ಮೋದಿ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ: ರಾಮಲಿಂಗಾರೆಡ್ಡಿ

3 years ago

ಬೆಂಗಳೂರು: ಅದಾನಿ ಸಮೂಹ ಸಂಸ್ಥೆಯ ಹೂಡಿಕೆ ಮತ್ತು ಸಾಲ ಹಗರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ‌ಮತ್ತು ಇತರೆ ಪ್ರತಿಪಕ್ಷಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿವೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ‌ ಪ್ರತಿಮೆ ಮುಂದೆ ಧರಣಿ ನಡೆಸಿದರೆ ಹಲವೆಡೆ ಎಸ್‍ಬಿಐ ಬ್ಯಾಂಕ್‍ಗಳು ಹಾಗೂ ಎಲ್‍ಐಸಿ ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿದರು.

ಅದಾನಿ ಗುಂಪಿನ ಹಗರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿ ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಘೋಷಣೆ ಕೂಗಿ ಬ್ಯಾನರ್ ಪ್ರದರ್ಶನ ಮಾಡಿದರು.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿ ಸೇರಿದ ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ನೂರಾರು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಧೋರಣೆಯನ್ನು ಖಂಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಮಲಿಂಗಾರೆಡ್ಡಿ ಮಾತನಾಡಿ, ಅದಾನಿ ಸಮೂಹದಲ್ಲಿ ಎಲ್‍ಐಸಿ 36 ಸಾವಿರ ಕೋಟಿ ಹೂಡಿಕೆ ಮಾಡಿದರೆ, ಎಸ್‍ಬಿಐ 80 ಸಾವಿರ ಕೋಟಿ ರೂ ಸಾಲ ನೀಡಿದ್ದು ಈ ಬಗ್ಗೆ ಪ್ರಧಾನಿ ಮೋದಿ ಬಾಯಿ ಬಿಡುತ್ತಿಲ್ಲ ಎಂದು ದೂರಿದರು.

ಅದಾನಿ ಬೆಂಬಲಕ್ಕೆ ಮೋದಿ ನಿಂತಿದ್ದು, ಅದರಿಂದಾಗಿ ಮೋದಿ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ಹಣವೆಲ್ಲಾ ಯಾರದು ಎಂದು ಪ್ರಶ್ನಿಸಿದರು.

ಜನ ಸಾಮಾನ್ಯರ ಉಳಿತಾಯದ ಹಣವನ್ನು ಮೋದಿ ಸರ್ಕಾರ ಉಳ್ಳವರಿಗೆ ನೀಡುತ್ತಿದೆ. ಅದಾನಿ ಸಮೂಹದ ಹಗರಣ ಕುರಿತು ತನಿಖೆಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಕೇಂದ್ರ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿ ಎಲ್‍ಐಸಿ ಅದಾನಿ ಕಂಪೆನಿಗಳ ಷೇರುಗಳ ಮೇಲೆ 29 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಸಾರ್ವಜನಿಕ ಹಣಕಾಸು ಬ್ಯಾಂಕ್ ಆಗಿರುವ ಎಸ್‍ಬಿಐನಿಂದ ಅದಾನಿ ವ್ಯವಹಾರಗಳಿಗೆ 27 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಅನುಚಿತ ಮಾರ್ಗದಲ್ಲಿ ಅದಾನಿ ಸಮೂಹ ವಹಿವಾಟು ನಡೆಸುತ್ತಿದೆ ಎಂದು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಡನ್ ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಕಂಪೆನಿಯ ಷೇರು ಮೌಲ್ಯ ಕುಸಿಯಲಾರಂಭಿಸಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನಷ್ಟವಾಗಿದೆ ಎಂಬ ಅಂದಾಜುಗಳಿವೆ ಎಂದು ಪ್ರತಿಭಟನಾ ನಿರತರು ಆಪಾದಿಸಿದರು.

Leave a Reply