ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಲು ಅವಕಾಶ ಕಲ್ಪಿಸುವ ವಿಧೇಯಕ  ಅಂಗೀಕಾರ

8 months ago

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಎರಡು ಎಕರೆವರೆಗೆ ಸಣ್ಣ ಉದ್ದಿಮೆ ಸ್ಥಾಪಿಸಲು ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಲು ಅವಕಾಶ ಕಲ್ಪಿಸುವ 2025ರ ಕರ್ನಾಟಕ ಭೂಸುಧಾರಣೆಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕಕ್ಕೆ  ವಿಧಾನಸಭೆಯಲ್ಲಿಂದು ಅಂಗೀಕಾರ ದೊರೆಯಿತು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧೇಯಕ ಕುರಿತು ಮಾತನಾಡಿ,  ಸಣ್ಣ ಉದ್ದಿಮೆದಾರರಿಗೆ ಉತ್ತೇಜನ ನೀಡಲು  ವಿಧೇಯಕ ತರಲಾಗಿದೆ.  ಉದ್ದಿಮೆ ಸ್ಥಾಪನೆಗೆ ಭೂ ಪರಿವರ್ತನೆ ಅಗತ್ಯವಿಲ್ಲ.  ಸ್ವಯಂ ಚಾಲಿತ ಪರಿವರ್ತನೆಯಾಗಲಿದೆ ಎಂದರು.

ಖಾಸಗಿಯವರಿಂದ ಶಿಕ್ಷಣ ಹಾಗೂ ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಲು ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತಿದೆ. 4 ಹೆಕ್ಟೇರ್‌ವರೆಗೂ ಜಿಲ್ಲಾಧಿಕಾರಿಗಳ ಅಂತ್ಯದಲ್ಲೇ ಮಂಜೂರಾತಿ ನೀಡಬಹುದಾಗಿದೆ. ಸರ್ಕಾರದ ಹಂತದವರೆಗೂ ಬರುವ ಅಗತ್ಯವಿರುವುದಿಲ್ಲ.  ಭೂಮಿ ಬಳಕೆಯ ಉದ್ದೇಶ ಬದಲಾವಣೆಗೂ  ಅವಕಾಶ ಕಲ್ಪಿಸಲಿದೆ ಎಂದರು.

ನವೀಕರಿಸಬಹುದಾದ ಇಂಧನ ಯೋಜನೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಆದ್ಯತೆಯಾಗಿರುವ ಹಿನ್ನಲೆಯಲ್ಲಿ ಸೋಲಾರ್‌ ಮತ್ತು ಪವನ ಶಕ್ತಿ ಉತ್ಪಾದಿಸುವ ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಸ್ವಯಂಚಾಲಿತ ಭೂ ಪರಿವರ್ತನೆಗೆ ಅವಕಾಶ ಈ ವಿಧೇಯಕ ಕಲ್ಪಿಸಲಿದೆ ಎಂದರು.

ಪವನಶಕ್ತಿ  ಹಾಗೂ ಸೌರಶಕ್ತಿ ವಿದ್ಯುತ್‌ ಉತ್ಪಾದನೆಗೆ ಹೂಡಿಕೆ ಹೆಚ್ಚಾಗಬೇಕು ಎಂಬುದು ನಮ ಉದ್ದೇಶವಾಗಿದೆ. ಸರ್ಕಾರದ ಅನುಮತಿ ಇಲ್ಲದೆ ಕೃಷಿಯೇತರ ಉದ್ದೇಶಕ್ಕೆ ಬಳಕೆ  ಮಾಡಿದರೆ ದಂಡ ವಿಧಿಸಲಾಗುತ್ತಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶ ಎಂದರು.

ವಿಧೇಯಕ ಕುರಿತು ಹಲವು ಶಾಸಕರು  ಉಪಯುಕ್ತ ಸಲಹೆಗಳನ್ನು ನೀಡಿದರು. ನಂತರ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

Leave a Reply