ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ ವೀಕ್ಷಕರು ಮತ್ತು ಸಿನಿಮಾ ವಿಮರ್ಶಕರ ಗಮನ ಸೆಳೆದಿದ್ದ ಅರಿವು, ನಾತಿ ಚರಾಮಿ, ಆ್ಯಕ್ಟ್ 1978 ಹಾಗೂ 19.20.21 ಸಿನಿಮಾಗಳನ್ನು ನಿರ್ದೇಶಿಸಿದ್ದ ಮಂಸೋರೆ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಹೊಸ ಅಲೆಯ ಚಿತ್ರಗಳ ಮೂಲಕ ಗಮನ ಸೆಳೆದ ಮಂಸೂರೆ ಅಲಿಯಾಸ್ ಮಂಜುನಾಥ್ ಸೋಮಕೇಶವ್ ರೆಡ್ಡಿ ಪ್ರಗತಿಪರ ಹೋರಾಟಗಳಲ್ಲೂ ಭಾಗವಹಿಸುವ ಮೂಲಕ ಗಮನಸೆಳೆದಿದ್ದರು. ಇವರ ವಿರುದ್ಧ ಇದೀಗ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಸೋರೆ ಹಾಗೂ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ಅಖಿಲಾ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ, ಮಂಸೋರೆ, ಅವರ ತಾಯಿ ವೆಂಕಟಲಕ್ಷಮ್ಮ, ಅಕ್ಕ ಹೇಮಲತಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ನಮ್ಮ ಪೋಷಕರು ಪತಿ ಮಂಜುನಾಥ್ಗೆ 10 ಲಕ್ಷ ರೂ. ನೀಡಿದ್ದರು. ಇದೀಗ 30 ಲಕ್ಷ ರೂ. ಮೌಲ್ಯದ ಕಾರು ಕೊಡಿಸುವಂತೆ ಪತಿ ಹಾಗೂ ಅತ್ತೆ ಪೀಡಿಸುತ್ತಿದ್ದಾರೆ ಎಂದು ಅಖಿಲಾ ಆರೋಪ ಮಾಡಿದ್ದಾರೆ.
ಅಖಿಲಾ ನೀಡಿರುವ ದೂರಿಗೆ ಉತ್ತರವಾಗಿ ಪೊಲೀಸರಿಗೆ ಪ್ರತಿ ದೂರು ನೀಡಿರುವ ಮಂಸೋರೆ, ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ದೂರು ದಾಖಲಿಸಿದ್ದಾರೆ.
ತಾಯಿಯನ್ನು ಮನೆಯಿಂದ ಹೊರಹಾಕುವಂತೆ ಪತ್ನಿ ಹಠ ಮಾಡುತ್ತಿದ್ದಾಳೆ. ನನ್ನ ತಾಯಿ ಮೇಲೆಯೇ ಆಕೆ ಹಲ್ಲೆ ಮಾಡಿದ್ದಾಳೆ. ಪತ್ನಿ ಹಾಗೂ ಆಕೆಯ ಮನೆಯವರಿಂದ ಯಾವುದೇ ಹಣ ಪಡೆದಿಲ್ಲ. ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಮಂಸೋರೆ ಪ್ರತಿಕ್ರಿಯೆ ನೀಡಿದ್ದಾರೆ.




