30ನೇ ಘಟಿಕೋತ್ಸವ ಆಚರಿಸಿದ ಬೃಂದಾವನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್

2 years ago

ಬೆಂಗಳೂರು: ಶ್ರೇಷ್ಠ ಶಿಕ್ಷಣ ಸೇವೆಗೆ ಹೆಸರಾಗಿರುವ ಬೆಂಗಳೂರಿನ ಬೃಂದಾವನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ (ಬಿಜಿಐ) 30ನೇ ಘಟಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದೆ. ಪದ್ಮಶ್ರೀ ಪುರಸ್ಕೃತ ಡಾ.ಬಿ.ಆರ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಮತ್ತು ಬಿಜಿಐ ಅಧ್ಯಕ್ಷ ಮತ್ತು ಟ್ರಸ್ಟಿ ಆಗಿರುವ ಡಾ.ಸಿ.ಆರ್. ಶೆಟ್ಟಿ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದವೀಧರ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಲಾಯಿತು.

ಘಟಿಕೋತ್ಸವ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೋಕಸಭಾ ಸದಸ್ಯ ಅನುರಾಗ್ ಸಿಂಗ್ ಠಾಕೂರ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಾಮರ್ಸ್, ಮ್ಯಾನೇಜ್ಮೆಂಟ್, ಕಂಪ್ಯೂಟರ್ ಸೈನ್ಸ್ ಮತ್ತು ಪಾಲಿಟೆಕ್ನಿಕ್ ಸೇರಿದಂತೆ ವಿವಿಧ ವಿಭಾಗಗಳ 680 ಪದವೀಧರರಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು.

ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದ ರ್ಯಾಂಕ್ ಪಡೆದವರಿಗೆ ವಿಶೇಷ ಮನ್ನಣೆ ಸಲ್ಲಿಸಿ, ಶೈಕ್ಷಣಿಕ ಸಾಧನೆಗಾಗಿ ಪ್ರಶಂಸಾ ಪತ್ರ ವಿತರಿಸಲಾಯಿತು. ಇಸ್ರೋ ರೊಬೊಟಿಕ್ಸ್ ಚಾಲೆಂಜ್ – ಯುಆರ್ಎಸ್ಸಿ 2024ರಲ್ಲಿ ಮತ್ತು ಸ್ಟುಡೆಂಟ್ ಪ್ರಾಜೆಕ್ಟ್ ಕಾರ್ಯಕ್ರಮದ 47ನೇ ಸರಣಿಯ ಅಡಿಯಲ್ಲಿ ನಡೆದ ಕೆಎಸ್ಸಿಎಸ್ಟಿ-ಅನುಮೋದಿತ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಬಿಜಿಐ ಪ್ರಾಯೋಜಿತ ಇವಿ ಸೋಲಾರ್ ಬಗ್ಗಿ ಕಾರ್ಟ್ ಪ್ರಸ್ತುತ ಪಡಿಸಿದ ಬಿಜಿಐ ವಿದ್ಯಾರ್ಥಿಗಳ ಸಾಧನೆಗಾಗಿ ಠಾಕೂರ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನುರಾಗ್ ಠಾಕೂರ್, “ಮುಂದಿನ 25 ವರ್ಷಗಳ ಕಾಲ ಭಾರತ ಜಗತ್ತನ್ನು ಮುನ್ನಡೆಸಲಿದೆ. ಭಾರತದ ಯುವ ಪೀಳಿಗೆಯು ಇಡೀ ಜಗತ್ತಿಗೆ ದಾರಿ ತೋರಲಿದೆ” ಎಂದರು.

ಇದೇ ಸಂದರ್ಭದಲ್ಲಿ ಅವರು ವಿಜ್ಞಾನ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರ ವಿಚಾರದಲ್ಲಿ ಕೌಶಲ್ಯಾಭಿವೃದ್ಧಿ ಮಾಡುವ ಅಗತ್ಯವನ್ನು ತಿಳಿಸಿದರು. ಅಲ್ಲದೇ ಕೇಂದ್ರ ಬಜೆಟ್ ನಲ್ಲಿ ಯುವ ಪೀಳಿಗೆಗೆ ಉದ್ಯೋಗಾವಕಾಶ ಹೆಚ್ಚಿಸಲು 1 ಕೋಟಿ ರೂಪಾಯಿ ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.

ಬೃಂದಾವನ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಸಿಇಓ ಡಾ. ಶ್ರುತಿ ಶರ್ಮಾ ಮಾತನಾಡಿ, “ವಿಶ್ವದಲ್ಲಿ ಭಾರತವು ಅಗ್ರ 3 ಸ್ಥಾನ ಪಡೆಯುವತ್ತ ಸಾಗುವಲ್ಲಿ ನಮ್ಮ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ” ಎಂದರು.

ಕಾರ್ಯಕ್ರಮದಲ್ಲಿ ಬಿಜಿಐ ಅಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಬಿಜಿಐ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply