ಮಂಗಳೂರು: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವೇಳೆ ಗಲಭೆ ಸೃಷ್ಟಿಸಿ, ವಿಧ್ವಂಸಕ ಕೃತ್ಯ ಎಸಗಲು ಹಣಕಾಸಿನ ನೆರವು ಒದಗಿಸಿದ ಗುಮಾನಿಯ ಮೇರೆಗೆ ಬಂಟ್ವಾಳ ಮೂಲದ ನಾಲ್ವರು ಆರೋಪಿಗಳ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ. ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ವರ್ಷ ಪಾಟ್ನಾದಲ್ಲಿ ನಡೆದ ಮೋದಿ ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಿರುವವರ ಜೊತೆ ಈ ನಾಲ್ವರು ಸಂಪರ್ಕ ಹೊಂದಿದ್ದು, ಹಣಕಾಸು ನೆರವು ಒದಗಿಸಿದ್ದಾರೆ ಎಂಬ ಆರೋಪದಡಿ ದಾಳಿ ನಡೆದಿದೆ.
ಕೃತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಸಹ ಇವರ ಮೇಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ದುಬೈನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ನಡೆಸುತ್ತಿರುವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳದಲ್ಲಿ ಅಂಗಡಿ ವ್ಯವಹಾರ ನಡೆಸಿಕೊಂಡಿರುವ ಈ ನಾಲ್ವರು ಸಹಾಯ ಮಾಡಿದ್ದಾರೆ ಎಂಬ ಸಂಶಯ ಸಹ ವ್ಯಕ್ತವಾಗಿದೆ.
ರಾಷ್ಟ್ರೀಯ ತನಿಖಾ ದಳದ ದಾಳಿ ವೇಳೆ ಬಂಟ್ವಾಳ ಪೊಲೀಸರು ಮತ್ತು ಕೆಎಸ್ಆರ್ಪಿಯ ಮೂರು ತುಕಡಿಗಳಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಳೆದ ವರ್ಷವೂ ಸಹ ಬಂಟ್ವಾಳದ ಬಿ.ಸಿ.ರೋಡ್ ನಲ್ಲಿದ್ದ ಮುಖಂಡರೊಬ್ಬರ ಮನೆ ಮೇಲೆ ಎನ್ಐಎ ದಾಳಿ ನಡೆಸಿ, ಬಿಹಾರದ ಘಟನೆಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದುಕೊಂಡಿತ್ತು. ಇದೀಗ ನಂದಾವರದ ವ್ಯಕ್ತಿಯೊಬ್ಬರು ಹಣಕಾಸಿನ ನೆರವು ನೀಡಿದ ಮೂಲ ಹಾಗೂ ವಿವರಗಳನ್ನು ಪಡೆದುಕೊಳ್ಳಲು ದಾಳಿ ನಡೆದಿದ್ದು, ಮೂವರ ವಿಚಾರಣೆ ನಡೆಸಲಾಗಿದೆ. ಇವರಲ್ಲಿ ಒಬ್ಬರು ದುಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಊರಿಗೆ ಮರಳಿದ್ದಾರೆ. ಉಳಿದವರು ಮೆಲ್ಕಾರ್ನಲ್ಲಿ ಪಾಸ್ ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.



