ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಬಂದಿಲ್ಲ. ಹಲವೆಡೆ ಬಿತ್ತನೆಯಾಗಿದ್ದರೂ ಮಳೆ ಕೊರತೆಯಿಂದ ಒಣಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಮುಂದಿನ ಒಂದು ವಾರದೊಳಗೆ ಬರಗಾಲದ ಘೋಷಣೆ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟ ಮಾಡಲಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.
ರೈತರಿಗೆ ಮಳೆ ಮಾಹಿತಿ, ಕೃಷಿ ಚಟುವಟಿಕೆಗಳ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೃಷಿ ಇಲಾಖೆ ಆಯುಕ್ತಾಲಯದಲ್ಲಿ ಸ್ಥಾಪಿಸಿರುವ ಏಕೀಕೃತ ಸಹಾಯವಾಣಿ ಕರೆ ಕೇಂದ್ರ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ರಾಜ್ಯದಲ್ಲಿ ಬರಗಾಲದ ಘೋಷಣೆ ಬಗ್ಗೆ ಸರ್ಕಾರ ತನ್ನ ನಿರ್ಧಾರ ಪ್ರಕಟ ಮಾಡಲಿದೆ. ಅಲ್ಲದೆ, ಕಳೆದ ಬಾರಿ ಮಳೆ ಉತ್ತಮವಾಗಿತ್ತು. ಈ ಬಾರಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿಲ್ಲ ಎಂದು ಅವರು ತಿಳಿಸಿದರು.
ಬರಗಾಲದ ಘೋಷಣೆ ಹಾಗೂ ಪರಿಹಾರ ಮಾರ್ಗಸೂಚಿ ಬದಲಾವಣೆ ಮಾಡಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಕೇಂದ್ರದಿಂದ ಶೀಘ್ರದಲ್ಲೇ ಉತ್ತರ ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
ಹಳೆಯ ಮಾರ್ಗಸೂಚಿ ನಮಗೆ ಅನುಕೂಲ ಆಗಲ್ಲ. ಇದರಲ್ಲಿ ಮೂರು ವಾರ ಶೇಕಡಾ 60 ರಷ್ಟು ಮಳೆಯ ಕೊರತೆ ಇದ್ದರೆ ಮಾತ್ರ ಬರಗಾಲ ಘೋಷಣೆ ಮಾಡಬೇಕು ಅಂತ ನಿಯಮ ಇದೆ. ಆದರೆ ನಮಗೆ ಅದು ಸೂಕ್ತ ಅಲ್ಲ. ಶೇಕಡಾ 30 ರಷ್ಟು ಮಳೆಯ ಕೊರತೆಯಾದರೆ ಬರಗಾಲ ಘೋಷಣೆ ಮಾಡಬೇಕೆನ್ನುವುದು ನಮ್ಮ ಅಭಿಪ್ರಾಯವಾಗಿದೆ. ಅದಕ್ಕೆ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಒಂದೊಮ್ಮೆ ಕೇಂದ್ರದ ಉತ್ತರ ಬರದೇ ಇದ್ದರೆ ಹಳೆಯ ಮಾರ್ಗಸೂಚಿ ಪ್ರಕಾರ ಬರಗಾಲ ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಮುಂಗಾರು ದುರ್ಬಲಗೊಂಡಿದೆ. ಆದರೂ ಕುಡಿಯುವ ನೀರಿಗೆ ತೊಂದರೆಯಿಲ್ಲ. ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದೆ. ಈಗಾಗಲೇ 61.72 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಾಕಷ್ಟು ದಾಸ್ತಾನು ಇದ್ದು ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.




