲಾಸು. ಆ ಈ ಮಾಲುಗಳಿಗೆ ಹೋಗಿ ಮೇಯ್ದು ಬರಕ್ಕಾಗತ್ತಾ? ಈ ಹುಡುಗ್ರು ಅದೆಲ್ಲಿಂದ ದುಡ್ಡು ತರ‍್ತಾರೋ, ನಮ್ಮನ್ನ ಕರ‍್ಕೊಂಡೋಗಿ ಕೊಡಿಸ್ತಾರೆ. ನಿನ್ನ ಪ್ರೀತಿಸ್ತೀನಿ ಅಂತ, ಮದುವೆ ಆಯ್ತೀನಿ ಅಂತ ಒಟ್ಟೊಟ್ಟಿಗೇ ಪ್ರಾಮಿಸ್ ಮಾಡಕ್ಕಾಗತ್ತಾ? ಜಾನಿ ಆ ಏರಿಯಾದಲ್ಲೇ ಸಖತ್ತಾಗೌವ್ನೆ. ಸ್ವಲ್ಪ ಕಪ್ಪು ಅಷ್ಟೇ. ಏನಾದ್ರೂ ಬಂದ್ರೆ ಕಡಕ್ಕಾಗಿ ನಿಂತ್ಕೊಂಡು ಸಹಾಯಕ್ಕೆ ಬರ‍್ತಾನೆ. ನಮ್ಮಪ್ಪನಿಗೆ ಸಾಲಕೊಟ್ಟಿರೋರು ಮನೆ ಮುಂದೆ ಬಂದು ಗಲಾಟೆ ಮಾಡಿದರೆ, ತಕ್ಷಣ ಬರ‍್ತಿದ್ದ. ಅದಕ್ಕೇ ಅವನ ಜೊತೆ ಏನೋ ಪಾಪ ಅಂತ ಸ್ವಲ್ಪ ಓಡಾಡಿಕೊಂಡಿರುತ್ತಿದ್ದೆ.
ಆಮೇಲೆ ಸಿನಿಮಾ ಟಾಕೀಸ್‌ನಲ್ಲಿ ಕೆಲಸ ಮಾಡ್ತಿದ್ದ ಸೀನಂಗೆ ಒಂದಿಷ್ಟು ಒಳ್ಳೆ ದುಡ್ಡು ಬರ‍್ತಿತ್ತು. ಜಾನಿ ಸಾಲ ಕೊಟ್ಟಿರೋರು ಬಂದು ಕಿರಿಕ್ ಮಾಡಿದ್ರೆ ಬರ‍್ತಿದ್ದ. ಆದರೆ, ಇವನು ಸಾಲಗಾರರೇ ಬರದೇ ಇರೋ ಹಾಗೆ ಕಾಸ್ ಕೊಟ್ಬಿಟ್ಟ. ಅವನು ಹೋದಾಗೆಲ್ಲಾ ಫ್ರೀಯಾಗಿ ಸಿನಿಮಾ ನೋಡಕ್ಕೆ ಟಿಕೆಟ್ ಕೊಡ್ತಿದ್ದ. ಆದರೆ ಅದೊಂದೇ ಟಾಕೀಸು, ಅದೊಂದೇ ಕ್ಯಾಂಟೀನು. ಎಷ್ಟೂಂತ ಆ ಟಾಕೀಸ್‌ಗೆ ಬರೋ ಸಿನಿಮಾಗಳನ್ನು ಮಾತ್ರ ನೋಡೋದು. ಬೇರೆ ಸಿನಿಮಾಗಳನ್ನೂ ನೋಡ್ಬೇಕಲ್ಲಾ.
ಯೋಗ್ರಾಜ್ ಬಂದ. ಅವನು ಕಾಮತ್‌ಗೆ ಕರ‍್ಕೊಂಡು ಹೋದ, ಆರ್ಯಭವನ್‌ನಲ್ಲಿ ಸ್ವೀಟ್ ಕೊಡಿಸಿದ. ಚಿಕ್ಕಪೇಟೆಯಲ್ಲಿ ಬರೀ ತುಪ್ಪದಲ್ಲೇ ಮಾಡ್ತಾರಲ್ಲಾ ಆ ಮೈಸೂರು ಪಾಕ್ ಕೊಡಿಸ್ತಿದ್ದ. ಅಭಿನಯ್‌ಗೆ ಹಿಂದಿ ಪಿಚ್ಚರ್‌ಗೆ ಕರ‍್ಕೊಂಡು ಹೋಗ್ತಿದ್ದ. ರೆಕ್ಸ್ನಲ್ಲಿ ಇಂಗ್ಲೀಷ್ ಪಿಚ್ಚರ್. ಆದರೆ ಅವನ ಮನೆಗೆ ನಾನು ಸೊಸೆಯಾಗಿ ಹೋಗಿರಕ್ಕೆ ಆಗಲ್ಲ ಸಾರ್. ಅವರ ತಂದೆ ಪೊಲೀಸ್ ಕಮಿಷನರ್. ಓಡಾಡ್ಕೊಂಡಿರ‍್ತಾನೆ ಅಂದ್ರೆ ಸುಮ್ಮನಾಗ್ತಾರೆ ಅಷ್ಟೇ. ನನಗೆ ಮೈಸೂರು ಪಾಕ್, ಫ್ರೀ ಪಿಚ್ಚರ್‌ಗಳೇ ಗಟ್ಟಿ.
ಇನ್ನು ಇವನು ಸ್ವಂತ ಬಿಜಿನಸ್ ಮಾಡ್ಕೊಂಡಿದ್ದಾನೆ. ಬೈಕ್ ಇದೆ. ನಮ್ಮ ಜಾತಿಗೇ ಸ್ವಲ್ಪ ಹತ್ತರ ಬರ‍್ತಾರೆ. ಸ್ವಂತ ಮನೆ ಇದೆ. ಮದುವೆ ಮಾಡ್ಕೊಳ್ಳಬೋದಿತ್ತು. ಆದರೆ ಈಗ ಹೊಸದಾಗಿ ಪರಿಚಯ ಆದ್ರಲ್ಲಾ, ಅವರ ಹತ್ತಿರ ಕಾರಿದೆ. ತಂದೆ ತಾಯಿ ಇಲ್ಲ. ಒಬ್ಬನೇ ಇರೋದು. ಸ್ವಂತ ಮನೆ ಎಲ್ಲಾ ಇದೆ. ಅವನನ್ನು ಮದುವೆ ಅಂತ ಆದರೆ ಲೈಫ್ ಸೆಟ್ಲ್!”
ಮ್, ಪ್ರೀತ್ಸೇ ಪ್ರೀತ್ಸೇ ಕಥೆ, ವ್ಯಾಮೋಹದ ಸೆಳೆತ, ಅಪ್ಪ ಅಮ್ಮನ ಮಾನಮರ್ಯಾದೆಯ ವಿವರಗಳು ಇಲ್ಲಿಗೇ ಮುಗಿಯಲಿಲ್ಲ. ಈ ವಶೀಕರಣ ಬೂದಿಯ ಜೋಳಿಗೆಯನ್ನು ಹಿಡಿದು ಹುಡುಗರ ಬಳಿಗೆ ಹೋದೆ!
– ಯೋಗೇಶ್ ಮಾಸ್ಟರ್, ರಂಗಕರ್ಮಿ
(ವಿಶೇಷ ಸೂಚನೆ: ಇದು ಒಂದು ಲಿಂಗದವರಿಗೆ ಸೀಮಿತವಲ್ಲ. ಅವರವರ ಮನಃಸ್ಥಿತಿಗೆ ತಕ್ಕಂತೆ ಹೇಳುವವರಿಂದ ಕತೆಗಳು ಹೆಣೆಯಲ್ಪಡುತ್ತವೆ.)
