ತೆಲಂಗಾಣದಲ್ಲಿ ಉಚಿತ ವಿದ್ಯುತ್, 500 ರೂ.ಗೆ ಸಿಲಿಂಡರ್ ಕಾಂಗ್ರೆಸ್ ಗ್ಯಾರಂಟಿ ಜಾರಿ

2 years ago

ಹೈದರಾಬಾದ್: ತೆಲಂಗಾಣ ತಲ್ಲಿ ಪ್ರತಿಮೆ ಮತ್ತು ರಾಜ್ಯ ಲಾಂಛನದಲ್ಲಿ ಬದಲಾವಣೆ ಮಾಡುವುದು ಸೇರಿದಂತೆ ಉಚಿತ ವಿದ್ಯುತ್ ಮತ್ತು 500 ರೂ.ಗಳಿಗೆ ಎಲ್‌ಪಿಜಿ ಸಿಲಿಂಡರ್‌ ನೀಡುವ ಮಹತ್ವದ ಯೋಜನೆಗಳು ಸೇರಿದಂತೆ ಹಲವು ನಿರ್ಧಾರಗಳನ್ನು ಸಿಎಂ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ರಾಜ್ಯ ಸಚಿವ ಸಂಪುಟ ಭಾನುವಾರ ಕೈಗೊಂಡಿದೆ. ಜೊತೆಗೆ, ರಾಜ್ಯ ವಾಹನ ನೋಂದಣಿಯಲ್ಲಿ ಇದುವರೆಗೆ ಬಳಕೆಯಲ್ಲಿದ್ದ ಟಿಎಸ್‌ ಬದಲಿಗೆ ಟಿಜಿಗೆ ಬದಲಾಯಿಸಲು ನಿರ್ಧರಿಸಲಾಗಿದೆ. ಜೊತೆಗೆ, ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯ ಭರವಸೆಯಾದ ಜಾತಿ ಗಣತಿಯ ಕ್ರಮಕ್ಕೆ ಸಹ ಅನುಮೋದನೆ ಪಡೆಯಲಾಗಿದೆ.

ನಾಲ್ಕು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಐಟಿ ಸಚಿವ ಡಿ ಶ್ರೀಧರ್ ಬಾಬು ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಆರು ಗ್ಯಾರಂಟಿ ಯೋಜನೆಗಳ ಪೈಕಿ ಇನ್ನೂ ಎರಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕ್ಯಾಬಿನೆಟ್ ನಿರ್ಧರಿಸಿದೆ. ವಿಧಾನಸಭೆ ಅಧಿವೇಶನದ ಉಳಿದವುಗಳ ಕುರಿತು ನಿರ್ಧರಿಸಲಾಗುವುದು ಎಂದರು.

ನಾವು ಈಗಾಗಲೇ ಎರಡು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಶೀಘ್ರದಲ್ಲೇ ಇನ್ನೆರಡು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು. ಯೋಜನೆ ಅನುಷ್ಠಾನದ ಕುರಿತು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.

ಹಿಂದಿನ ಸರ್ಕಾರ ನಿಯಮಾವಳಿಗಳಿಗೆ ವಿರುದ್ಧವಾಗಿ ಹಲವು ಆಡಳಿತಾತ್ಮಕ ನಿರ್ಧಾರಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿದ ಶ್ರೀನಿವಾಸ್ ರೆಡ್ಡಿ, ಕೇಂದ್ರ ಟಿಜಿಗೆ ವಾಹನ ನೋಂದಣಿಗೆ ಗೆಜೆಟ್ ಹೊರಡಿಸಿತ್ತು. ಆದರೆ ಹಿಂದಿನ ಸರ್ಕಾರ ರಾಜಕೀಯ ಕಾರಣಕ್ಕಾಗಿ ಅದನ್ನು ಟಿಎಸ್ ಎಂದು ಬದಲಾಯಿಸಿತು. ಆದ್ದರಿಂದ ಇದನ್ನು ಟಿಜಿ ಎಂದು ಬದಲಾಯಿಸಲು ಸಂಪುಟ ನಿರ್ಧರಿಸಿದೆ ಎಂದರು.

ರಾಜ್ಯದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ತೆಲಂಗಾಣ ತಲ್ಲಿ ಪ್ರತಿಮೆಯಲ್ಲಿ ಬದಲಾವಣೆಗಳನ್ನು ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಮಾಡಬೇಕಾದ ಬದಲಾವಣೆಗಳ ಬಗ್ಗೆ ತಜ್ಞರು ಮತ್ತು ರಾಜ್ಯದ ಜನರ ಅಭಿಪ್ರಾಯಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.

ರಾಜ್ಯ ಲಾಂಛನ ತೆಲಂಗಾಣ ಜನತೆಯ ನಿಜವಾದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು. ಕಾಂಗ್ರೆಸ್ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಬಡವರಿಗೆ ಕಲ್ಯಾಣ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಒದಗಿಸಲು ಜಾತಿ ಗಣತಿ ನಡೆಸಲು ನಿರ್ಧರಿಸಿದೆ ಎಂದರು.

ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಕವಿ ಮತ್ತು ಸಾಹಿತಿ ಅಂದೇ ಶ್ರೀ ಅವರ “ಜಯ ಜಯ ಹೇ ತೆಲಂಗಾಣ, ಜನನಿ ಜಯ ಕೇತನಂ” ಗೀತೆಯನ್ನು ನಾಡಗೀತೆಯನ್ನಾಗಿ ಮಾಡಲು ಸಂಪುಟ ನಿರ್ಧರಿಸಿದೆ ಎಂದರು.

ವಿಕಾರಾಬಾದ್ ಮತ್ತು ನಾರಾಯಣಪೇಟೆ ಜಿಲ್ಲೆಗಳನ್ನು ಒಳಗೊಂಡಿರುವ ಕೊಡಂಗಲ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೊಡಂಗಲ್ ಕೇಂದ್ರ ಕಛೇರಿಯಾಗಿ ಕೊಡಂಗಲ್ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಶ್ರೀಧರ್ ಬಾಬು ಹೇಳಿದರು. ಜೊತೆಗೆ 65 ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಸಂಪುಟ ನಿರ್ಧರಿಸಿದೆ. ಐಟಿಐ ಕಾಲೇಜುಗಳು ಅಡ್ವಾನ್ಸ್ ಟೆಕ್ನಾಲಜಿ ಸೆಂಟರ್‌ಗಳಾಗಿ ಪರಿವರ್ತಿಸಿದರೆ ಯುವಕರಿಗೆ ಉದ್ಯೋಗಗಳನ್ನು ಪಡೆಯಲು ಸಹಾಯಕವಾಗುತ್ತವೆ ಎಂದರು.

ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಮಂಡಲದ ಪ್ರೇಮಾವತಿಪೇಟ್ ಮತ್ತು ಬುದ್ವೇಲ್ ಗ್ರಾಮಗಳಲ್ಲಿ ನೂತನ ಹೈಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 100 ಎಕರೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಧರಣಿ ಉಪಸಮಿತಿ ವರದಿಯನ್ನು ಶೀಘ್ರದಲ್ಲೇ ಮಂಡಿಸಿ ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

Leave a Reply