ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ ಪರಿಹರಿಸಿ ಎಂದು ಅಶ್ವತ್ಥ್ ನಾರಾಯಣ್ ಅವರಲ್ಲಿ ಮೊರೆ
ಮೈಸೂರು: ಮೈಸೂರಿಗೆ ಆಗಮಿಸಿದ್ದ ನಮ್ಮ ರಾಜ್ಯದ ಉನ್ನತ ಶಿಕ್ಷಣ ಸಚಿ ಡಾ.ಅಶ್ವತ್ಥ್ ನಾರಾಯಣ ಅವರನ್ನು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭೇಟಿಯಾಗಿ ವೇತನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.
ಕೊರೋನಾದ ಸಂಕಷ್ಟದ ಸಮಯದಲ್ಲಿ ನಾವು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದೇವೆ. ಆದರೂ 6-7 ತಿಂಗಳಿಂದ ನಮಗೆ ವೇತನ ಪಾವತಿಯಾಗಿಲ್ಲ. ದಯವಿಟ್ಟು ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು. ಮನವಿಯನ್ನು ಆಲಿಸಿದ ಅಶ್ವತ್ಥ್ ನಾರಾಯಣ್, ಕಲಾವಿದರಿಗೆ ಅನ್ಯಾಯ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಅಹವಾಲು ಆಲಿಸಿದ್ದಕ್ಕೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಾಟಕ ವಿಷಯದ ಅತಿಥಿ ಉಪನ್ಯಾಸಕ ರಮೇಶ್ ಪಾಲಸಂದ್ರ, 2009ರಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಬಿಜೆಪಿ ಸರ್ಕಾರ ಈ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಈ ಸರ್ಕಾರದ ಉದ್ದೇಶ ಪ್ರದರ್ಶಕ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದಾಗಿತ್ತು. ನಿಮ್ಮ ಆಶಯದಂತೆ ಇಲ್ಲಿರುವ ಕೆಲಸಗಾರರು ಕೆಲಸ ಮಾಡಿದ್ದೇವೆ. ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ದಯವಿಟ್ಟು ಕಲಾವಿದರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಅಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿಗಳಿಗೆ ದಯವಿಟ್ಟು ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡುತ್ತೀರಿ ಎಂದು ನಂಬಿದ್ದೇವೆ ಎಂದಿದ್ದಾರೆ.




