ರಾಂಚಿ: ಜಾರ್ಖಂಡ್ ಸಿಎಂ ಚಂಪೈ ಸೊರೇನ್ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾರ್ಖಂಡ್ ನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಆಗಿದ್ದ ಹೇಮಂತ್ ಸೊರೇನ್ ಹೆಸರು ಕೇಳಿಬಂದಿದ್ದರಿಂದ ರಾಜೀನಾಮೆ ನೀಡಿದ್ದರು. ನಂತರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್ ಹಕ್ಕು ಮಂಡಿಸಿದ ನಂತರ ಕೂಡ ಪ್ರಮಾಣ ವಚನ ಬೋಧನೆಗೆ ರಾಜ್ಯಪಾಲರು ವಿಳಂಬ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರದ ಭೀತಿಯನ್ನು ಮೈತ್ರಿಕೂಟ ಎದುರಿಸಿತ್ತು. ಕಡೆಗೆ ಫೆಬ್ರುವರಿ 2ರಂದು ಜಾರ್ಖಂಡ್ ಸಿಎಂ ಆಗಿ ಚಂಪೈ ಸೊರೇನ್ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಇಂದು ಸದನದಲ್ಲಿ ವಿಶ್ವಾಸ ಮತ ಯಾಚಿಸಲಾಯಿತು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತದ ಪರವಾಗಿ 47 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ 29 ಮತಗಳು ಚಲಾವಣೆಯಾದವು. ಪಕ್ಷೇತರ ಶಾಸಕ ಸರಯೂ ರಾಯ್ ಮತದಾನದಿಂದ ದೂರ ಉಳಿದರು. ಮತದಾನದದ ವೇಳೆಯಲ್ಲಿ ಸದನದಲ್ಲಿ 77 ಶಾಸಕರು ಹಾಜರಿದ್ದರು.
ಜಾರ್ಖಂಡ್ ಆಡಳಿತಾರೂಢ ಮೈತ್ರಿಕೂಟದಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳಿವೆ. ಸಿಪಿಐಎಂಎಲ್(ಎಲ್) ಪಕ್ಷದ ಏಕೈಕ ಶಾಸಕ ಕೂಡ ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ. ವಿರೋಧ ಪಕ್ಷ ಬಿಜೆಪಿಯ 26, ಎಜೆಎಸ್‌ಯು ಪಕ್ಷದ 3 ಶಾಸಕರು ಸದನಕ್ಕೆ ಆಯ್ಕೆಯಾಗಿದ್ದಾರೆ.




