ಕೇಂದ್ರ ಸರ್ಕಾರ ನಡೆಸುವ ಯುಪಿಎಸ್ಸಿ ಪರೀಕ್ಷೆಗೆ ಐ ಎ ಎಸ್, ಐ ಪಿ ಎಸ್, ಐ ಎಫ್ ಎಸ್ ಅಧಿಕಾರಿಗಳಾಗುವ ಕನಸುಗಳನ್ನು ಹೊತ್ತು ಲಕ್ಷಾಂತರ ಯುವ ಜನಾಂಗ ಹಲವಾರು ವರ್ಷಗಳ ಸತತ ಅಧ್ಯಯನದ ನಂತರ ಪರೀಕ್ಷೆಗಳಿಗೆ ಅಭ್ಯರ್ಥಿಗಳಾಗಿರುತ್ತಾರೆ. ಇಲ್ಲಿಯೂ ಸಹ ಯು ಪಿ ಎಸ್ ಸಿ ಸಂಸ್ಥೆ ಅನಗತ್ಯವಾದಂತಹ ತೊಂದರೆಯನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿ ಸಮುದಾಯದ ಮೇಲೆ ಒಡ್ಡುತ್ತಿದೆ. ವಿಶೇಷವಾಗಿ ಜಾತಿ ದೃಢೀಕರಣ ಪತ್ರ ಮತ್ತು ಆದಾಯ ದೃಢೀಕರಣ ಪತ್ರ ಈ ವಿಚಾರದಲ್ಲಿ ಇವರ ನಿಲುವು ಪರೀಕ್ಷಾರ್ಥಿಗಳಿ ತೊಂದರೆಯಾಗುತ್ತಿದೆ.
ಸಾಮಾನ್ಯವಾಗಿ ತಹಶೀಲ್ದಾರ್ ಕಛೇರಿಗಳಲ್ಲಿ ನೀಡುವಂತಹ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಧೃಡೀಕರಣ ಪತ್ರ ಐದು ವರ್ಷಗಳ ಅವಧಿಗೆ ನಿಗದಿಯಾಗಿರುತ್ತದೆ. ಆದರೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳಿಗೆ ಸಂಸ್ಥೆಯವರು ಪರೀಕ್ಷೆಯ ಸಮಯದಲ್ಲಿ ಮತ್ತೆ ಹೊಸದಾಗಿ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂಬ ಷರತ್ತನ್ನು ವಿಧಿಸುತ್ತಾರೆ.
ಸಂಬಂಧಪಟ್ಟ ಕಚೇರಿಯಲ್ಲಿ 5 ವರ್ಷಕ್ಕೆ ಎಂದು ನಿಗದಿಮಾಡಲ್ಪಟ್ಟ ಇಂತಹ ದೃಢೀಕರಣ ಪತ್ರಗಳಿಗೆ ವರ್ಷ ವರ್ಷವೂ ಹೊಸದಾಗಿ ನೀಡಲು ಅಲ್ಲಿರುವ ತಂತ್ರಾಂಶಗಳು ಅವಕಾಶ ನೀಡುವುದಿಲ್ಲ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಕೇವಲ ದೃಢೀಕರಣ ಪತ್ರದ ಕಾರಣಕ್ಕಾಗಿ ಹೊಸದಾಗಿ ಆದಾಯವನ್ನು ನಿಗದಿಪಡಿಸಿ ಈ ಪತ್ರವನ್ನು ನೀಡುತ್ತಾರೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರುವ ಅಭ್ಯರ್ಥಿಗಳು ಈ ಮಾನದಂಡದಿಂದ ವಂಚಿತರಾಗುತ್ತಾರೆ. ಸಾಮಾನ್ಯವಾದ ವರ್ಗಕ್ಕೆ ಸೇರಲ್ಪಡುತ್ತಾರೆ. ಇದರಿಂದ ಹಿಂದುಳಿದ ವರ್ಗದವರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಅಭ್ಯರ್ಥಿಗಳು ಸಾಮಾನ್ಯ ವರ್ಗದವರೊಂದಿಗೆ ಪೈಪೋಟಿಯನ್ನು ನಡೆಸಬೇಕಾಗುತ್ತವೆ. ಇದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ.
ಕೇಂದ್ರದ ಕಾನೂನು ಸಚಿವರು ಸಂಬಂಧಪಟ್ಟ ಇಲಾಖೆಯವರಿಗೆ ಅಂದರೆ ಯುಪಿಎಸ್‌ಸಿ ಅವರಿಗೆ ಪತ್ರವನ್ನು ಬರೆದು ಆದಾಯ ದೃಢೀಕರಣ ಪತ್ರ ಮತ್ತು ಜಾತಿ ದೃಢೀಕರಣ ಪತ್ರದ ಐದು ವರ್ಷದ ಕಾಲಮಿತಿಯ ಪತ್ರಗಳನ್ನು ಮಾನ್ಯಮಾಡಬೇಕೆಂದು ತಿಳಿಸಬೇಕಾಗಿದೆ.
ದೃಢೀಕರಣಕ್ಕೆ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನೇ ಎಲ್ಲಾ ಕಾಲಕ್ಕೂ ಮಾನದಂಡವನ್ನಾಗಿಸಿಕೊಂಡರೆ ಪದೇ ಪದೇ ದೃಢೀಕರಣ ಪತ್ರ ತರುವ ಅವಶ್ಯಕತೆ ಇರುವುದಿಲ್ಲ. ಯಾವುದೇ ವ್ಯಕ್ತಿಯ ಜಾತಿಯನ್ನು ದೃಢೀಕರಿಸುವುದು ಅವರ ತಂದೆ, ತಾಯಿಯ ಅಥವಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ದಾಖಲೆಗಳ ಆಧಾರದ ಮೇಲೆ ಒಂದು ಬಾರಿ ಆ ದಾಖಲೆಗಳಲ್ಲಿ ಅವರು ನಿರ್ದಿಷ್ಟ ಜಾತಿಗೆ ಸೇರಿದ್ದಾರೆ ಎನ್ನುವುದು ಧೃಢವಾಗಿರುತ್ತದೆ. ಮತ್ತೆ ಅದೇ ದಾಖಲೆಗಳ ಆಧಾರ ಮೇಲೆ ಮತ್ತೊಂದು ದೃಢೀಕರಣ ಪತ್ರದ ಅವಶ್ಯಕತೆ ಏನಿದೆ?
- ಕೆ.ಎಸ್.ನಾಗರಾಜ್, ಬೆಂಗಳೂರು




