ಮುಂಗಾರು ಮಳೆ ಅಬ್ಬರಕ್ಕೆ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ

2 years ago

ಬೆಂಗಳೂರು: ಮುಂಗಾರು ಮಳೆ ಅಬ್ಬರಕ್ಕೆ ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ನದಿಪಾತ್ರದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

ಉತ್ತರಕರ್ನಾಟಕದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದರಿಂದ ಕೃಷ್ಣಾ ಹಾಗೂ ಉಪನದಿಗಳ ಮಟ್ಟ ಏರಿಕೆಯಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಗಡಿನಾಡುಗಳಲ್ಲಿ ಹಳ್ಳಿಗಳು ಜಲಾವೃತವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ಕರವಾಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯ ರುದ್ರನರ್ತನಕ್ಕೆ ಗುಡ್ಡಗಳು ಕುಸಿದಿವೆ. ಶಿರಾಡಿ, ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಸಂಚಾರ ವ್ಯತ್ಯಯವಾಗಿದೆ. ಭಾರೀ ಮಳೆಗೆ ಕರಾವಳಿಯ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರಿನ ಮಟ್ಟ ಅಪಾಯ ಮೀರಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.

ಇಲ್ಲಿನ ನದಿ ತೀರದ ಜನ ಆತಂಕದಲ್ಲಿದ್ದಾರೆ. ಇಲ್ಲಿನ ಹಳೆಗೇಟು ಎಂಬ ಪ್ರದೇಶದಲ್ಲಿ ಐತ ಮುಗೇರ ಎಂಬುವವರ ಮನೆ ಭಾಗಶಃ ಮುಳುಗಡೆಯಾಗಿದ್ದು ಇಡೀ ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ. ಮಲೆನಾಡಿನಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು ಭಾರೀ ಗಾಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದೆ. ಇದರ ಪರಿಣಾಮ ಮಂಗಳೂರು- ಚಿಕ್ಕಮಗಳೂರು ರಸ್ತೆ ಬಂದ್ ಆಗಿದೆ. ರಸ್ತೆ ಬಂದ್ ಆಗಿರುವುದರಿಂದ ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಎನ್ಆರ್ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದೆ. ಶೃಂಗೇರಿಯ ನೆಮ್ಮಾರು ಬಳಿಯ ಹೆದ್ದಾರಿಯಲ್ಲಿ ತುಂಗಾ ನದಿ ಸೇತುವೆ ಮೇಲೆ ಹರಿಯುತ್ತಿರುವುರಿಂದ ಶೃಂಗೇರಿ-ಕಾರ್ಕಳ ಹೆದ್ದಾರಿ ಬಂದ್ ಆಗಿದೆ.

ಚಿಕ್ಕಮಗಳೂರಿನಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು, ಎಸ್ಟೇಟ್ನ ಕೆರೆ ಏರಿ ಹೊಡೆದು ಭಾರೀ ಪ್ರಮಾಣದ ನೀರು ಹೊರಕ್ಕೆ ಬಂದ ಪರಿಣಾಮ ಜಮೀನುಗಳು ಜಲಾವೃತಗೊಂಡಿವೆ.  ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆ ಏರಿ ಹೊಡೆದು ಭಾರೀ ನೀರು ಹೊರಕ್ಕೆ ಬಂದಿದೆ. ಇದರ ಪರಿಣಾಮ, ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ನಾಟಿ ಮಾಡಿದ್ದ ಭತ್ತದ ಜಮೀನು ಸಂಪೂರ್ಣ ಹಾನಿಯಾಗಿದ್ದು, ರೈತರಿಗೆ ತೀವ್ರ ನಷ್ಟ ಉಂಟಾಗಿದೆ. ತೀವ್ರ ಮಳೆಯಿಂದಾಗಿ ಮಲೆನಾಡಿನಲ್ಲಿ ನಿರಂತರ ಅವಾಂತರಗಳು ಸೃಷ್ಟಿಯಾಗಿವೆ.

ಹಾಸನದಲ್ಲಿ ಭೂಕುಸಿತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ರಸ್ತೆ ಕುಸಿದು ಹೋಗಿದ್ದು ಈ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕುಂಬರಡಿ ಮತ್ತು ಹಾರ್ಲೆ ನಡುವಿನ ಎಸ್ಟೇಟ್ನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಣ್ಣು ಸಡಿಲಗೊಂಡಿದ್ದರಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕೊಡಗಿನಲ್ಲೂ ಮಳೆ ಅಬ್ಬರ ಜೋರಾಗಿದ್ದು ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿ ಜಲಾವೃತಗೊಂಡಿದೆ. ಮಳೆ, ಗಾಳಿ ಆರ್ಭಟಕ್ಕೆ ಜನ ಭಯಭೀತರಾಗಿದ್ದಾರೆ. ಭಾಗಮಂಡಲದ ಭಂಗಡೇಶ್ವರ ದೇಗುಲದ ಮೆಟ್ಟಿಲಿನವರೆಗೂ ನೀರು ಆವರಿಸಿದೆ.

ಕಾವೇರಿ ನದಿಪಾತ್ರದ ಕೊಳ್ಳೆಗಾಲ ತಾಲ್ಲೂಕಿನ ದಾಸಪುರ, ಮಳ್ಳೂರು, ಹಳೆ ಅನ್ನಗಳ್ಳಿ, ಹಳೆ ಹಂಪಾಪುರ, ಅರಳೆ ಗ್ರಾಮದ ಪ್ರದೇಶಗಳಲ್ಲಿ ಪ್ರವಾಹ ನೀರಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ ಕಾವೇರಿ ಜಲಾನಯನದ ಪ್ರದೇಶದಲ್ಲಿ ಯಾವುದೇ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲ. ಪ್ರವಾಹದಿಂದ ಆದ ಬೆಳೆಹಾನಿಯ ಬಗ್ಗೆ ಡ್ರೋನ್ಗಳ ಮೂಲಕ ಸರ್ವೆ ನಡೆಸಲಾಗುತ್ತಿದೆ.

Leave a Reply