ಬೆಂಗಳೂರು: ನಗರ ಸೇರಿದಂತೆ ರಾಜ್ಯಾದ್ಯಂತ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದರುವ ಶಂಕಿತ ಐವರು ಬಳಿ ವಾಕಿಟಾಕಿ ಪತ್ತೆಯಾಗಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆಗಳಲ್ಲಿ ವಾಕಿಟಾಕಿ ಬಳಕೆ ಮಾಡಲಾಗುತ್ತದೆ. ಕಾಡಿನಲ್ಲಿ ತರಬೇತಿ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತದೆ. ಒಂದು ವೇಳೆ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡಗಳ ಮೇಲೆ ದಾಳಿ ಮಾಡಿದಾಗ ಜಾಮರ್ ಬಳಕೆ ಮಾಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮೊಬೈಲ್ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ವೇಳೆ ವಾಕಿಟಾಕಿ ಬಳಕೆ ಮಾಡಲಾಗುತ್ತದೆ.
ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಅಸಲಿ ಸಂಚು ಏನಿತ್ತು ಎನ್ನುವುದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಮುಂದಿನ ಹಂತದಲ್ಲಿ ಎನ್‌ಐಎ ತನಿಖೆ ನಡೆಸುವ ಸಾಧ್ಯತೆಗಳಿವೆ.
ಲಕ್ಷ ಲಕ್ಷ ಫಂಡಿಂಗ್: ರಾಜ್ಯ ರಾಜಧಾನಿಯಲ್ಲಿ ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ಶಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಿ ಸಾಕಿ ಸಲುಹುತ್ತಿದ್ದು. ಲಕ್ಷ ಲಕ್ಷ ಫಂಡಿಂಗ್ ಮಾಡುತ್ತಿದ್ದು ಜೊತೆಗೆ ಏನೇನು ಮಾಡಬೇಕು ಎನ್ನುವುದರ ತರಬೇತಿ ನೀಡುತ್ತಾ ನಗರದಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ ಎಂದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನ ಗುರುತಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಎರಡು ಮೂರು ದಿನ ತಡ ಮಾಡಿದ್ದರೇ ನಗರದ ಕೆಲವು ಕಡೆ ಸ್ಫೋಟಗೊಳಿಸಲು ತಯಾರಿ ಮಾಡಿಕೊಂಡಿದ್ದರು. ಇದೀಗ ಶಂಕಿತರ ಗ್ಯಾಂಗ್ ಲೀಡರ್ ಜುನೈದ್ ತಲೆ ಮರೆಸಿಕೊಂಡಿದ್ದು ಅವನ ಬೇಟೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ವಿಧ್ವಂಸಕಕ್ಕೆ ಸಂಚು: ಇನ್ನು ಈ ಸಂಬಂಧ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು ಐದನೇ ಆರೋಪಿ ಮನೆಯಲ್ಲಿ 4 ಗ್ರೆನೇಡ್ ಪತ್ತೆಮಾಡಿದ್ದಾರೆ. ಈ ಮೂಲಕ ರಾಜಧಾನಿ ಬೆಂಗಳೂರಲ್ಲಿ ದೊಡ್ಡ ಮಟ್ಟದ ದಾಳಿಗೆ ಶಂಕಿತ ಉಗ್ರರು ಸಂಚು ರೂಪಿಸಿದ್ದರು ಎಂಬುದು ಬಹಿರಂಗವಾಗಿದೆ.
ಬಂಧಿತ ಶಂಕಿತ ಉಗ್ರ ಜಾಹೀದ್‌ನ ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸದಲ್ಲಿ ಗ್ರೆನೇಡ್‌ಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಮಿಕಲ್ ಮತ್ತು ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್‌ಗಳನ್ನು ಇಡಲಾಗಿತ್ತು ಎಂಬುದನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ ಎಸ್‌ಡಿ ಶರಣಪ್ಪ ಖಚಿತಪಡಿಸಿದ್ದಾರೆ. ಅದಲ್ಲದೇ ಐವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಡಾ ಎಸ್‌ಡಿ ಶರಣಪ್ಪ ಅವರು, ಐವರು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದೇವೆ. 5ನೇ ಆರೋಪಿ ಜಾಹೀದ್ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಜತೆ ಸಂಪರ್ಕದಲ್ಲಿದ್ದ. ಪ್ರಮುಖ ಆರೋಪಿ ನೀಡಿದ್ದ ಗ್ರೆನೇಡ್‌ಗಳನ್ನು ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದ. ಆರೋಪಿ ನೀಡಿದ ಮಾಹಿತಿ ಮೇರೆಗೆ ನಮ್ಮ ತಂಡ ಮನೆಗೆ ತೆರಳಿ ಪರಿಶೀಲಿಸಿದ ವೇಳೆ 4 ಜೀವಂತ ಗ್ರೆನೇಡ್‌ಗಳು ಸಿಕ್ಕಿವೆ ಎಂದು ಹೇಳಿದರು.
ಬಾಂಬ್ ಸ್ಕ್ವಾಡ್ ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮನೆಯ ಬೀರುವಿನಲ್ಲಿ ಗ್ರೆನೇಡ್ ಗಳನ್ನು ಬಟ್ಟೆಯಲ್ಲಿ ಸುತ್ತಿ ಸುರಕ್ಷಿತವಾಗಿಟ್ಟಿದ್ದ. ಯಾವುದೇ ಕ್ಷಣದಲ್ಲಿ ಬೇಕಾದರೂ ಬಳಸಬಹುದಾದ 4 ಗ್ರೆನೇಡ್ ಜಪ್ತಿ ಮಾಡಲಾಗಿದೆ. ಗ್ರೆನೇಡ್‌ಗಳನ್ನು ಬೇರೊಬ್ಬ ವ್ಯಕ್ತಿಯ ಮೂಲಕ ಪಾರ್ಸಲ್ ನೀಡಲಾಗಿದೆ. ಆದು ಯಾರು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ. ಯಾವ ದಿನ ಪಾರ್ಸೆಲ್ ನೀಡಿದ್ದ ಎಂಬುದರ ಬಗ್ಗೆಯೂ ತನಿಖೆ ನಡೆದಿದ್ದು, ಸಿಸಿಬಿ ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಹಿನ್ನೆಲೆ ದಾಳಿ ನಡೆಸಲಾಗಿತ್ತು. ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ವಿದೇಶದಲ್ಲಿರುವ ಮಾಹಿತಿ ಇದ್ದು, ಆರೋಪಿಯ ಪತ್ತೆಗಾಗಿ ಬೇರೆ ಬೇರೆ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿದ್ದೇವೆ ಎಂದು ಡಾ.ಎಸ್‌ಡಿ ಶರಣಪ್ಪ ತಿಳಿಸಿದರು.




