ಸರ್ಕಾರದಿಂದ ಗೃಹಮಂಡಳಿ, ಕೊಳಗೇರಿ ಅಭಿವೃದ್ಧಿ ಮಂಡಳಿ, ಬಿಡಿಎ ಮುಂತಾದ ಸಂಸ್ಥೆಗಳ ಮೂಲಕ ಬಡವರಿಗಾಗಿ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ಕಟ್ಟಿಕೊಡುತ್ತೀರಿ. ಈ ಮನೆಗಳು ನಿಜಕ್ಕೂ ವಾಸಮಾಡಲು ಯೋಗ್ಯವಾಗಿದೆಯೇ?
ಒಂದು ಸಣ್ಣ ಕುಟುಂಬ ಇದರಲ್ಲಿ ನೆಮ್ಮದಿಯಿಂದ, ಗೌರವಯುತವಾಗಿ ಬದುಕಲು ಸಾಧ್ಯವೇ ಎಂಬ ವಿಚಾರವನ್ನು ಯಾರು ಸಹ ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ ಎನ್ನುವುದಕ್ಕೆ ಇವರು ನಿರ್ಮಿಸುವ ಮನೆಗಳ ವಿಸ್ತೀರ್ಣವೇ ಸಾಕ್ಷಿಯಾಗಿರುತ್ತದೆ.
ಒಂದು ಸಣ್ಣ ಕುಟುಂಬ ಗಂಡ, ಹೆಂಡತಿ, ಒಂದೆರಡು ಮಕ್ಕಳ ಜೊತೆ ಮೂರು ಚದರ, ಮೂರುವರೆ ಚದರ ಅಳತೆಯ ಮನೆಗಳಲ್ಲಿ ವಾಸ ಮಾಡಲು ಹೇಗೆ ತಾನೇ ಸಾಧ್ಯ. ಅವರು ಸ್ವಲ್ಪ ಮಟ್ಟಿಗಾದರೂ ಸಂತೋಷದಿಂದ ಬದುಕಬೇಕಲ್ಲವೇ?
ಸಾಮಾನ್ಯವಾಗಿ ಆರು ಚದರ ಅಡಿ ಮನೆ ಅಥವಾ 60 ಅಡಿ ವಿಸ್ತೀರ್ಣಕ್ಕಿಂತ ಕಡಿಮೆ ಇರುವ ನಿವೇಶನಗಳಿಗೆ, ನಕ್ಷೆಗಳಿಗೆ ಯಾವುದೇ ಸಂಸ್ಥೆಯವರು ಅನುಮತಿಯನ್ನು ನೀಡುವುದಿಲ್ಲ. ಆದರೆ ಸರ್ಕಾರದ ಅಧಿಕೃತ ಸಂಸ್ಥೆಗಳು ಚಿಕ್ಕ ಚಿಕ್ಕ ಮನೆಗಳನ್ನು ನಿರ್ಮಿಸಿ, ಜನರಿಗೆ ಕೊಡುವುದು ಯಾವ ನ್ಯಾಯವಾಗುತ್ತದೆ?
ಈ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಂಚಿಕೆಯಾಗುವ ಮನೆಗಳಲ್ಲಿ ಬಹಳಷ್ಟು ಮಂದಿ ವಾಸಮಾಡುತ್ತಿಲ್ಲ. ಅವುಗಳು ಪಾಳು ಬಿದ್ದಿದೆ. ಆದುದರಿಂದ ರಾಜ್ಯ ಸರ್ಕಾರ ಇನ್ನು ಮುಂದೆ ಯಾವುದೇ ಯೋಜನೆ ಅಡಿಯಲ್ಲಿ ವಸತಿ ಸೌಲಭ್ಯವನ್ನು ವಿವಿಧ ಯೋಜನೆಯಡಿಯಲ್ಲಿ ಕಲ್ಪಿಸಿಕೊಡುವ ಸಂದರ್ಭದಲ್ಲಿ ಕನಿಷ್ಠ ಆರು ಚದರ ಅಥವಾ 600 ಅಡಿ ಅಳತೆಯ ನಿವೇಶನ ಅಥವಾ ಮನೆಗಳನ್ನು ಕೊಡುವಂತಹ ತೀರ್ಮಾನಕ್ಕೆ ಬನ್ನಿ. ಇದರಿಂದ ಆ ಮನೆಗಳಲ್ಲಿ ವಾಸಮಾಡುವ ಕುಟುಂಬದವರು ವಿಶಾಲವಾದ ಮನೆಯಲ್ಲಿ ಗಾಳಿ, ಬೆಳಕುಗಳ ಸೌಲಭ್ಯಗಳ ಅಡಿಯಲ್ಲಿ ಎಲ್ಲಾ ನಾಗರಿಕರಂತೆ ಗೌರವದಿಂದ ಬದುಕವಂತಾಗಲಿ ಎಂದು ಸರ್ಕಾರವನ್ನು ಕೋರುತ್ತೇನೆ.
– ಕೆ.ಎಸ್. ನಾಗರಾಜ್, ಬೆಂಗಳೂರು



