ವಿಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧ: ಸಿದ್ದರಾಮಯ್ಯ

2 years ago

#Govt #ready #answer #questions #opposition #Siddaramaiah

ಹಾವೇರಿ: ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದರು.

ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿಗೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದರು.

ಬರಪರಿಹಾರದಲ್ಲಿ ರೈತರ ಪಾಲಿನ ಮೊತ್ತದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ನಿಗದಿಯಾಗಿರುವ ಪರಿಹಾರ ಮೊತ್ತವನ್ನು ನೀಡಲಾಗುವುದು. ಹಾವೇರಿ ಜಿಲ್ಲೆಗೆ ಕುಡಿಯುವ ನೀರು, ಮೇವು, ಉದ್ಯೋಗ ಸೇರಿದಂತೆ ವಿವಿಧ ಕಾರ್ಯಗಳಿಗೆ 226 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ಬರಗಾಲದ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವುದಲ್ಲದೇ, ಕುಡಿಯುವ ನೀರಿಗೆ ಕೊರತೆ ಬರದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಎನ್ ಆರ್ ಜಿ ಎಸ್ ಅಡಿ ಬರಗಾಲದ ಪರಿಸ್ಥಿತಿಯಲ್ಲಿ 150 ಮಾನವದಿನಗಳ ಉದ್ಯೋಗ ನೀಡುವ ಕೇಂದ್ರದ ನಿಯಮವಿದೆ. ಈ ಕ್ರಮಕ್ಕೆ ಕೇಂದ್ರ ಸರ್ಕಾರದವರು ಅನುಮತಿ ನೀಡಬೇಕಿದ್ದು, ಇದುವೆರಗೆ ಈ ಅನುಮತಿ ನೀಡಿಲ್ಲ ಎಂದರು.

ಇಡೀ ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲ ಪರಿಸ್ಥಿತಿಯಿದೆ. ರಾಜ್ಯಕ್ಕೆ ಬರ ಅಧ್ಯಯನಕ್ಕಾಗಿ ಕೇಂದ್ರ ತಂಡ ಪರಿಶೀಲಿಸಿದೆ. ಆದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ದುಡ್ಡನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತಿಲ್ಲ ಎಂದರು.

ಕುಮಾರಸ್ವಾಮಿಯವರು ವಕೀಲರಾಗಿದ್ದ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರ ತನಿಖೆಯ ಆದೇಶವನ್ನು ವಾಪಸ್ಸು ಪಡೆದಿರುವುದು ಸರಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ವಕೀಲನಾಗಿರುವುದರಿಂದ, ಹಿಂದಿನ ತನಿಖಾ ಆದೇಶ ಕಾನೂನು ರೀತ್ಯ ಇರಲಿಲ್ಲವೆಂದು ವಾಪಸ್ಸು ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯವರಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಯ ಬಗ್ಗೆ ಸಮ್ಮತಿಸುತ್ತಿದ್ದೆ ಎಂದರು.

Leave a Reply