ಬೆಂಗಳೂರು: ರಾಜ್ಯದಲ್ಲಿ ಅವಧಿಗೆ ಮುನ್ನವೇ ಆರಂಭಗೊಂಡಿರುವ ಮುಂಗಾರು ಅಬ್ಬರಿಸಿದೆ. ಈ ಬಾರಿ ಮಳೆಗೆ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ಮಳೆ ಸಂಬಂಧಿ ಹಾನಿಗಳೂ ಕೂಡ ಹೆಚ್ಚಾಗಿದ್ದು ತಡರಾತ್ರಿಯಿಂದ ಇಲ್ಲಿಯವರೆಗೆ ನಾಲ್ವರು ಬಲಿಯಾಗಿದ್ದಾರೆ.
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ಸುತ್ತಮುತ್ತ ಗುಡ್ಡ ಕುಸಿದು ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಜೀವಹಾನಿಯಾಗಿವೆ.
ಮಂಗಳೂರು ಸಮೀಪದ ಮೊಂಟೆಪದವು ಗ್ರಾಮದಲ್ಲಿ ಕುಸಿದ ಮನೆಯ ಅವಶೇಷಗಳಡಿ ಸಿಲುಕಿ ತಾಯಿ-ಮಗು ಸುಮಾರು 8 ಗಂಟೆ ಜೀವನ್ಮರಣದೊಂದಿಗೆ ಹೋರಾಡಿದ ಘಟನೆ ವರದಿಯಾಗಿದೆ.
ಕೊಣಾಜೆಯ ಮಂಜನಾಡಿ ಗ್ರಾಮದ ಮೊಂಟೆಪದವು ಇತ್ತಲಕೋಡಿ ಕೊಪ್ಪಲ ಗುಡ್ಡ ಕುಸಿದು ವಾಸದ ಮನೆ ಮೇಲೆ ಬಿದ್ದಿದೆ. ಮನೆಯಲ್ಲಿ ಕಾಂತಪ್ಪ, ಪತ್ನಿ ಪ್ರೇಮಪೂಜಾರಿ, ಸೀತಾರಾಮ ಪೂಜಾರಿ, ಇವರ ಪತ್ನಿ ಅಶ್ವಿನಿ, ಮಕ್ಕಳಾದ ಪುತ್ರ ಆರ್ಯನ್, ಪುತ್ರಿ ಅರುಷಾ ಇದ್ದರು. ಬೆಳಗಿನಜಾವ 4 ಗಂಟೆ ಸುಮಾರಿಗೆ ಗುಡ್ಡ ಕುಸಿದು ಎರಡು ಬೃಹತ್ ಮರಗಳ ಸಮೇತ ಮನೆಯ ಮೇಲೆ ಬಿದ್ದಿದೆ.
ಗುಡ್ಡ ಕುಸಿದು ಮನೆ ಮೇಲೆ ಬೀಳುವುದನ್ನು ಗ್ರಹಿಸಿದ ಮನೆಯ ಯಜಮಾನ ಕಾಂತಪ್ಪ ಹೊರಗೆ ಓಡಿಬರುವ ಹಂತದಲ್ಲಿ ಅವಶೇಷಗಳಡಿ ಸಿಲುಕಿದ್ದಾರೆ. ಅವರನ್ನು ಸ್ಥಳೀಯರು ಪತ್ತೆಹಚ್ಚಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಕಾಂತಪ್ಪ ಅವರ ಪತ್ನಿ ಪ್ರೇಮ ಪೂಜಾರಿ ಅವಶೇಷಗಳಡಿ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನೊಬ್ಬ ಮಗಳು ಅಶ್ವಿನಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ವೇಳೆ ಅವರ ಮೇಲೆ ಮನೆ ಕುಸಿದಿದ್ದು, ಮೇಲಾವಣಿಯ ಬೀಮ್ ಅಶ್ವಿನಿಯವರ ಸೊಂಟದ ಭಾಗದ ಮೇಲೆ ಅಪ್ಪಳಿಸಿದೆ. ಹೀಗಾಗಿ ಆಕೆ ಹೊರಬರಲಾಗದೆ ಸಿಲುಕಿಕೊಂಡಿದ್ದರು. ಮನೆ ಕುಸಿಯುವ ವೇಳೆಯಲ್ಲಿ ಮಕ್ಕಳಿಗೆ ಹಾನಿಯಾಗದಂತೆ ತನ್ನ ದೇಹ ಮತ್ತು ಕೈಗಳನ್ನು ಅಡ್ಡಲಾಗಿ ಇಟ್ಟು ಜೀವ ಉಳಿಸುವ ಪ್ರಯತ್ನ ಮಾಡಿ ಮಾತೃ ಹೃದಯ ಪ್ರದರ್ಶಿಸಿದ್ದಾರೆ. ಮುಂಜಾನೆ ಸ್ಥಳೀಯರು ಬಂದು ನೋಡಿದಾಗ ಮೂರು ವರ್ಷದ ಆರ್ಯನ್ ಗೆ ಯಾವುದೇ ಚಲನೆ ಇರಲಿಲ್ಲ. ತಾಯಿಯ ಮತ್ತೊಂದು ಮಗ್ಗುಲಿನಲ್ಲಿದ್ದ ಮಗು ಅರುಷಾ ಕೈಗಳನ್ನು ಅಲುಗಾಡಿಸುತ್ತಿತ್ತು. ಆ ಮಗುವನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಲಿಯಾಗಿದೆ.
ಉಳ್ಳಾಲ ಸುತ್ತಮುತ್ತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗುಡ್ಡ ಕುಸಿತಕ್ಕೆ ಎರಡು ಮನೆಗಳು ಸಿಲುಕಿವೆ. ದೇರಳಕಟ್ಟೆಯ ಕಾನಕೆರೆಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದ್ದರಿಂದ ನೌಷಾದ್ ಅವರ ಪುತ್ರಿ ನಹೀಮಾ (7) ಮೃತಪಟ್ಟಿದ್ದಾಳೆ.
ಭೂಕುಸಿತದ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ರಾತ್ರಿ ಬಿದ್ದ ಮಳೆಯಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಸಿದ್ದರಾಮಯ್ಯ, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ದ.ಕ ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದಾರೆ.




