ಪಾಕಿಸ್ತಾನದಂತ ವೈರಿ ತಿಂದುಕೊಬ್ಬಿದರೂ ಕಷ್ಟ, ಉಪವಾಸವಿದ್ದರೂ ಕಷ್ಟ

2 years ago

ನನ್ನ ನಿದ್ದೆಗಿಂತ ಈ ವಿಷಯ ಮಹತ್ವದ್ದಲ್ಲ, ಆದರೂ ಈ ವಿಷಯ ಟಿಪ್ಪಂಣಿ ಮಾಡಲು ನನ್ನನ್ನು ಪ್ರೆರೇಪಿಸುತ್ತದೆ, ನನ್ನ ನಿದ್ದೆಯನ್ನು ಕೆಡಿಸುತ್ತಿದೆ. ನಿಮ್ಮನ್ನು ಓದುವಂತೆ ಪ್ರೆರೇಪಿಸುತ್ತದೆ.

ಜಗತ್ತಿನಲ್ಲಿ ಇವನಿಗೆ ಯಾರೂ ಸ್ನೇಹಿತರಿಲ್ಲ. ಇವನಿಗಾಗಿ ಯಾರೂ ಮರುಗುವವರಿಲ್ಲ. ಇವನು ಭಾರತದ ಪ್ರಧಾನಿಗೆ ಫ್ಯಾಸಿಸ್ಟ್ ಎಂದವ. ಅಮೇರಿಕೆ ತನ್ನ ಪದಚ್ಯುತಿಗೆ ಷ್ಯಡ್ಯಂತ್ರ ರಚಿಸಿದೆ ಎಂದ್ಹೇಳಿ ಅವರ ಅವಕೃಪೆಗೆ ತುತ್ತಾದವ. ಮುಸ್ಲಿಂ ರಾಷ್ಟ್ರಗಳ ನಾಯಕನಾಗಲು ಹೋಗಿ ಎಡವಿ ಬಿದ್ದವ. ತನ್ನನ್ನು ಪ್ರಧಾನಿಯ ಹುದ್ದೆಯಲ್ಲಿ ಪ್ರತಿಷ್ಠಾಪಿಸಿದ ತನ್ನ ದೇಶದ ಶಕ್ತಿಶಾಲಿ ಸೈನ್ಯಕ್ಕೆ ಸೆಡ್ಡು ಹೊಡೆದವ. ಇವೆಲ್ಲವೂ ಇವನನ್ನು ಖಳನಾಯಕನನ್ನಾಗಿಸಿದ್ದವು. ಇವನು ಗಳಿಸಿಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ತನ್ನ ಹತ್ತು ಸಾವಿರ ಹಿಂಬಾಲಕರು ಜೈಲು ಪಾಲಾದರು. ಮುದ್ದಿನ ಹೆಂಡತಿ ಜೈಲಿನಲ್ಲಿ ಬಿರಿಯಾನಿಗೆ ಪರಿತಪಿಸುವಂತಾಯಿತು. ತನ್ನ ಉಳಿದಿರುವ ಆಯುಷ್ಯವನ್ನು ಕಂಬಿ ಹಿಂದೆ ಕಳೆಯುವಂತೆ ಮಾಡಿಕೊಂಡ ಪಠಾಣನ ಕಥೆ ರೋಚಕ. ಅದನ್ನು ತಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಸಬ್ ಕಾಂಟಿನೆಂಟಿನಲ್ಲಿ ಹುಚ್ಚು ಹಿಡಿಸುವ ಕ್ರಿಕೆಟ್ ಆಟದ ಪಾಕಿಸ್ತಾನದ ತಂಡದ ನಾಯಕ ನಾಗಿದ್ದವನಿವನು. 1992 ವರ್ಲ್ಡ್ ಕಪ್ ಮ್ಯಾಚುಗಳಲ್ಲಿ ಇನ್ನೇನು ಇವರು ವಿಮಾನ ಏರುತ್ತಾರೆ ಎಂದವರಿಗೆ ತಿರುಗೇಟು ನೀಡಿ ವರ್ಲ್ಡ್ ಕಪ್ ಅನ್ನು ಎತ್ತಿ ಹಿಡಿದ ಜಟ್ಟಿ ಇವನು.

ಇವನೆ ಪಾಕಿಸ್ತಾನದ ಪಠಾಣ ಇಮ್ರಾನ್ ಖಾನ. ಮಾಜಿ ಪ್ರಧಾನಿ. ನಿನ್ನೆ ನಡೆದ ಚುನಾವಣೆಯಲ್ಲಿ ಬ್ಯಾಟಿಲ್ಲದೆ ೯೧ ರನ್ನ ಬಾರಿಸಿದ ಮಹಾನ್ ಚಾಣಾಕ್ಷಿ. (ಪಿ.ಟಿ.ಐ. ಚುನಾವಣಾ ಚಿಹ್ನೆ ಕ್ರಿಕೆಟ್ ಬ್ಯಾಟ್, ಹಾಗು ಆವನ ಪಕ್ಷದ ಗೆದ್ದ ಅಭ್ಯರ್ಥಿಗಳ ಸಂಖ್ಯೆ ೯೧)

೨೦೨೩ ಮೇ ೯ ಪಾಕಿಸ್ತಾನದ ಇತಿಹಾಸದಲ್ಲಿ ಕಂಡು ಕೇಳರಿಯದ ಕರಾಳ ದಿನ. ಅಂದು ಕನಿಷ್ಠ ಹತ್ತು ಸಾವಿರ ಪಾಕ್ ನಾಗರಿಕರನ್ನು ಕೊಂದ ದಿನ. ಸಾವಿರಾರು ಹೆಣ್ಣುಮಕ್ಕಳು ವಿಧವೆಯರು, ದಾಸಿಯರಾದ ದಿನ. ಅವರು ಮಾಡಿದ ದೊಡ್ಡತಪ್ಪಂದರೆ ತನ್ನದೇ ದೇಶದ ಸೈನಿಕರ ವಿರುದ್ಧ ಮಾತಾಡಿದ್ದು.

ತಾವೇ ಅಧಿಕಾರಕ್ಕೆ ತಂದ ನಾಯಿ ತಮಗೆ ಗುರ್ ಎಂದಿದ್ದು ಸಹಿಸಲಾಗಲಿಲ್ಲ ಪಾಕಿಸ್ತಾನದ ಜನರಲ್ಸ್ ಗಳಿಗೆ. “ಅವನ ಹುಟ್ಟಡಿಗಿಸಿ ” ಎಂದರು ಅವರು. ಜನರಲ್ಸ್ ಆಜ್ಞೆಗೆ ಸೈ ಎಂದರು ಹೊಟ್ಟೆಗೆ ಗತಿಯಿಲ್ಲದ ಸೈನಿಕರು. ತಮ್ಮದೆ ಅಕ್ಕತಂಗಿಯರಿಗೆ ಕಟ್ಟಿದರು ವಿಧವೆಯ ಪಟ್ಟ.

ಇದಕ್ಕೆ ಎದೆಗುಂದಲಿಲ್ಲ ಈ ಪಠಾಣ. ರಸ್ತೆಗೆ ಇಳಿದ. ರಾಜಧಾನಿಗೆ ಮುತ್ತಿಗೆ ಹಾಕಲು ಹೊರಟ. ಪರಿಸ್ಥಿತಿ ಕೈಮೀರುವುದೆಂದರಿತ ಸೈನ್ಯ ಸುಳ್ಳು ಕೇಸುಗಳನ್ನು ಅವನ ಮೇಲೆ ದಾಖಲಿಸಿ ಜೈಲಿಗೆ ಅಟ್ಟಿದರು ಈ ಪಠಾಣನನ್ನು.

ಎದೆಗುಂದಲಿಲ್ಲ ಅವನು. ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ ನಿಮ್ಮನ್ನು ಎಂದ. ಚುನಾವಣೆ ಬಂತು. ಜೈಲಿನಿಂದಲೇ ಸಂದೇಶ ನೀಡಲಾರಂಭಿಸಿದ. ಸೋಶಿಯಲ್ ಮೀಡಿಯಾಗಳ ಮುಖಾಂತರ ಜನರ ಬಳಿ ಹೋದ, ಅವರಿಗೆ ಕೇಳಿದ, “ನನ್ನ ತಪ್ಪೇನು ಹೇಳಿ?” ಎಂದ. ಮತ್ತೆ ಎಚ್ಚರಗೊಂಡಿತು ಸೈನ್ಯ. ಬ್ಯಾನ್ ಮಾಡಿದರವರು ಇವನ ಪಕ್ಷವಾದ ಪಾಕಿಸ್ತಾನ್ ತೆಹರೀಕ್ ಇನ್ಸಾಫ್ ಪಾರ್ಟಿಯನ್ನು. ಅದರ ಚುನಾವಣಾ ಚಿನ್ಹೆಯಾದ ಬ್ಯಾಟನ್ನು ಮುಟ್ಟುಗೋಲು ಹಾಕಿದರು. ಪಿ.ಟಿ.ಐ. ಪಾರ್ಟಿಯನ್ನೇ ಬರಕಾಸ್ತುಗೊಳಿಸಿದರು.

ಕಟ್ಟಿ ಬೆಳೆಸಿದ ಪಾರ್ಟಿಗಿಲ್ಲ ಚುನಾವಣೆಯ ಅಧಿಕೃತ ಮುದ್ರೆ. ಪಿ.ಟಿ.ಐ ನಾಯಕ ಹಾಗು ಉಪ ನಾಯಕರು ಜೇಲಿನಲ್ಲಿ. ಆದರೂ ಕೆಳಗೆ ಬೀಳಲಿಲ್ಲ ಈ ಪಠಾಣ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುಖಾಂತರ ಮತದಾರರಿಗೆ ಬಲೆ ಬೀಸಿದ. ತನ್ನ ದೇಶದ ಇಂದಿನ ಗತಿಗೆ ಮೀಯಾ ನವಾಜ ಶರೀಫ್ ಹಾಗು ಬುಟ್ಟೋಗಳ ಸಂತತಿಯೇ ಕಾರಣನೆಂದ. ಯುವಕರನ್ನು ಬಡಿದೆಬ್ಬಿಸಿದ, ಬನ್ನಿ ಮತದಾನ ಮಾಡಿ ನಿಮಗಿದು ಕೊನೆಯ ಅವಕಾಶ ಎಂದ.

ಎಂದಿಲ್ಲದಂತೆ ಎದ್ದು ಬಂದರು ಪಾಕ್ ಯುವಕರು. ರೆಕಾರ್ಡ್ ಮುರಿಯುವ ಮತ ಚಲಾಯಿಸಿದರು. ತಮ್ಮ ಹಕ್ಕನ್ನು ಪ್ರತಿಪಾದಿಸಿದರು ಫೆಬ್ರವರಿ ಎಂಟರಂದು. ಅಂದೇ ರಾತ್ರಿ ಎಣಿಕೆ ಪ್ರಾರಂಭವಾಯಿತು. ಪಠಾಣನಿಗೆ ಭರ್ಜರಿ ಗೆಲುವಾಗುವ ಲಕ್ಷಣ ಗೋಚರಿಸಿದವು. ಆಗ ಮತ್ತೊಮ್ಮೆ ಕಾಲಿಟ್ಟಿತು ಸೈನ್ಯ. ಎಣಿಕೆಯ ವಿವರಗಳು ಬಹಿರಂಗವಾಗದಂತೆ ತಡೆ ಹಿಡಿದರು ನಿನ್ನೆ ರಾತ್ರಿ. ಪಂಜಾಬಿನಲ್ಲಿ ನವಾಜ ಶರೀಫನ ಪಿ.ಎನ್.ಎಂ.ಎಲ್. ಗೆಲ್ಲುವಂತೆ ನೋಡಿಕೊಂಡರು. ದೇಶದ ಚುಕ್ಕಾಣಿ ಹಿಡಿಯುವ ನ್ಯಾಷನಲ್ ಅಸೆಂಬ್ಲಿಯಲ್ಲಿ ಶರೀಫನ ಪಕ್ಷ ಬಹು ದೊಡ್ಡ ಪಕ್ಷವಾಗುವಂತೆ ಫಲಿತಾಂಶ ಬದಲಿಸಿದರು. ಆದರೆ ಇಮ್ರಾನ್ ಖಾನ್ ಬೆಂಬಲಿತ ೯೧ ಸ್ವತಂತ್ರ ಅಭ್ಯರ್ಥಿಗಳು ಜಯಶಾಲಿಯಾಗುವುದನ್ನು ತಡೆಹಿಡಿಯಲಾಗಲಿಲ್ಲ. (ಚುನಾವಣೆಯಲ್ಲಿ ಇಮ್ರಾನ್ 2/3 ಮೆಜಾರಿಟಿಯಲ್ಲಿ ಗೆದ್ದಿದ್ದಾನೆಂದು ಸೋಶಿಯಲ್ ಮೇಡಿಯಾಗಳು ಹೇಳುತ್ತವೆ)

ಈಗ ನ್ಯಾಷನಲ್ ಅಸೆಂಬ್ಲಿಯಲ್ಲಿ ಯಾರಿಗೂ ಬಹುಮತವಿಲ್ಲ. ಜಯಶಾಲಿಯಾದ ಇಮ್ರಾನ್ ಖಾನನ ಸ್ವತಂತ್ರ ಅಭ್ಯರ್ಥಿಗಳನ್ನು ಬೇಟೆಯಾಡಲು ಅವರು ಬಳಸುತ್ತಿದ್ದಾರೆ ಪ್ರೈವೇಟ್ ಜೆಟ್ ವಿಮಾನಗಳನ್ನು.

ಪಾಕಿಸ್ತಾನದಲ್ಲಿ ಏನಾದರೂ ಆಗಬಹುದು. ಇಮ್ರಾನ್ ಬೆಂಬಲಿತ ಸರಕಾರ ಬರಬಹುದು. ಸೇನೆ ಬೆಂಬಲಿತ ನವಾಜ ಶರಿಫ್ ಪ್ರಧಾನಿಯಾಗಬಹುದು. ಬುಟ್ಟೊ ಸಂತಂತಿಯಾದ ಬಿಲಾವಲ ಬುಟ್ಟೊ ಭಿಕಾರಿ ದೇಶದ ಚುಕ್ಕಾಣಿಯನ್ನು ಹಿಡಿಯಬಹುದು. ಜನ ಬೀದಿಗೆ ಬಂದು ದಂಗೆ ಎಳಬಹುದು. ಸಿವಿಲ್ ವಾರ್ ಆಗಬಹುದು. ದೇಶ ಇಬ್ಬಾಗವೂ ಆಗಬಹುದು.

ನೆರೆಮನೆಯ ಸದ್ದು ನಮಗೆ ನಿದ್ದೆ ತರುವುದಿಲ್ಲ. ಏನಾಗುತ್ತಿದೆ ಎಂದು ಮನೆಯ ಹೊರಗೆ ಬಂದು ಕುತೂಹಲದಿಂದ ಕಿವಿಗೊಡುತ್ತೇವೆ. ನಿದ್ದೆಯನ್ನು ಕಳೆದುಕೊಳ್ಳುತ್ತೆವೆ. ನಮಗೆ ಶಾಂತಿಯಿಲ್ಲ.

ಪಾಕಿಸ್ತಾನದಂತ ವೈರಿ ತಿಂದುಕೊಬ್ಬಿದರು ಕಷ್ಟ.ಅದು ಉಪವಾಸವಿದ್ದರೂ ಕಷ್ಟ.

  • ಜಿ.ಬಿ.ಪಾಟೀಲ್, ಬೆಂಗಳೂರು

Leave a Reply