#RejectKFC #kfcಕನ್ನಡಬೇಕು ಹ್ಯಾಷ್ ಟ್ಯಾಗ್ ಟ್ರೆಂಡಿಂಗ್

4 years ago

ಬೆಂಗಳೂರು: ಕೆ ಎಫ್ ಸಿ ಮಳಿಗೆಯಲ್ಲಿ ಕನ್ನಡ ಕಡೆಗಣನೆ ವಿರೋಧಿಸಿ ಕರವೇ ನಡೆಸಿದ #RejectKFC #kfcಕನ್ನಡಬೇಕು ಟ್ವೀಟರ್ ಅಭಿಯಾನಕ್ಕೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಟಿ20 ವಿಶ್ವಕಪ್ ನ ಭಾರತ – ಪಾಕಿಸ್ತಾನ ಪಂದ್ಯದ ನಡುವೆ ಕೂಡ ಕನ್ನಡಿಗರು #RejectKFC #kfcಕನ್ನಡಬೇಕು ಹ್ಯಾಷ್ ಟ್ಯಾಗ್ ಅಡಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಕನ್ನಡ, ಕರ್ನಾಟಕದ ರಾಜ್ಯಭಾಷೆ ಮಾತ್ರ ಅಲ್ಲ. ಆರು ಕೋಟಿಗಿಂತಲೂ ಹೆಚ್ಚು ಜನರಿಗೆ ಗೊತ್ತಿರುವ ಭಾಷೆಯೂ ಹೌದು. ಕರ್ನಾಟಕದಲ್ಲಿ ನಡೆಸುವ ಉದ್ದಿಮೆಗಳು, ಅದರಲ್ಲಿನ ಆಡಳಿತ ವ್ಯವಸ್ಥೆ ಕನ್ನಡವನ್ನು ನಿರ್ಲಕ್ಷಿಸುವ ಧೋರಣೆಯನ್ನು ಹೊಂದಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಸಮ್ಮತವೂ ಅಲ್ಲ ಎಂದಿದ್ದಾರೆ.

ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುವ ಯಾವುದೇ ಸಂಸ್ಥೆ, ಅದು ಎಷ್ಟು ದೊಡ್ಡದೇ ಆದರೂ ನಮಗೆ ಬೇಡ. ಹಣ ಮಾಡಲು ಕರ್ನಾಟಕಕ್ಕೆ ಬರುವ ಸಂಸ್ಥೆಗಳು ಕನ್ನಡಿಗರ ಭಾವನೆಗಳನ್ನು ಗೌರವಿಸಬೇಕು, ಕನ್ನಡಿಗರ ಅಸ್ಮಿತೆಯನ್ನು ಗುರುತಿಸಬೇಕು. ಇತರ ಭಾಷೆಗಳನ್ನು, ಭಾಷಿಕರನ್ನು ಕನ್ನಡಿಗರ ಮೇಲೆ ಹೇರುವ ಹುಚ್ಚಾಟ ಸಹಿಸುವುದಿಲ್ಲ.  ಕನ್ನಡ ಬಳಕೆ ಮಾಡದ ಕೆಎಫ್ ಸಿ  ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು. ಕನ್ನಡದಲ್ಲೇ ವ್ಯವಹರಿಸಬೇಕು, ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಪ್ರಸಾರ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

ಕರ್ನಾಟಕದಲ್ಲಿ ವ್ಯವಹರಿಸುವ ಯಾವುದೇ ಸಂಸ್ಥೆಯಾಗಲಿ ಕನ್ನಡವನ್ನು ಬಳಸಬೇಕು, ಕನ್ನಡದಲ್ಲಿ‌ ವ್ಯವಹರಿಸಬೇಕು. ಕನ್ನಡ ಬೇಡ ಎನ್ನುವವರು ಬೇರೆ ರಾಜ್ಯಗಳಲ್ಲಿ ಹೋಗಿ ವ್ಯವಹಾರ ನಡೆಸಲಿ. ಕನ್ನಡ ಬೇಡವೆನ್ನುವವರು ಕನ್ನಡಿಗರಿಗೂ ಬೇಡ ಎಂದಿದ್ದಾರೆ.

Leave a Reply