ಕನ್ನಡ ಪರ ಹೋರಾಟಗಾರ, ಚಿಂತಕ ಪಾಲನೇತ್ರರವರಿಗೆ ಅಭಿನಂದನಾ ಸಮಾರಂಭ

2 years ago

ಬೆಂಗಳೂರು: ರಾಜಾಜಿನಗರ ಪ್ರವೇಶ ದ್ವಾರದ ಬಳಿ ಇರುವ ಶ್ರೀ ಶಿವಕುಮಾರ ಸ್ವಾಮೀಜಿ ಪ್ರತಿಮೆ ಮುಂಭಾಗದಲ್ಲಿ ಕನ್ನಡ ಪರ ಹೋರಾಟಗಾರ, ಚಿಂತಕ ಪಾಲನೇತ್ರರವರ 60ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದನಾ ಸಮಾರಂಭ ನಡೆಯಿತು.

ಕನ್ನಡ ಪರ ಹೋರಾಟಗಾರರಾದ ಪಾಲನೇತ್ರರವರಿಗೆ ತುಮಕೂರು ಹಿರೇಮಠ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಐ.ಎ.ಎಸ್ ಅಧಿಕಾರಿ ಸಿ.ಸೋಮಶೇಖರ್, ಮಾಜಿ ಮೇಯರ್ ಜೆ.ಹುಚ್ಚಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಎಲ್.ಆರ್.ಶಿವರಾಮೇಗೌಡ, ದಲಿತ ಸಮುದಾಯದ ಮುಖಂಡ ಚಿ.ನಾ.ರಾಮು, ವಿಕಾಸರಂಗ ಅಧ್ಯಕ್ಷರಾದ ವ.ಚ.ಚನ್ನೇಗೌಡ, ವೈಭವ ಕರ್ನಾಟಕ ಅಧ್ಯಕ್ಷ ಟಿ.ವೆಂಕಟೇಶ್ ಗೌಡ, ಅಂಬೇಡ್ಕರ್ ಕ್ರಾಂತಿ ಸೇನೆ ಅಧ್ಯಕ್ಷ ಕ್ರಾಂತಿರಾಜ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ದೇವರಾಜ್, ಸಹಕಾರ ಧುರೀಣ ಬಿ.ಕೆ.ಚಂದ್ರಧರ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದರು.

ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನ್ನಡದ ಅಸ್ಮಿತೆ, ಹೋರಾಟ, ಆಂದೋಲನದಲ್ಲಿ ಪಾಲನೇತ್ರ ಮಂಚೂಣಿಯಲ್ಲಿ ಇದ್ದರು. ಕನ್ನಡಕ್ಕೆ ಉಸಿರಾಗಿ ನಿಂತು ಹೋರಾಟದಲ್ಲಿ ಪಾಲ್ಗೊಂಡರು. ಕನ್ನಡ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದರು. ಪಾಲನೇತ್ರರವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು ಎಂದರು.

ಜಾತ್ಯತೀತ ಸಿದ್ದಾಂತ ಪಾಲಿಸುತ್ತಾ ರಾಜ್ಯದ ಎಲ್ಲ ಮಠಗಳ ಜೊತೆಯಲ್ಲಿ ಉತ್ತಮ ಸಾಂಗತ್ಯವಿತ್ತು. ಪಾಲನೇತ್ರರವರು ಕನ್ನಡದ ಆಸ್ತಿ. ಕನ್ನಡ ಭಾಷೆ ಉಳಿಸಲು ಇನ್ನು ಹೆಚ್ಚು ದುಡಿಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಸಿ.ಸೋಮಶೇಖರ್ ಮಾತನಾಡಿ, ಕನ್ನಡ ನಾಡಿನ ಮಿತ್ರ, ನಮ್ಮೆಲ್ಲರ ಪಾಲಿಗೆ ನೇತ್ರಾ ಪಾಲನೇತ್ರರಾಗಿದ್ದಾರೆ. ಕನ್ನಡದ ಸೇವಕ, ನಿಷ್ಠೆಯಿಂದ ಕನ್ನಡದ ಹೋರಾಟಗಾರ ಪಾಲನೇತ್ರರವರು 45 ವರ್ಷಗಳ ಕಾಲದಿಂದ ಕನ್ನಡ ಪರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜಿ.ನಾರಾಯಣ, ವಾಟಾಳ್ ನಾಗರಾಜ್, ಮ.ರಾಮಮೂರ್ತಿರವರ ಒಡನಾಟದಿಂದ ಕನ್ನಡದ ಶಕ್ತಿಯಾಗಿ ಪಾಲನೇತ್ರ ಹೊರಹಮ್ಮಿದ್ದಾರೆ. ಕನ್ನಡ ಭಾಷೆಗೆ ಆತಂಕದ ಪರಿಸ್ಥಿತಿ ಬರುತ್ತಾ ಇರುತ್ತದೆ. ಅಂತಹ ಸಂದರ್ಭದಲ್ಲಿ ಪಾಲನೇತ್ರರಂತಹ ತ್ರಿವಿಕ್ರಮ ಹೋರಾಟಕ್ಕೆ ಸಜ್ಜಾಗಿ ನಿಲ್ಲುತ್ತಾರೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಾಲನೇತ್ರ, ಕನ್ನಡ ತಾಯಿ ಭುವನೇಶ್ವರಿ ಆಶೀರ್ವಾದದಿಂದ ಕನ್ನಡ ಸೇವೆ ಮಾಡುವ ಸೌಭಾಗ್ಯ ಲಭಿಸಿರುವದು ನನ್ನ ಪೂರ್ವ ಜನ್ಮದ ಪುಣ್ಯ. ಕನ್ನಡ, ಕನ್ನಡಿಗ ಉಳಿದಿದ್ದರೆ ಅದು ಕನ್ನಡ ಪರ ಹೋರಾಟಗಾರರಿಂದ. ರಾಜ್ಯದಲ್ಲಿ ಕನ್ನಡ ಉಳಿಯಬೇಕು. ಕನ್ನಡ ಪರ ಹೋರಾಟಗಾರರನ್ನ ಕಾಮಾಲೆ ಕಣ್ಣಿಂದ ನೋಡುತ್ತಿದ್ದಾರೆ. ಇದು ವಿಷಾದದ ವಿಷಯವಾಗಿದೆ ಎಂದರು.

ರಾಜಕಾರಣಿಗಳಿಗೆ ನಾಡಿನ ಪರ ಚಿಂತೆಯಿಲ್ಲ, ಕನ್ನಡ ಪರ ಹೋರಾಟಗಾರರನ್ನ ಅಪಮಾನ ಮಾಡಬೇಡಿ, ಹೋರಾಟಗಾರರು ತಮ್ಮ ಜೀವನ ಮುಡುಪಿಟ್ಟು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕನ್ನಡ ಹೋರಾಟಗಾರರ ಮೇಲೆ ಇರುವ ಕೇಸ್ ಗಳನ್ನು ಹಿಂಪಡೆಯಬೇಕು ಎಂಬುದು ನಮ್ಮ ಮನವಿ ಎಂದರು.

Leave a Reply