ಬಂಜಾರ ಕಸೂತಿ ವೃತ್ತಿ ಅಭಿವೃದ್ಧಿ ಪಡಿಸಲು 100 ಕೋಟಿ: ಸಿದ್ದರಾಮಯ್ಯ
ವಿಜಯಪುರ: ಶೋಷಿತ ಜಾತಿಗಳು ತಮಗಾಗಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಂಘಟಿತರಾಗಿವುದು ತಪ್ಪಲ್ಲ, ಅದು ಜಾತಿವಾದವೂ ಅಲ್ಲ. ಅಂತಹ ಜಾತಿ ಸಮಾವೇಶಗಳಲ್ಲಿ ಭಾಗವಹಿಸುವುದು ಜಾತಿವಾದವಾದರೆ, ಹೌದು, ನಾನು ಜಾತಿವಾದಿ, ಏನೀಗ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಿಂಧಗಿ ಉಪಚುನಾವಣೆ ಹಿನ್ನೆಲೆಯಲ್ಲಿ ನಡೆದ ಬಂಜಾರಾ ಸಮುದಾಯದ ಸಮಾವೇಶದಲ್ಲಿ ಮಾತಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲವನ್ನು ಮನ್ನಾ ಮಾಡಿದ್ದೆ. ಇದು ಜಾತಿವಾದವೇ? ಎಂದರು.
ನಮ್ಮ ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ವಾರ್ಷಿಕ 200 ಕೋಟಿ ರೂಪಾಯಿಗಳನ್ನು ನೀಡಿತ್ತು. ಈಗಿನ ಬಿಜೆಪಿ ಸರ್ಕಾರ ಬರೀ ಹತ್ತು ಕೋಟಿಗೆ ಇಳಿಸಿದೆ. ಸರ್ಕಾರವೇ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಬೇಕೆಂದು ಆದೇಶ ಹೊರಡಿಸಿದ್ದು ನಾವೆ. ಇದು ಜಾತಿವಾದವೇ? ಎಂದರು.
ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿ, ಲಕ್ಷಾಂತರ ಬಡ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಇದು ಜಾತಿವಾದವೇ? ಎಂದರು.
ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಬಂಜಾರ ಸಮುದಾಯದ ಕುಲಕಸುಬಾದ ಕಸೂತಿ ವೃತ್ತಿಯನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರೂಪಾಯಿ ಅನುದಾನ ನೀಡುತ್ತೇವೆ ಮತ್ತು ಕಸೂತಿ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುತ್ತೇವೆ. ಬಿಜೆಪಿಗೆ ತಾಕತ್ತಿದ್ದರೆ ವಿರೋಧಿಸಲಿ ಎಂದು ಅವರು ಪ್ರಶ್ನಿಸಿದರು.




