ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಬರ ವರದಿ ಸಲ್ಲಿಕೆ: ಡಾ.ಜಿ.ಪರಮೇಶ್ವರ್

4 hours ago

ಬೆಂಗಳೂರು: ರಾಜ್ಯದಲ್ಲಿ ಬರ ಪರಿಶೀಲನೆಯನ್ನು ನಡೆಸಿ, 101 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದೇವೆ. ಶೀಘ್ರವೇ ಬರ ವರದಿಯನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಬಳಿಕ 40 ರಿಂದ 50 ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಆಗ ಮತ್ತೆ ಘೋಷಣೆ ಮಾಡುತ್ತೇವೆ. ಈ ಮಧ್ಯೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ ಎಂದರು.

ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರಕ್ಕೆ ಒತ್ತಾಯ: ಕೇಂದ್ರದಿಂದ ಸಾಲ ಮನ್ನಾ ಮಾಡಿದರೆ ಮುಗಿದೇ ಹೋಗುತ್ತದೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರದ ಕೆಲವು ಭಾಗಗಳಲ್ಲಿ ಬರ ಇದೆ. ಹಾಗಾಗಿ ಇಡೀ ದೇಶದಲ್ಲಿ ಯಾವ ರೀತಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರು ₹72 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲವನ್ನು ಮನ್ನಾ ಮಾಡಿದ್ದರೋ, ಅದೇ ರೀತಿ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ದೇಶದ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರವನ್ನು ಈ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದರು.

ನಾಗೇಂದ್ರ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ: ನಾವು ನಾಗೇಂದ್ರ ಅವರಿಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದೇವೆ. ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರೂ ಇಲ್ಲ. ಸದನದಲ್ಲಿ ವಿರೋಧ ಪಕ್ಷದವರು ಇದರ ಬಗ್ಗೆ ಪ್ರಶ್ನೆಗಳನ್ನು ಕೇಳಲಿ, ಅವರ ಜೊತೆಗೆ ಏನು ಮಾಹಿತಿ ಇದೆಯೋ, ಅದಕ್ಕೆಲ್ಲ ನಾವು ಉತ್ತರಗಳನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ, ಅನಾವಶ್ಯಕವಾಗಿ ವಿರೋಧ ಪಕ್ಷದವರು ರಾಜೀನಾಮೆ ನೀಡಲು ಒತ್ತಾಯ ಮಾಡುತ್ತಿದ್ದಾರೆ. ನಮ್ಮ ವರಿಷ್ಠರ ಜೊತೆಯಲ್ಲಿ ಮುಖ್ಯಮಂತ್ರಿಗಳು ಏನು ಚರ್ಚೆ ಮಾಡಿಕೊಂಡು ಬಂದಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ನಾನು ಚರ್ಚೆ ಮಾಡಿದ ಬಳಿಕ ನನಗೆ ತಿಳಿಯುತ್ತದೆ ಎಂದರು.

ಕನ್ನಡಿಗರ ರಕ್ಷಣೆಗೆ ಕ್ರಮ: ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವವರಲ್ಲಿ ಕನ್ನಡಿಗರು ಇದ್ದಾರೆ. ನನಗೆ ಈಗ ಬಂದ ಮಾಹಿತಿಯ ಪ್ರಕಾರ ಕನ್ನಡಿಗರು 12 ಜನರಿದ್ದಾರೆ. ಕಠ್ಮಂಡು ಗೆ ಅಧಿಕಾರಿಗಳನ್ನು ಕಳುಹಿಸಲಾಗುವುದು. ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದರು.

Leave a Reply