ಚುನಾವಣೋತ್ತರ ಸಮೀಕ್ಷೆಯತ್ತ ಎಲ್ಲರ ಚಿತ್ತ

2 years ago

ದೆಹಲಿ: 2024 ರ ಲೋಕಸಭಾ ಚುನಾವಣೆಯ ಮತದಾನ ಜೂನ್ 1ರ ಶನಿವಾರ ಮುಕ್ತಾಯವಾಗಲಿದೆ. ಇದೀಗ ಎಲ್ಲರ ಕಣ್ಣುಗಳು ಚುನಾವಣೋತ್ತರ ಸಮೀಕ್ಷೆ 2024ರ ಮೇಲೆ ನೆಟ್ಟಿದೆ. ಬಿಜೆಪಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದೆಯೇ ಅಥವಾ ವಿರೋಧ ಪಕ್ಷದ ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಲು ಸಾಧ್ಯವಾಗುತ್ತದೆಯೇ? ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳಲಿದೆಯೇ? ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ, ಚಾಣಕ್ಯ, ಟೈಮ್ಸ್ ನೌ-ಇಟಿಜಿ, ಸಿ-ವೋಟರ್ ಮತ್ತು ಸಿಎಸ್‌ಡಿಎಸ್-ಲೋಕನೀತಿಯಂತಹ ವಿಭಿನ್ನ ಸಂಸ್ಥೆಗಳು ಇಂದು ಸಂಜೆ 6:30ಕ್ಕೆ ಚುನಾವಣೋತ್ತರ ಸಮೀಕ್ಷೆಗಳನ್ನು ಬಿಡುಗಡೆ ಮಾಡಲಿವೆ. ದೇಶದ ಹಿಂದಿ, ಇಂಗ್ಲಿಷ್ ಸೇರಿದಂತೆ ಸ್ಥಳೀಯ ಭಾಷೆಯ ಸುದ್ದಿ ಸಂಸ್ಥೆಗಳು ಸಮೀಕ್ಷೆಯನ್ನು ತೆರೆದಿಡಲಿವೆ.

ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಎಂದರೇನು?: ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಎನ್ನುವುದು ಚುನಾವಣೋತ್ತರ ಸಮೀಕ್ಷೆಯಾಗಿದ್ದು, ಅದು ದೇಶದ ಮತದಾರರ ಒಲವು ಯಾವ ಪಕ್ಷದ ಪರ ಅಥವಾ ವಿರುದ್ಧ ಮನಸ್ಥಿತಿಯನ್ನು ಹೊಂದಿದೆ ಎಂದು ಊಹಿಸುತ್ತದೆ. ಒಂದು ರಾಜಕೀಯ ಪಕ್ಷ ಎಷ್ಟು ಸ್ಥಾನಗಳಲ್ಲಿ ಗೆಲುವ ದಾಖಲಿಸುತ್ತದೆ ಎಂಬ ಅಭಿಪ್ರಾಯದ ಸಂಗ್ರಹ ರೂಪವಾಗಿರುತ್ತದೆ. ಚುನಾವಣೋತ್ತರ ಸಮೀಕ್ಷೆಗಳು ಅಧಿಕೃತ ಚುನಾವಣಾ ಫಲಿತಾಂಶಗಳಂತೆಯೇ ಇರುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ಕೆಲವು ಸಂಸ್ಥೆಗಳು ನಿಖರವಾದ ಸಂಖ್ಯೆಯನ್ನು ನೀಡುತ್ತವೆ ಎಂಬದನ್ನು ಹೊರತುಪಡಿಸಿದರೆ ಇನ್ನು ಕೆಲವೊಮ್ಮೆ ಸಮೀಕ್ಷೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳೂ ಇರುತ್ತವೆ.

ಅಧಿಕೃತ ಲೋಕಸಭಾ ಚುನಾವಣಾ ಫಲಿತಾಂಶ 2024ರ ಜೂನ್ 4 ರಂದು ಭಾರತೀಯ ಚುನಾವಣಾ ಆಯೋಗ ಮತ ಎಣಿಕೆಯ ನಂತರ ಅಧಿಕೃತವಾಗಿ ಘೋಷಿಸುತ್ತದೆ.

ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳನ್ನು ಮಾಧ್ಯಮ ಸಂಸ್ಥೆಗಳು ಇಂದು ಸಂಜೆ 6:30 ರ ನಂತರ ಬಿಡುಗಡೆ ಮಾಡಲಿವೆ. ಶನಿವಾರ, ಜೂನ್ 1ರಂದು 7ನೇ ಹಂತದ ಮ್ಯಾರಾಥಾನ್ ಚುನಾವಣೆ ಮತದಾನ ಮುಗಿದ ನಂತರ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆಯಾಗಲಿವೆ.

ಲೋಕಸಭೆ ಚುನಾವಣೆ 2024 ಏಳು ಹಂತಗಳಲ್ಲಿ ನಡೆಯದಿದೆ. ಮೊದಲ ಹಂತ ಏಪ್ರಿಲ್ 17 ರಂದು ಮತ್ತು ಕೊನೆಯದು ಜೂನ್ 1 ರಂದು ನಡೆದಿದೆ. 543 ಲೋಕಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದು, ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.

ಈ ನಡುವೆ, ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಯ ಫಲಿತಾಂಶ ಜೂನ್ 2 ರಂದು ಪ್ರಕಟವಾಗಲಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದ ಫಲಿತಾಂಶಗಳು ಜೂನ್ 4 ರಂದು ಪ್ರಕಟವಾಗಲಿವೆ.

Leave a Reply