ಬೆಂಗಳೂರು: ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ವಿರುದ್ಧ ತಮ್ಮ ಸರ್ಕಾರ ಸಮರ ಸಾರಿದೆ. ಕಾಲಕಾಲಕ್ಕೆ ರಸಗೊಬ್ಬರ ಮತ್ತು ಬೀಜ ಮಾರಾಟ ಮಳಿಗೆ, ಗೋದಾಮು, ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾರಾದರೂ ಕಾನೂನು ಉಲ್ಲಂಘಿಸಿರುವುದು ಕಂಡುಬಂದರೆ ಅಂಥವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಎಚ್ಚರಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ನ ಕೆ. ಅಬ್ದುಲ್ ಜಬ್ಬರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಸಾಯನಿಕ ರಸಗೊಬ್ಬರ ಮಾರಾಟಕ್ಕೆ ಸಂಬಂಧಪಟ್ಟಂತೆ ನಾಲ್ಕು ವರ್ಷಗಳಲ್ಲಿ 26 ನಕಲಿ ರಸಗೊಬ್ಬರ ಮಾದರಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಕ್ರಮವಾಗಿ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಸಂಬಂಧಪಟ್ಟಂತೆ 69 ಪ್ರಕರಣಗಳನ್ನು ದಾಖಲಿಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಕಲಿ ಬೀಜ ಮತ್ತು ರಸಗೊಬ್ಬರ ಮಾರಾಟ ತಡೆಗಟ್ಟುವುದು, ಗುಣಮಟ್ಟದ ಬೀಜ ಹಾಗೂ ಗೊಬ್ಬರ ವಿತರಿಸಲು ರಾಜ್ಯದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಬೀಜ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇವೆ. ಇದರ ಪ್ರಕಾರ ಜಿಲ್ಲೆಯ ಜಂಟಿ ನಿರ್ದೇಶಕರು, ಉಪಕೃಷಿ ನಿರ್ದೇಶಕರು, ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು, ಕೃಷಿ ಪದವಿ ಹೊಂದಿರುವ ಸಹಾಯಕ ಕೃಷಿ ಅಧಿಕಾರಿಗಳನ್ನು ಬೀಜ ಹಾಗೂ ರಸಗೊಬ್ಬರ ಪರಿವೀಕ್ಷಕರನ್ನಾಗಿ ನೇಮಕ ಮಾಡಲಾಗಿರುತ್ತದೆ ಎಂದರು.
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಾವಯವ ಇಂಗಾಲ ಹೆಚ್ಚಿಸುವ ಅಭಿಯಾನ ಮತ್ತು ಆಹಾರ ಪೌಷ್ಠಿಕ ಭದ್ರತೆ ಯೋಜನೆಯಡಿ ಹಸಿರೆಲೆ ಗೊಬ್ಬರ ಬೀಜಗಳು, ಜಿಪ್ಸಂ, ಕೃಷಿ ಸುಣ್ಣ, ಜೈವಿಕ ಗೊಬ್ಬರ, ಲಘು ಪೋಷಕಾಂಶಗಳು, ಸಾವಯವ ಗೊಬ್ಬರ, ಸಿಟಿ ಕ್ಯಾಂಪೋಸ್ಟ್, ಖಾದ್ಯವಲ್ಲದ ಎಣ್ಣೆ ರಹಿತ ಹಿಂಡಿ ಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.




