ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು, ಅಳಲಗೇರಿ ಹಾಗೂ ಅರಬಗೊಂಡ ಗ್ರಾಮಗಳ ರೈತರ 1017 ಎಕರೆ ಕೃಷಿ ಜಮೀನುಗಳನ್ನು ಕೈಗಾರಿಕೆ ಕಾರಿಡಾರ್ ಗೆ ಬಲವಂತವಾಗಿ ಭೂ ಸ್ವಾಧೀನಕ್ಕೆ ಕ್ರಮವಹಿಸಿದ ರಾಜ್ಯ ಸರಕಾರ ಹಾಗೂ ಕೆಐಎಡಿಬಿಯ ಕ್ರಮವನ್ನು ಸಿಪಿಐ(ಎಂ) ವಿರೋಧಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಫಲವತ್ತಾದ ಜಮೀನುಗಳನ್ನು ಕೊಡಲು ರೈತರು ಒಪ್ಪದಿರುವಾಗ ಬಲವಂತವಾಗಿ ಭೂ ಸ್ವಾಧೀನ ಮಾಡಬಾರದು. ಕೂಡಲೇ ಭೂ ಸ್ವಾಧೀನಕ್ಕೆ ಕ್ರಮವಹಿಸಿದ ಎಲ್ಲ ಕ್ರಮಗಳನ್ನು ಕೈ ಬಿಡುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ. ಈ ಕುರಿತು ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಕ್ಷ ಭಾಗವಹಿಸುತ್ತದೆ ಎಂದರು.
ರೈತರು-ದುಡಿಯುವ ಜನರ ಸಾಲ ಮನ್ನಾ ಏಕಿಲ್ಲ?: ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ನೀತಿಗಳಿಂದಾಗಿ ಇಂದು ಬಡವರ, ರೈತರು ಸಾಕಷ್ಟು ಸಂಕಷ್ಟ ಈಡಾಗಿದ್ದಾರೆ. ಹಾಗಾಗಿ ಎಲ್ಲ ರೈತರ, ಕೂಲಿಕಾರರ ಮತ್ತು ಮಹಿಳೆಯರ ಖಾಸಗೀ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ ಜನತೆ ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಟಕ್ಕೊಳಗಾದರಲ್ಲದೇ, ಮತ್ತೆರಡು ವರ್ಷ ಕಾಲ ಅತಿವೃಷ್ಠಿ ಹಾಗೂ ಪ್ರವಾಹಗಳಿಗೆ ಬಲಿಯಾದರು. ಇಂತಹ ಸಂಕಷ್ಟದ ಅವಧಿಯಲ್ಲಿಯೇ ಸರಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ರಸಾಯನಿಕ ಗೊಬ್ಬರ, ಕ್ರಿಮಿನಾಶಕ, ಬೀಜಗಳ ಮತ್ತು ಔಷಧಿ ಮತ್ತಿತರೆ ಅಗತ್ಯ ವಸ್ತುಗಳ ಬೆಲೆಗಳನ್ನು ದುಪ್ಪಟ್ಟು ಹೆಚ್ಚಳ ಮಾಡಿ ಬಂಡವಾಳಿಗರಿಗೆ ಲೂಟಿಗೈಯಲು ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪ, ಬೆಲೆ ಏರಿಕೆಗಳಿಂದ ಮತ್ತು ಲೂಟಿಕೋರತನದಿಂದ ದುಡಿಯುವ ಜನತೆ ಹಾಗೂ ರೈತರನ್ನು ರಕ್ಷಿಸುವ ಬದಲು ಬಿಜೆಪಿ ಸರಕಾರ ಜನತೆಯನ್ನು ತೀವ್ರ ಸಂಕಷ್ಟಕ್ಕೀಡು ಮಾಡಿ, ಅವರ ಸಣ್ಣ ಪುಟ್ಟ ಆಸ್ತಿಗಳನ್ನು ಶ್ರೀಮಂತರ ಕೈಗೆ ವರ್ಗಾಯಿಸಲು ಕ್ರಮವಹಿಸುವ ದುಷ್ಟತನವನ್ನು ಮೆರೆಯಿತು. ಇದರಿಂದಾಗಿ ರೈತರು, ಕೂಲಿಕಾರರು, ಕಾರ್ಮಿಕರು ಹಾಗೂ ಮಹಿಳೆಯರು ತೀವ್ರ ರೀತಿಯ ಸಾಲ ಬಾಧೆಗೊಳಗಾಗಿದ್ದಾರೆ. ರೈತರ ಹಾಗೂ ಬಡವರ ಆತ್ಮಹತ್ಯೆಗಳು ಮುಂದುವರೆದಿರುವುದಕ್ಕೆ ಸರಕಾರವೇ ನೇರ ಕಾರಣವೆಂದು ಆರೋಪಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಸರಕಾರ ಸಂಘಟಿಸಿದ “ಜಗತ್ತಿಗಾಗಿ ನಿರ್ಮಿಸಿ” ಎಂಬ ಘೋಷಣೆಯಡಿಯಲ್ಲಿ ಕೈ ಬೆರಳೆಣಿಕೆಯ ಕೆಲ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ಸುಮಾರು 3 ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಮತ್ತು ಐದು ವರ್ಷಗಳ ಲಕ್ಷಾಂತರ ಕೋಟಿ ರೂ.ಗಳ ಬಡ್ಡಿ ರಹಿತ ಸಾಲ ನೀಡಲು ರಾಜ್ಯ ಸರಕಾರವೇ ನಿರ್ಧರಿಸಿದೆ. ರೈತರು ಹಾಗೂ ದುಡಿಯುವ ಜನರ ಸಾಲ ಮನ್ನಾ ಯಾಕೆ ಮಾಡುತ್ತಿಲ್ಲ? ಮತ್ತು ಈ ಜನತೆಗೇಕೆ ಬಡ್ಡಿ ರಹಿತ ಸಾಲ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.
ಒಕ್ಕೂಟ ಸರಕಾರ ಕೇವಲ ಒಂದು ನೂರು ಕಂಪನಿಗಳ 11 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿರುವಾಗ, ರೈತರ ಸಾಲವನ್ನು ಕೂಡ ಮನ್ನಾ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಕೂಡಲೇ ಕ್ರಮವಹಿಸಬೇಕು ಹಾಗೂ ಹೊಸ ಸಾಲ ನೀಡಿಕೆಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಬಸವರಾಜ ಪೂಜಾರ, ವಿನಾಯಕ ಕುರಬರ, ಅಂದಾನೆಪ್ಪ ಹೆಬಸೂರು ಉಪಸ್ಥಿತರಿದ್ದರು.



