ಇ-ತ್ಯಾಜ್ಯವನ್ನು ಸಂಪತ್ತಾಗಿ ಬದಲಾಯಿಸಬೇಕು: ನ್ಯಾ.ಸುಭಾಷ್ ಅಡಿ

2 years ago

ಶಿವಮೊಗ್ಗ: ವೈಜ್ಞಾನಿಕ ರೀತಿಯಲ್ಲಿ ಇ-ತ್ಯಾಜ್ಯವನ್ನು ನಿರ್ವಹಿಸದಿದ್ದರೆ ಭವಿಷ್ಯವಿಲ್ಲ. ಆದ್ದರಿಂದ ಇ-ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಬದಲಾಯಿಸಿಕೊಂಡು ಸಂಪತ್ತಾಗಿಸಬಹುದು ಎಂದು ಎನ್.ಜಿ.ಟಿ-ಎಸ್.ಎಲ್.ಸಿ ಛೇರ್ಮನ ಸುಭಾಷ್ ಅಡಿ ಹೇಳಿದರು.
     
ಡೂ ಮೈಂಡ್ಸ್ ಫೌಂಡೇಷನ್, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಇ-ತ್ಯಾಜ್ಯ ದಿನದ ಅಂಗವಾಗಿ  ‘ತ್ಯಾಜ್ಯ ನಿರ್ವಹಣೆಯ ಅವಶ್ಯಕತೆಗಳು, ಉದ್ಯಮಶೀಲತೆಯ ಅವಕಾಶಗಳು’ ಕುರಿತು ಜೆಎನ್‍ಎನ್‍ಸಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೀಕರಣ, ನಗರೀಕರಣ ಹಾಗೂ ಆಧುನೀಕರಣದಿಂದಾಗಿ ಇ-ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಅನೇಕ ವಿಕೋಪಗಳು, ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯವು ಮನುಷ್ಯ ಜೀವನ ದುಸ್ತರ ಮಾಡಿದೆ. ದೆಹಲಿಯಲ್ಲಿ ಒಂದು ಮಗು ದಿನಕ್ಕೆ ವಾಯು ಮಾಲಿನ್ಯದಿಂದ 25 ಸಿಗರೇಟ್‍ನಿಂದ ಹೊರಹೊಮ್ಮುವಷ್ಟು ಹೊಗೆ ಕುಡಿಯುತ್ತಿದೆ ಎಂದು ಹೇಳಿದರು.
    
ಪ್ರತಿವರ್ಷ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಜೊತೆಗೆ ಕಾಲಕಾಲಕ್ಕೆ ಅವು ಅಪ್‍ಡೇಟ್ ಆಗುತ್ತಾ ಇರುತ್ತವೆ. ಎಲ್ಲ ಕ್ಷೇತ್ರಗಳಲ್ಲಿ ಎಲೆಕ್ಟ್ರಿಕ್ ಉಪಕರಣಗಳು ಆವರಿಸಿದ್ದು, ಅವುಗಳು ನಮ್ಮ ಜೀವನದ ಒಂದು ಭಾಗವೇ ಆಗಿ ಹೋಗಿವೆ. ಇಂತಹ ಗ್ಯಾಡ್ಜೆಟ್‍ಗಳಲ್ಲಿ ಅನೇಕ ಹಾನಿಕಾರಕ ಮೆಟಲ್, ವಸ್ತುಗಳಿದ್ದು ಇವು ನೇರವಾಗಿ ಪರಿಸರ ಮತ್ತು ಮಾನವನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಮಾಲಿನ್ಯ ನಿಯಂತ್ರಣ, ಪ್ಲಾಸ್ಟಿಕ್ ನಿಷೇಧದ ಕುರಿತು ಕಾಯ್ದೆಗಳು ಬಂದವು. ಆದರೆ ಮುಖ್ಯವಾಗಿ ಜನರ ನಡವಳಿಕೆಯಲ್ಲಿ ಬದಲಾವಣೆ ಆಗಬೇಕು. ಕಸವನ್ನು ವಿಂಗಡಿಸಿ ನೀಡಬೇಕು. ಪ್ಲಾಸ್ಟಿಕ್ ಬಾಟಲ್ ನಿರಾಕರಿಸಬೇಕು. ಇ-ವಸ್ತುಗಳ ಕಡಿಮೆ ಬಳಕೆ, ಮರು ಬಳಕೆ ಆಗಬೇಕು. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ, ಬೀರ್ ಬಾಟಲಿ ಬಳಕೆ ನಿಲ್ಲಬೇಕು. ಬಾಟಲಿ ಬದಲು ಟಿನ್ ಬಳಕೆಯಾಗಬೇಕು ಎಂದು ಸಲಹೆ ನೀಡಿದರು.
    
ನಮ್ಮ ಊರು, ನಗರ ಸ್ವಚ್ಛ ಮತ್ತು ಸುಂದರವಾಗಬೇಕೆಂದು ಜನರು ಮನಸ್ಸು ಮಾಡಿ ಎಲ್ಲರೂ ಕೈಜೋಡಿಸಿದಾಗ ನಿರ್ವಹಣೆ ಸಾಧ್ಯ. ಇ ವಸ್ತುಗಳು ರೆಡ್ಯುಸ್-ರಿ ಯೂಸ್-ರಿಸೈಕಲ್ ಆಗಬೇಕು. ಅಧಿಕೃತ ಮರುಬಳಕೆದಾರರ ಮೂಲಕ ನಿರ್ವಹಣೆ ಆಗಬೇಕು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಬಗ್ಗೆ ಅಧ್ಯಯನದಲ್ಲಿ ತೊಡಗಬೇಕು. ನವೀನ ವಿಚಾರಗಳೊಂದಿಗೆ ಮುಂದೆ ಬರಬೇಕು. ಅನೇಕ ಸ್ಟಾರ್ಟ್‍ಟಪ್‍ಗಳು ಆರಂಭವಾಗುತ್ತಿದ್ದು ‘ವೇಸ್ಟ್ ನ್ನು ವೆಲ್ತ್’ ಆಗಿಸಬೇಕು ಎಂದು ಹೇಳಿದರು.

ಬೆಂಗಳೂರಿನ ಐಐಡಬ್ಲ್ಯುಎಂ ಕಾರ್ಯ ನಿರ್ವಾಹಕ ನಿರ್ದೇಶಕಿ ಬಿನೀಶಾ ಪಿ ಮಾತನಾಡಿ, ಪ್ರತಿನಿತ್ಯ ನಾವು ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅವಲಂಬಿತರಾಗಿದ್ದೇವೆ. ದೇಶದಲ್ಲಿ ಶೇ.97 ಮನೆಗಳು ವಿದ್ಯುದೀಕರಣಗೊಂಡಿವೆ. 2022 ರಲ್ಲಿ 16 ಲಕ್ಷ ಟನ್‍ಗಿಂತ ಹೆಚ್ಚು ಇ-ವೇಸ್ಟ್ ಉತ್ಪಾದನೆಯಾಗಿದೆ ಎಂದರು.

ಸುಮಾರು 200 ವರ್ಷಗಳಲ್ಲಿ 1 ಸಾವಿರ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ನಾವು ದಿನನಿತ್ಯದ ಬದುಕಿನಲ್ಲಿ ಬಳಸಿದ್ದೇವೆ. 2050 ರ ವೇಳೆ ಜಗತ್ತಿನಲ್ಲಿ ವಾರ್ಷಿಕವಾಗಿ 120 ಮಿನಿಯಲ್ ಟನ್‍ಗಳಷ್ಟು ಇ-ವೇಸ್ಟ್ ಉತ್ಪಾದನೆ ಆಗುವ ಅಂದಾಜಿದೆ. ಆದ್ದರಿಂದ ಇ-ವೇಸ್ಟ್ ನಿರ್ವಹಣೆ ತುರ್ತಾಗಿದೆ ಎಂದು ಹೇಳಿದರು.
    
ಎಲೆಕ್ಟ್ರಿಕ್, ಪ್ಲಾಸ್ಟಿಕ್ ಇತರೆ ಇ-ತ್ಯಾಜ್ಯಕ್ಕೆ ಕಾರಣವಾಗುವ ವಸ್ತುಗಳನ್ನು ನಿರಾಕರಿಸಬೇಕು, ಕಡಿಮೆ ಮಾಡಬೇಕು, ಮರು ಬಳಕೆ ಮಾಡಬೇಕು. ಇ-ತ್ಯಾಜ್ಯ ನಿರ್ವಹಿಸಿ ಉತ್ತಮ ಉದ್ಯಮವನ್ನಾಗಿಸಿಕೊಳ್ಳುವ ಅವಕಾಶಗಳು ಇದ್ದು, ಮುಂಬರುವ ದಿನಗಳಲ್ಲಿ ತ್ಯಾಜ್ಯ ಮರುಬಳಕೆ ಉದ್ಯಮ ಮುಂಚೂಣಿ ವಲಯವಾಗುವುದು ಎಂದರು.
    
ಜೆಎನ್‍ಎನ್‍ಸಿಇ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚುತ್ತಾ ಇದ್ದು, ಇ-ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಲಿದ್ದು ಈ ನಿಟ್ಟಿನಲ್ಲಿ ಅಧ್ಯಯನಗಳು ಆಗಬೇಕು ಎಂದರು.
     
ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜನಾರ್ಧನ ಜಿ ಎಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೂ ಮೈಂಡ್ಸ್ ಫೌಂಡೇಷನ್‍ನ ನವೀನ್ ಹೆಚ್‍ಎಸ್ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು.
   
ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ,  ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯ್ಕ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ಎನ್, ಬೋಧಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply