ರೈತರ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ: ಡಿ.ಕೆ. ಶಿವಕುಮಾರ್

2 months ago

ಬಳ್ಳಾರಿ: ಪ್ರಸ್ತಾವಿತ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಯಾವುದೇ ಒಬ್ಬ ರೈತನ ಜಮೀನನ್ನೂ ಸಹ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದ ರೈತರು ಮುಕ್ತವಾಗಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ಇತಿಹಾಸದ ಅಧಿಕೃತ ದಾಖಲೆಗಳನ್ನು ಪ್ರಸ್ತುತಪಡಿಸಿದರು. ಸರ್ಕಾರ ಯಾರೊಬ್ಬರನ್ನೂ ಭೂಮಿ ನೀಡುವಂತೆ ಒತ್ತಾಯಿಸುವುದಿಲ್ಲ ಎಂದರು.

ಯಾರಿಗೆ ಭೂಮಿ ನೀಡಲು ಇಷ್ಟವಿಲ್ಲವೋ ಅವರು ಕೃಷಿ ಮಾಡಿಕೊಂಡಿರಬಹುದು. ಯಾರು ಸ್ವಇಚ್ಛೆಯಿಂದ ಭೂಮಿ ನೀಡಲು ಸಿದ್ಧರಿದ್ದಾರೋ, ಅವರು ಸರ್ಕಾರಕ್ಕೆ ಒಪ್ಪಿಸಿ ಪರಿಹಾರ ಪಡೆದುಕೊಳ್ಳಬಹುದು. ಆದರೆ ಒಂದು ಗುಂಟೆ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ ಎಂದರು.

ಸಾಧಕ-ಬಾಧಕಗಳ ಪರಿಶೀಲನೆಗೆ ಸಮಿತಿ ರಚನೆ: ಯೋಜನೆಯ ಅನುಷ್ಠಾನದ ಕುರಿತು ಪರಿಶೀಲಿಸಲು ಮತ್ತು ರೈತರ ಅಭಿಪ್ರಾಯ ಹಾಗೂ ಆತಂಕಗಳನ್ನು ಆಲಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಭೂಮಿ ನೀಡದ ರೈತರ ಜಮೀನಿನ ಸದ್ಯದ ಸ್ಥಿತಿಗತಿಯನ್ನು ಬದಲಾಯಿಸುವುದಿಲ್ಲ ಎಂದು ಭರವಸೆ ನೀಡಿದರು.

ಸಮಿತಿಯ ವರದಿ ಬಂದ ನಂತರ ಮುಂದಿನ ನಿರ್ಧಾರವನ್ನು ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು ಎಂದ ಅವರು, ಬಿಡದಿಯಲ್ಲಿ ಜಮೀನು ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ, ರಾಜಕೀಯ ಪ್ರೇರಣೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕೆಲವು ವ್ಯಕ್ತಿಗಳು ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದರು.

ಇದು ನನ್ನ ಕನಸಿನ ಯೋಜನೆಯಲ್ಲ: ಬಿಡದಿ ಟೌನ್ ಶಿಪ್ ಯೋಜನೆ ನನ್ನ ಕನಸಿನ ಯೋಜನೆಯಲ್ಲ. ನಾನು ಎಂದಿಗೂ ಇದರ ಮಾಲೀಕತ್ವ ಅಥವಾ ಶ್ರೇಯಸ್ಸನ್ನು ಪಡೆದಿಲ್ಲ, ಕನಿಷ್ಠ ಇದಕ್ಕೆ ಶಂಕುಸ್ಥಾಪನೆಯನ್ನೂ ಮಾಡಿಲ್ಲ ಎಂದರು. ಅವರು

ನಾನು ಕೇವಲ ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯನ್ನು ಮುಂದುವರಿಸುತ್ತಿದ್ದೇನೆ ಅಷ್ಟೇ. ನಾನು ಕೂಡ ಒಬ್ಬ ರೈತನ ಮಗ, ರೈತರ ಕಷ್ಟ ನನಗೆ ಗೊತ್ತು. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಭಾವುಕರಾದರು.

ಈ ಯೋಜನಾ ಪ್ರದೇಶವನ್ನು ‘ರೆಡ್ ಝೋನ್’ ಎಂದು ಘೋಷಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಬಿಡಿಎ ಅನುಮೋದನೆ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿರಲಿಲ್ಲ. 2007ರಲ್ಲಿ ಮಾರಂಡಹಳ್ಳಿ, ಒಡೆಯರಹಳ್ಳಿ ಸೇರಿದಂತೆ ಮತ್ತಷ್ಟು ಗ್ರಾಮಗಳನ್ನು ಇದಕ್ಕೆ ಸೇರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಡಿಎಲ್‌ಎಫ್ ಕಂಪನಿಗೆ ಅನುಮತಿ: ಹಿಂದಿನ ಸರ್ಕಾರವೇ ಗ್ರಾಮಠಾಣಾ ಸೇರಿದಂತೆ ಆಸ್ತಿಗಳ ಪರಿಹಾರ ಗುರುತಿಸಿ, ಖಾಸಗಿ ಡೆವಲಪರ್ ಡಿಎಲ್‌ಎಫ್ ಕಂಪನಿಯಿಂದ 400 ಕೋಟಿ ರೂ. ಭದ್ರತಾ ಠೇವಣಿ ಪಡೆದು ಯೋಜನೆಗೆ ಪಾಲ್ಗೊಳ್ಳಲು ಅನುಮತಿ ನೀಡಿತ್ತು ಎಂದರು.

2010ರಲ್ಲಿದ್ದ ಸರ್ಕಾರವೂ ಇದೇ ಯೋಜನೆಯನ್ನು ಮುಂದುವರಿಸಿ ಪಿಪಿಪಿ ಮಾದರಿಯಲ್ಲಿ ಜಾಗತಿಕ ಟೆಂಡರ್ ಆಹ್ವಾನಿಸಿತ್ತು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಾಲಕೃಷ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply