Exclusively ಪುಸ್ತಕ ಸಂತೆಯೇನಾಗಿರದೆ inclusively with all

2 years ago

ದಿನಾಂಕ ೧೦-೦೨-೨೪ ರಂದು ಬೆಂಗಳೂರಿನ ಎಚ್, ಎಸ್ .ಆರ್ ಬಡಾವಣೆಯ ಸ್ವಾಭಿಮಾನಿ ಉದ್ಯಾನದಲ್ಲಿ  ‘ವೀರಲೋಕ’ದ ಮೂಲಕ ಆಯೋಜಿಸಲ್ಪಟ್ಟ ಪುಸ್ತಕ ಸಂತೆ ಕಾರ್ಯಕ್ರಮ ಇಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಶ್ರೀ ಸಿದ್ದರಾಮಯ್ಯನವರು ಹಾಗೂ ಗುರುಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಂದ ಅಧಿಕೃತವಾಗಿ ಉದ್ಘಾಟಿಸಲ್ಪಟ್ಟಿತು. 


ಇದು Exclusively ಪುಸ್ತಕ ಸಂತೆಯೇನಾಗಿರದೆ inclusively with all ಆಗಿತ್ತು. ಆದರೆ ಆಯೋಜನೆಯ ಪ್ರಧಾನ ಉದ್ದೇಶ ಮಾತ್ರ ಪುಸ್ತಕ ಪ್ರದರ್ಶನ, ಮಾರಾಟ, ಪ್ರಕಾಶಕ, ಮಾರಾಟಗಾರ, ಲೇಖಕ ಮತ್ತು ಓದುಗರನ್ನು ಒಟ್ಟಿಗೆ ಬೆಸೆಯುವ ದೃಷ್ಟಿಯಿಂದ ಇದೊಂದು ಸಾರ್ಥಕವಾದ ಪುಸ್ತಕ ಸಂತೆಯಾಗಿತ್ತು.

ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ  ಇಂತಹದೊಂದು ಪುಸ್ತಕ ಸಂತೆಯೋ ಪುಸ್ತಕ ಮೇಳವೋ ಅರಮನೆಯ ಮೈದಾನದಲ್ಲಿ  ಆಯೋಜನೆಗೊಂಡಾಗಲೂ ಇಷ್ಟು ಸಂಖ್ಯೆಯಲ್ಲಿ ( ಈಗ 45 ಕ್ಕೂ ಅಧಿಕ ಮಳಿಗೆಗಳು) ಬಂದಿರಲಿಲ್ಲ. ಬಹುಶಃ 43 ಏ ಅಧಿಕ ಅನ್ನಿಸುತ್ತೆ. ಹಾಗೇ ನೋಡಿದರೆ ಇದು ದಾಖಲೆ ಇರಬೇಕು!


ಎಲ್ಲಾ ಪುಸ್ತಕ ಮಳಿಗೆಗಳ ಮುಂದೂ ಜನ ಜಿಗಿ ಜಿಗಿ ಮುಗಿಬಿದ್ದದ್ದು ನೋಡಿದೆ. ಮಾರಾಟದ ಪ್ರಮಾಣ ಎಷ್ಟು? ಎರಡು ದಿನ ಕಾದು ನೋಡಬೇಕು. (ಮಾರಾಟದಲ್ಲಿ ದಾಖಲೆ ಸ್ಥಾಪಿಸುವುದು ವೀರಲೋಕದ ಉದ್ದೇಶ ಇರಲಾರದು).   ಮೂರೊತ್ತೂ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರುವ ಯುವಜನತೆಯನ್ನು, ವಿದ್ಯಾರ್ಥಿ ಸಮೂದಾಯವನ್ನು,  ವೀಕೆಂಡ್ನಲ್ಲಿ ರೆಸಾರ್ಟ್, ಸಿನೆಮಾ, ಔಟಿಂಗ್ ಅಂತ ಹೊರ ಹೋಗುವ ನಗರದ ಜನರನ್ನು, ಸಾಫ್ಟ್ವೇರ್ ಮಂದಿಯನ್ನು ಪುಸ್ತಕಗಳ ಕಡೆ, ಸುಗಮ ಸಂಗೀತದ ಕಡೆ, ಕಲಾಮಳಿಗೆಗಳ ಕಡೆ,  ಆರ್ಗ್ಯಾನಿಕ್ ಆಹಾರ ಮಳಿಗೆಗಳ ಕಡೆ, ಕಲಾಮೇಳದ ಕಡೆ, ದೇಸಿ ಆಹಾರಮಳಿಗೆ, ದೇಸಿ ಜಾನಪದ ನೃತ್ಯ, ದೇಶದ ವಿವಿಧ ರಾಜ್ಯಗಳ ಉಡುಗೆ, ತೊಡುಗೆ, ಕಲಾಕೃತಿಗಳು  ಆಟಿಕೆಗಳು, ಸಾಹಿತಿಗಳ ಮಾತು ಕಥೆ, ಒಡನಾಟ, ಹೀಗೆ ಎಲ್ಲವೂ ಈ ಪುಸ್ತಕ ಸಂತೆಯಲ್ಲಿ ಇದ್ದುದರಿಂದ ಜನರನ್ನು ಇತ್ತ ತಿರುಗಿಸುವ, ಅವರ ನಗರ ಕೇಂದ್ರಿತ, ಯಾಂತ್ರಿಕ ಜೀವನದ ದಿಕ್ಕನ್ನು, ಅಭಿರುಚಿಯನ್ನು ಎರಡುದಿನಗಳ ಮಟ್ಟಿಗಾದರೂ ಮುಖಮಾಡುವಂತೆ, ಮಾಡುವಲ್ಲಿ ವೀರಲೋಕದ ಈ ಕೆಲಸ ಸಫಲವೂ ಸಾರ್ಥಕವೂ ಆಗಿದೆ.

ಇಂತಹ ಪ್ರಯತ್ನದ ಹಿಂದೆ ವೀರಕಪುತ್ರ ಶ್ರೀನಿವಾಸ, ಅನಂತ ಕುಣಿಗಲ್, ಅನಿಲ್ ರೆಡ್ಡಿ, ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಸಚಿವ ಉಗ್ರಪ್ಪ,  ಮುಂತಾದ ಸ್ಥಳೀಯ ವ್ಯಕ್ತಿಗಳು ಹಾಗು ವೀರಲೋಕ ತಂಡದ ನೂರಾರು ಜನರ ತಿಂಗಳಾನುಗಟ್ಟಲೆ ದುಡಿದ ಶ್ರಮವಿದೆ. ಅವರೆಲ್ಲರಿಗೂ ಈ ಸಾರ್ಥಕವಾದ ಕೆಲಸಕ್ಕಾಗಿ ಅಭಿನಂದನೆ ಸಲ್ಲಲೇಬೇಕು.

ಹತ್ತೂವರೆ ಎಕರೆಯಷ್ಟು ವಿಶಾಲವಾದ ಈ ಉದ್ಯಾನದಲ್ಲಿ  ಇಂತಹ  ನೂರಾರು ಮಳಿಗೆಗಳಿಗೆ ವ್ಯವಸ್ಥೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ‌. ಕೆಲವು ಮಳಿಗೆಗಳ ಒಳಗೆ ರಾತ್ರಿ ವಿದ್ಯುತ್ ಸಂಪರ್ಕದ ವಿಳಂಬ ಮತ್ತು ತಾತ್ಕಾಲಿಕ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಮೊದಲ ದಿನ ಸ್ವಲ್ಪ ತಡವಾಯಿತು ಎಂಬ ಮಾತು ಬಿಟ್ಟರೆ ಇಡೀ ಪುಸ್ತಕ ಸಂತೆಯ ಆಯೋಜನೆಯ ಬಗ್ಗೆ ಬಂದವರೆಲ್ಲರಿಂದಲೂ ಮುಕ್ತಕಂಠದಿಂದ ಪ್ರಶಂಶೆ ಕೇಳಿಬರುತಿತ್ತು.


ವಿವಿಧ ರಾಜ್ಯಗಳ ಆಹಾರವನ್ನು ಪರಿಚಯಿಸುವ ಆಹಾರ ಮಳಿಗೆಗಳ ಮುಂದೆಯಂತೂ ಜನ ಮುಗಿಬಿದ್ದಿದ್ದರು. ವಿವಿಧ ರಾಜ್ಯಗಳ  ಸೀರೆ ಮಳಿಗೆಗಳ ಮುಂದೆ ಹೆಂಗಸರ ದಂಡು ದೊಡ್ಡದಿತ್ತು. ಆಧ್ಯಾತ್ಮ , ಯೋಗ,  ಧ್ಯಾನ, ಕಾಮಿಕ್ಸ್ , ಮಕ್ಕಳ ಪುಸ್ತಕಗಳ ಮಳಿಗೆಗಳೂ ಇದ್ದವೂ, ಕನ್ನಡದ ಹೆಸರಾಂತ ಪುಸ್ತಕ ಮಳಿಗೆಗಳಲ್ಲದೆ, ಹೊಸ ಪ್ರಕಾಶಕರ ಮಳಿಗೆಗಳು ಹೆಚ್ಚಿದ್ದವು.

ಬೈಸಿಕಲ್, ಮಳಿಗೆ, IVF ಕೇಂದ್ರಗಳ ಮಳಿಗೆ, ಜನಪ್ರಿಯ ಆಸ್ಪತ್ರೆಗಳ ಮಳಿಗೆಗಳು, ರಿಯಲ್ ಎಸ್ಟೇಟ್  ಮಳಿಗೆಗಳು, ಕಾಸ್ಮೆಟಿಕ್ಸ್,  ಜೂಸ್, ವಿವಿಧ, ಫುಡ್ ಸ್ಟಾಲ್ಗಳು …ಅಬ್ಬಾ ! ನಿಜಕ್ಕೂ ಸಂತೆಯೆಂದರೆ ಸಂತೆಯೇ..‌ ಸರಕು ಸಂಸ್ಕೃತಿಯ ಈ ವಿಜೃಂಭಣೆಯ ಕಾಲದಲ್ಲಿ  ಪುಸ್ತಕ ಸಂಸ್ಕೃತಿಯನ್ನೂ ಅದರೊಟ್ಟಿಗೇ ಪ್ರಮೋಟ್ ಮಾಡುವ ಈ ಪರಿಯ ಜಾಣ್ಮೆಗೆ ಹೊಟ್ಟೆ ಉರಿದುಕೊಳ್ಳದೆ, ಸಂತಸದಿಂದ ಇದೇ ದಿನ  ಭಾನುವಾರ ( February 11 ಕ್ಕೆ ) ನಡೆಯುವ  ಪುಸ್ತಕ ಸಂತೆಗಾದರೂ ಹತ್ತಿರದವರಾದರೂ ಹೋಗಿ ಬನ್ನಿ ಮಿತ್ರರೆ.

ಕನ್ನಡ ಕೆಲಸವನ್ನು ಈ ರೀತಿಯಾಗಿ, ಹೊಸ ರೀತಿಯಲ್ಲಿ  ಮಾಡುವ ವೀರಕ ಪುತ್ರ ಶ್ರೀನಿವಾಸ್ ಮತ್ತು ಅವರ ಜೊತೆಗೆ ಕೈಜೋಡಿಸುವ ಗೆಳೆಯರು ಯಾರೇ ಮಾಡಲಿ ಒಂದು ಒಳ್ಳೆಯ ಮಾತಾಡಿ ಪ್ರಶಂಸಿಸೋಣ. ಅಡಿಗರು ಕರ್ನಾಟಕ ಏಕೀಕರಣ ಪೂರ್ವದಲ್ಲಿ  ಹೊಸ ನಾಡನ್ನು ಕಟ್ಟುವುದಕ್ಕೆ ಇಂತಹ  ಕನಸುಗಾರರಾದ ನವತರುಣರನ್ನೇ ನಂಬಿಕೊಂಡೇ ಅಲ್ಲವೇ ಹೇಳಿದ್ದು….
     
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ
ಉತ್ಸಾಹ ವೀಚಿಗಳ ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ .ಕಟ್ಟುವೆವು ನಾವು ಹೊಸ ನಾಡೊಂದನು …
ಎಂದು ..? ಇಂತಹ ಹೊಸ ನೆತ್ತರಿನ ಬಿಸಿ ನೆತ್ತರಿನ ಸಂಕಲ್ಪ ಬಲದ ಜಾಗರಣೆಯ ಯುವಕರಿಂದಲೇ ಹೊಸನಾಡಿನ ಹೊಸ ಭಾಷ್ಯವ ಬರೆಯಬೇಕಿದೆ ……

ಶುಭವಾಗಲಿ, ಜಯವಾಗಲಿ ವಿರಕಪುತ್ರ ನಿಮ್ಮೆಲ್ಲ ಕನ್ನಡದ ಕೆಲಸಗಳಿಗೆ ಜಯವಾಗಲಿ ಎಂದು ಹಾರೈಸುವ.

– ಪ್ರೊ.ಟಿ.ಯಲ್ಲಪ್ಪ, ಕವಿಗಳು

Leave a Reply