ಬೆಂಗಳೂರು: ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ಪರಿಚಿತಗೊಂಡ ಉತ್ತರ ಪ್ರದೇಶ ಯುವಕನನ್ನು ಪ್ರೀತಿಸಿ ಪಾಕಿಸ್ತಾನದ ಗಡಿಯನ್ನು ಕಳ್ಳದಾರಿಯ ಮೂಲಕ ದಾಟಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಪಾಕ್ ಯುವತಿ ಸ್ವದೇಶಕ್ಕೆ ಹೋಗಲು ನಿರಾಕರಿಸಿದ್ದಾರೆ.
ಈ ಅಂತರರಾಷ್ಟ್ರೀಯ ಹಾಗೂ ಅಂತರ್ ಧರ್ಮೀಯ ಪ್ರೇಮ್ ಕಹಾನಿ ನಗರ ಪೊಲೀಸರಿಗೆ ಹೊಸ ತಲೆ ನೋವು ತಂದಿದೆ. ಪ್ರೀತಿಸಿದ ಯವಕನಿಗಾಗಿ ಗಡಿ ದಾಟಿ ಬಂದು ಮದುವೆಯಾಗಿ ಹೆಸರು ಬದಲಾಯಿಸಿಕೊಂಡು ಭಾರತೀಯಳಾಗಿರುವ ಯುವತಿ ನಾನು ಭಾರತದಲ್ಲಿಯೇ ಇರುವೆ. ಪತಿ ಜೊತೆಯಲ್ಲಿಯೇ ಸಾಯುವೆ ಅದಕ್ಕೆ ಅವಕಾಶ ಮಾಡಿಕೊಡುವಂತೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.
ನಾನು ಪ್ರೀತಿಸುವ ಯುವಕನಿಗಾಗಿ ದೇಶ ಬಿಟ್ಟು ಬಂದಿದ್ದೇನೆ ಆತನನ್ನು ವಿವಾಹವಾಗಿದ್ದೇನೆ ಆತನನ್ನು ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.
ಪ್ರೀತಿಗಾಗಿ ದೇಶವನ್ನೇ ಬಿಟ್ಟು ಬಂದು ಭಾರತದ ಪ್ರಜೆಯನ್ನು ಮದುವೆಯಾಗಿರುವ ಪಾಕಿಸ್ತಾನಿ ಇಕ್ರಾ ಜಿವಾನಿ, ಇಲ್ಲಿಯೇ ಇರುತ್ತೇನೆ ನಾನು ಪಾಕಿಸ್ತಾನಕ್ಕೆ ಹೋಗಲ್ಲ, ನಾವಿಬ್ಬರು ಮದುವೆಯಾಗಿದ್ದೇವೆ ಪತಿ ಮುಲಾಯಂ ಸಿಂಗ್ ಯಾದವ್ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿರುವುದು ಪೊಲೀಸರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮಹಿಳೆಯು ಭಾರತ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರೂ ಆಕೆ ಇಲ್ಲಿ ನೆಲೆಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಹೀಗಾಗಿ ಪೊಲೀಸರು ಆಕೆಯನ್ನು ಗಡಿಪಾರು ಮಾಡಲು ಬೇಕಾದ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಪೊಲೀಸರು ಮತ್ತು ಎಫ್‌ಆರ್‌ಒ ಅಧಿಕಾರಿಗಳು ಮಹಿಳೆಯು ಭಾರತಕ್ಕೆ ಬಂದಿರುವುದು ಅಕ್ರಮವಾಗಿರುವುದರಿಂದ ಆಕೆಯನ್ನು ಮರಳಿ ಪಾಕಿಸ್ತಾನಕ್ಕೆ ಕಲಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಕೇಂದ್ರ ಸರ್ಕಾರದ ಸಂಬಂಧಪಟ್ಟ ಏಜೆನ್ಸಿಗಳ ಜೊತೆ ಎಫ್‌ಆರ್ ಆರ್‌ಆರ್‌ಒ ಅಧಿಕಾರಿಗಳು ಸಂಪರ್ಕ ಮಾಡಿದ್ದಾರೆ. ಪಾಕ್ ಮಹಿಳೆಯನ್ನು ಆಕೆಯ ದೇಶಕ್ಕೆ ವಾಪಸ್ ಕಳಿಸಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗಲಿದೆ. ಹೀಗಾಗಿ ಎರಡು ದೇಶಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಆಕೆಯನ್ನ ವಾಪಸ್ ಕಳಿಸಬೇಕು. ಇದಕ್ಕೆ ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆಯನ್ನು ಎಫ್‌ಆರ್ ಆರ್ ಓ ಮತ್ತು ಪೊಲೀಸರು ನಡೆಸಿದ್ದಾರೆ.
ಮದುವೆ ಅನುಮಾನ: ಈ ನಡುವೆ ಇಕ್ರಾ ಜಿವಾನಿ ಮತ್ತು ಮುಲಾಯಂ ಸಿಂಗ್ ಮದುವೆ ಬಗ್ಗೆಯೇ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ವಿಚಾರಣೆ ವೇಳೆ ಇಬ್ಬರೂ ಮದುವೆಯಾಗಿದ್ದೇವೆ ಎಂದಿದ್ದಾರೆ. ಆದರೆ ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಫೋಟೊಗಳಿಲ್ಲ. ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ಇಲ್ಲ. ಬೇರೆ ದಾಖಲಾತಿಗಳು ಕೂಡ ಪತ್ತೆಯಿಲ್ಲ. ಹೀಗಾಗಿ ಈ ರೀತಿಯ ಮದುವೆಯನ್ನ ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.
ವಿದೇಶಿ ಮಹಿಳೆಯನ್ನು ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು ಅದ್ಯಾವುದು ಇಲ್ಲದ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಯಾದವ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸತೊಡಗಿದ್ದಾರೆ.




