ಸಿ ಎಂ ಆಯ್ಕೆ ಕಸರತ್ತು ಮುಂದುವರಿಸಿದ ಕಾಂಗ್ರೆಸ್ ಹೈಕಮಾಂಡ್

3 years ago

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ನಡೆ ಇರಿಸಲು ತೀರ್ಮಾನಿಸಿದೆ. ಸಿಎಂ ಹುದ್ದೆಯ ಆಕಾಂಕ್ಷಿಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದು ಸರಣಿ ಸಭೆಗಳನ್ನು ನಡೆಸುತ್ತಿದೆ.

ಕಳೆದ ಮೂರು ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿರುವ ಕಸರತ್ತು ಅಂತಿಮ ಘಟ್ಟಕ್ಕೆ ತಲುಪಿದ್ದು, ಯಾವುದೇ ಸಮಯದಲ್ಲಿ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆಗಳಿವೆ.

ಕಾಂಗ್ರೆಸ್‍ನ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ವರಿಷ್ಠ ಮಂಡಳಿ ನಾಯಕ ರಾಹುಲ್‍ಗಾಂಧಿ ಅವರು ಶಿಮ್ಲಾ ಪ್ರವಾಸದಿಂದ ದೆಹಲಿಗೆ ಮರಳಲಿದ್ದು ಒಂದು ಸುತ್ತಿನ ಸಭೆ ನಡೆಸಿದರು.

ಶಾಸಕರ ಅಭಿಪ್ರಾಯ ಪಡೆದಿರುವ ಸುಶೀಲ್ ಕುಮಾರ್ ಶಿಂದೆ ನೇತೃತ್ವದ ವೀಕ್ಷಕರ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿಯನ್ನು ಸಲ್ಲಿಸಿದೆ.

ಸಿದ್ದರಾಮಯ್ಯ ನಿನ್ನೆಯೇ ದೆಹಲಿಗೆ ತಲುಪಿದ್ದು, ಹಿರಿಯ ನಾಯಕರುಗಳನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಅವರ ಜತೆ ಹಲವಾರು ಶಾಸಕರು ದೆಹಲಿಗೆ ತೆರಳಿದ್ದು, ಅಲ್ಲಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ.

ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರು ಕೂಡ ದೆಹಲಿಗೆ ಆಗಮಿಸಿದ್ದಾರೆ ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಬೆನ್ನಿಗೆ ಚೂರಿ ಹಾಕುವುದಿಲ್ಲ, ಬ್ಲಾಕ್‌ಮೇಲ್‌ ಮಾಡುವುದಿಲ್ಲ ಎಂದು ಹೇಳಿದರು.

‘ನಮ್ಮದು ಒಗ್ಗಟ್ಟಿನ ಮನೆ. ನಮ್ಮ ಸಂಖ್ಯೆ 135. ಯಾರೊಬ್ಬರನ್ನೂ ಒಡೆಯುವ ಕೆಲಸ ನಾನು ಮಾಡುವುದಿಲ್ಲ. ಇದು ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಜವಾಬ್ದಾರಿಯುತ ನಾಯಕ. ನಾನು ಬೆನ್ನಿಗೆ ಚೂರಿ ಹಾಕುವುದಿಲ್ಲ. ಬ್ಲಾಕ್‌ಮೇಲ್‌ ಮಾಡುವುದಿಲ್ಲ’ ಎಂದು ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. 

ಇದಕ್ಕೂ ಮೊದಲು, ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್‌, ‘ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವರು‌. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ‘ ಎಂದು ಭಾವನಾತ್ಮಕವಾಗಿ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು (ಮಂಗಳವಾರ) ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವಹಿಸಲೆಂದು ಶಿವಕುಮಾರ್‌ ದೆಹಲಿಗೆ ತೆರಳಿದರು.

‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಒಬ್ಬನೇ ದೆಹಲಿಗೆ ಬರುವಂತೆ ಹೇಳಿದ್ದಾರೆ. ಹೀಗಾಗಿ ನಾನು ಒಬ್ಬನೇ ಹೋಗುತ್ತಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಮಕ್ಕಳಿಗೆ ಏನು ನೀಡಬೇಕು ಎಂಬುದು ದೇವರು ಮತ್ತು ತಾಯಿಗೆ ಗೊತ್ತಿರುತ್ತದೆ. ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ’ ಎಂದೂ ಹೇಳಿದರು.

Leave a Reply