EWS ಎನ್ನುವ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸದಿದ್ದರೆ ಎಲ್ಲ ರೀತಿಯಲ್ಲೂ ಸರ್ವನಾಶ

3 years ago

ಸಂವಿಧಾನ ಪ. ಜಾತಿ ಮತ್ತು ಪ. ಪಂಗಡಗಳಿಗೆ ಮೀಸಲಾತಿ ಕೊಟ್ಟಾಗ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿಗಳಿಗೆ ಸಹಜವಾಗಿಯೇ ಅಸಹನೆ ಇತ್ತು. ದಲಿತರಿಗೆ ಸಿಕ್ಕ ಮೀಸಲಾತಿಯ ವಿರುದ್ಧ ಒಂದು ಕಡೆ ಹಿಂದುಳಿದ ಜಾತಿಗಳನ್ನು ಎತ್ತಿ ಕಟ್ಟುತ್ತಲೇ ಮೀಸಲು ಸ್ಥಾನಗಳ ಹೊರತಾದ ಅವಕಾಶಗಳನ್ನು ಜನರಲ್ ಮೆರಿಟ್ ಹೆಸರಿನಲ್ಲಿ ಬ್ರಾಹ್ಮಣರು ಕಬಳಿಸಿಕೊಂಡು ಬರುತ್ತಿದ್ದರು‌. ಆದರೆ ಯಾವಾಗ ಮಂಡಲ್ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ವಿ.ಪಿ. ಸಿಂಗ್ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಟ್ಟರೋ ಆವಾಗ‌ ಬ್ರಾಹ್ಮಣರ monopolyಗೆ ನಿಜವಾಗಿಯೂ ದೊಡ್ಡ ಪೆಟ್ಟು ಬಿದ್ದಿತು.

ಮೀಸಲಾತಿ ವಿರೋಧಿ ಚಳುವಳಿಯನ್ನು ಬ್ರಾಹ್ಮಣರು ಗಂಬೀರವಾಗಿ ತೆಗೆದುಕೊಂಡಿದ್ದೇ ಮಂಡಲ್ ಶಿಫಾರಸ್ಸು ಜಾರಿಯಾದ ನಂತರ. ಎಸ್‌ಸಿ, ಎಸ್‌ಟಿಗಳಿಗೆ ಇದ್ದ 18% ಮೀಸಲಾತಿ ಹಿಂದುಳಿದ ವರ್ಗಗಳಿಗೂ ಸಿಕ್ಕಿ 50% ವರೆಗೂ ಮೀಸಲಾತಿಯನ್ನು ವಿಸ್ತರಿಸಿದ್ದು ಬ್ರಾಹ್ಮಣರಿಗೆ ನಿಜವಾಗಿಯೂ ತಮ್ಮ ಬುಡ ಅಲ್ಲಾಡತೊಡಗಿದ್ದನ್ನು ಅರ್ಥ ಮಾಡಿಸಿತು.

ಆಗ ಶುರುವಾಗಿದ್ದೆ ಮಂಡಲ್ Vs ಕಮಂಡಲ್ ಚಳುವಳಿ, ಅಡ್ವಾಣಿ ರಥಯಾತ್ರೆ, ಅಯೋಧ್ಯೆ ವಿವಾದ, ಬಾಬರಿ ಮಸೀದಿ ಧ್ವಂಸ, ಮುಸ್ಲಿಂ ದ್ವೇಷದಂತಹ ಕೃತ್ಯಗಳು. ಇವೆಲ್ಲವೂ ಸ್ವಾತಂತ್ರ್ಯಾನಂತರದಲ್ಲಿ ದಲಿತ, ಹಿಂದುಳಿದ ಜಾತಿಗಳಿಗೆ ಸಿಕ್ಕ ಮೀಸಲಾತಿಯಿಂದ ಶುರುವಾದ ಸಾಮಾಜಿಕ ಕ್ರಾಂತಿಯ ವಿರುದ್ಧ ಬ್ರಾಹ್ಮಣರು ನಡೆಸಿದ ಪ್ರತಿಕ್ರಾಂತಿಯ ಪ್ರಯತ್ನಗಳು.

ಮಂಡಲ್ ನಂತರ ನಡೆದ ಮೀಸಲಾತಿಯ ವಿರೋಧಿ ಹೋರಾಟಕ್ಕೆ ದಲಿತರು ಒಡ್ಡಿದ ಪ್ರತಿರೋಧದಿಂದ ಮೀಸಲಾತಿಯನ್ನು ತೆಗೆದುಹಾಕಲು ಸಾಧ್ಯವಿಲ್ಲವೆಂದು ಅರ್ಥ ಮಾಡಿಕೊಂಡ ಸಂಘಪರಿವಾರ ಒಂದು ಕಡೆ ಮುಸ್ಲಿಂ ದ್ವೇಷದ ನೆಪದಲ್ಲಿ ತೊಂಬತ್ತರ ದಶಕದಿಂದ ಈಚೆಗೆ ಹಿಂದುಳಿದ ಜಾತಿಗಳನ್ನು ಕೋಮುವಾದಕ್ಕೆ ತಳ್ಳಿ ಬೌದ್ಧಿಕ ಗುಲಾಮರನ್ನಾಗಿಸಿಕೊಳ್ಳತೊಡಗಿತು. ಇನ್ನೊಂದು ಕಡೆ ಬಹುಜನ ಚಳುವಳಿ ದಲಿತ, ಹಿಂದುಳಿದ ಸಮುದಾಯದಲ್ಲಿ ಮೂಡಿಸಿದ ಎಚ್ಚರದ ವಿರುದ್ಧ ಐಡೆಂಟಿಟಿ ರಾಜಕಾರಣವನ್ನು ದಲಿತ ಜಾತಿಗಳನ್ನು ಒಡೆಯುವುದಕ್ಕೆ ಬಳಸಿಕೊಂಡು ದಲಿತರ ದಾರಿ ತಪ್ಪಿಸಿತು.

ದಲಿತ ಮತ್ತು ಹಿಂದುಳಿದವರನ್ನು ದಿಕ್ಕು ತಪ್ಪಿಸಿ ಇವತ್ತು ಸಾಮಾಜಿಕ ನ್ಯಾಯದ ಸಾಧನವಾಗಿರುವ ಮೀಸಲಾತಿಯ ಮೌಲ್ಯವನ್ನು ಕಳೆಯುವ ಹೆಜ್ಜೆಯಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಹತ್ತು ಪರ್ಸೆಂಟ್ ಮೀಸಲಾತಿ ನೀಡುವ ಮೂಲಕ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಸಮಾನತೆಯ ಚರ್ಚೆಯನ್ನೇ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

ದಲಿತ, ಹಿಂದುಳಿದ ಜಾತಿಗಳು ಈ EWS ಎನ್ನುವ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸದಿದ್ದರೆ ಎಲ್ಲ ರೀತಿಯಲ್ಲೂ ಸರ್ವನಾಶವಾಗುತ್ತವೆ.

– ವಿ. ಎಲ್. ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

Leave a Reply