ಒಮ್ಮೆಯಾದರೂ ಯೋಚನೆ ಮಾಡಬೇಕಲ್ಲ :
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕೈದು ಜನಪರ ಯೋಜನೆಗಳನ್ನು ಘೋಷಣೆ ಮಾಡಿದೆ.
ಈ ಘೋಷಣೆಯ ತರುವಾಯ ಎಂದಿನಂತೆಯೇ ನಮ್ಮ ನಕಲಿ ದೇಶಭಕ್ತರು ಹಾಗೂ 2000 ರೂಪಾಯಿ ನೋಟಿನಲ್ಲಿ ನ್ಯಾನೋ ಚಿಪ್ ಇದೆ ಎಂದು ಹೇಳಿದ್ದ ನಕಲಿ ಆರ್ಥಿಕ ತಜ್ಞರ ಗುಂಪು ಇದರಿಂದ ರಾಜ್ಯ ದಿವಾಳಿ ಆಗುತ್ತದೆ, ಜನರು ಸೋಮಾರಿಗಳಾಗುತ್ತಾರೆ ಎಂದು ತಮ್ಮ ಹಳೆಯ ತರಲೆ ನುಡಿಗಳನ್ನೇ ಮುಂದುವರೆಸಿದರು
ಈಗ ಸುಮ್ಮನೇ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಘೋಷಣೆಯನ್ನು ತೆಗೆದುಕೊಳ್ಳೋಣ,
ನಮಗೆಲ್ಲ ತಿಳಿದಿರುವಂತೆ ಮತ್ತು ದೇಶದ ಆರ್ಥಿಕ ತಜ್ಞರ ಅಭಿಪ್ರಾಯದಂತೆ ಉದ್ಯೋಗಿ ಮಹಿಳೆಯರು ಮತ್ತು ಗೃಹಿಣಿಯರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಕಾರಣರಾಗಿದ್ದು ಅವರಿಗೆ ಸಿಗುತ್ತಿರುವ ಪೂರಕ ಸೌಲಭ್ಯಗಳು ಕಡಿಮೆ ಎಂಬ ಮಾತಿದೆ. ಈ ಹಿನ್ನಲೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಒಂದು ಕುಟುಂಬವನ್ನು ನಡೆಸಿ, ಅಷ್ಟೋ ಇಷ್ಟೋ ಉಳಿತಾಯ ಮಾಡಿ, ಮಕ್ಕಳ ಓದು, ಆರೋಗ್ಯ ಹಾಗೂ ಅವರ ಭವಿಷ್ಯಕ್ಕೆ ಹಣ ಕೂಡಿಸುವ ಮಹಿಳೆಯರಿಗೆ ಈ ಉಚಿತ ಬಸ್ ಪ್ರಯಾಣವು ವರದಾನವಾಗಲಿದೆ.
ಅದರಲ್ಲೂ ಮುಖ್ಯವಾಗಿ ಸ್ಥಳೀಯ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ತೆರಳುವ ಹೆಣ್ಣುಮಕ್ಕಳಿಗೆ ಇದು ಹೆಚ್ಚು ಸಹಾಯ ಮಾಡುತ್ತದೆ.
ಅಂದರೆ 20-25 ಕಿಲೋಮೀಟರ್ ದೂರದ ಹಳ್ಳಿಯಿಂದ ಮೈಸೂರಿನ ಜಿಲ್ಲಾ ಕೇಂದ್ರಕ್ಕೆ ಕೆಲಸಕ್ಕೆ ಮತ್ತು ಓದಲು ಬರುವ ಹೆಣ್ಣು ಮಕ್ಕಳಿಗೆ ಇದು ನೆರವಾಗುತ್ತದೆ.
ಈ ಮಾದರಿಯು ಆಯಾ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟಕ್ಕೂ ಸಹ ಅನ್ವಯವಾಗುತ್ತದೆ ಎಂಬುದನ್ನು ನಾವು ಗಮನಿಸಬೇಕು.
ಇದು ಅಷ್ಟೇನೂ ಹೊರೆಯಲ್ಲದ ಯೋಜನೆಯಾಗಿದ್ದು ಇದರಿಂದ ಮಹಿಳೆಯರ ಈಗಿರುವ ಆರ್ಥಿಕ ಉತ್ಪಾದನಾ ಸಾಮರ್ಥ್ಯವು ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಕಡಿಮೆ ಸಂಬಳಕ್ಕೆ ದುಡಿಯುವ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಮಹತ್ವ ನಿಜಕ್ಕೂ ತಿಳಿದಿದೆ
ಇನ್ನೂ ಕೆಲವರು ರಾಜ್ಯಾದ್ಯಂತ ನಾವು ಇನ್ನು ಮನಸ್ಸಿಗೆ ಬಂದಂತೆ ಪ್ರಯಾಣ ಮಾಡಬಹುದು ಎನ್ನುತ್ತಿದ್ದರೆ ಮತ್ತೆ ಕೆಲವರು ತಮ್ಮ ಪಕ್ಷ ಸಂಘಟನೆ ಮಾಡಲು ಕಾಂಗ್ರೆಸ್ ಯೋಜನೆಯನ್ನು ಬಳಸುತ್ತೇವೆ ಎಂಬ ವಿವೇಕ ರಹಿತವಾದ ಮಾತನ್ನು ಆಡುತ್ತಿದ್ದಾರೆ.
ಆದರೆ ಕಾಂಗ್ರೆಸ್ ನ ಈ ಉಚಿತ ಬಸ್ ಪ್ರಯಾಣ ಎಂಬ ಘೋಷಣೆಯು ತಾಲ್ಲೂಕು, ಜಿಲ್ಲೆ ಹಾಗೂ ಮಹಾನಗರಗಳಲ್ಲು ಕಷ್ಟಪಟ್ಟು ದುಡಿಯುವ ಫ್ಯಾಕ್ಟರಿ ಕಾರ್ಮಿಕರು, ಗಾರ್ಮೆಂಟ್ ಕೆಲಸಗಾರರು ಹಾಗೂ ಇನ್ನಿತರೆ ಸಣ್ಣ ಪುಟ್ಟ ಕೆಲಸ ಮಾಡುವ ಹೆಣ್ಣು ಮಕ್ಕಳ ದುಡಿಮೆಗೆ ಹಾಗೂ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.
ಹೀಗಾಗಿ ಕೆಲವು ಸಣ್ಣಪುಟ್ಟ ನಿಯಂತ್ರಣದೊಂದಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಯೋಜನೆಗಳು ಹತ್ತಾರು ಕಾರಣಕ್ಕೆ ಮಹತ್ವ ಪಡೆದಿದೆ.
ಇಷ್ಟು ಹೇಳಿದ ಮೇಲೂ ರಾಜ್ಯದ ಸಾಲ ಹೆಚ್ಚಾಗುತ್ತದೆ ಎಂದು ಕೋಮುವಾದಿಗಳು ವಾದ ಮಾಡಿದರೆ, ” 2018 ರಲ್ಲಿ 165 ಜನಪರ ಯೋಜನೆಗಳೊಂದಿಗೆ 2.5 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು, ಬಿಜೆಪಿಗರ ಅವಧಿಯಲ್ಲಿ ಯಾವ ಯೋಜನೆಗಳೂ ಇಲ್ಲದೇ 5.5 ಲಕ್ಷ ಕೋಟಿಗೆ ಏರಿದ್ದು ಯಾಕೆ?” ಎಂದು ಎಲ್ಲರೂ ಕೇಳಬೇಕು. ಆಗ ಅವರು ತಮ್ಮ ಬಾಲ ಮುದುರಿಕೊಂಡು ಹೋಗುತ್ತಾರೆ.
ಡಾ ಎಚ್ ಸಿ ಮಹದೇವಪ್ಪ




