ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ತಾಲ್ಲೂಕುಗಳು ಬರ ಪೀಡಿತವಾಗಿವೆ. ಇಲ್ಲಿನ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ಉನ್ನತಾಧಿಕಾರಿಗಳ ತಂಡ ಕಾಟಾಚಾರದ ಅಧ್ಯಯನ ನಡೆಸಿದೆ. ಅಷ್ಟೇ ಅಲ್ಲ ವ್ಯತಿರಿಕ್ತ ವರದಿ ನೀಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಯನ ತಂಡ ವರದಿ ಸಲ್ಲಿಸಿದ ನಂತರ ಬರ ಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈವರೆಗೂ ರಾಜ್ಯಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಿಂದ ಆಗಮಿಸಿದ ಬರ ಅಧ್ಯಯನ ತಂಡ ತಾವು ನೋಡಿದ ಕಡೆ ಹಸಿರು ಇದೆ ಎಂದು ವರದಿ ನೀಡಿದೆ. ತಂಡ ಬರುವ ಮುನ್ನಾ ಎರಡು ಮೂರು ದಿನ ರಾಜ್ಯದಲ್ಲಿ ಮಳೆಯಾಗಿತ್ತು, ಹಾಗಾಗಿ ಹಸಿರು ಕಾಣಿಸಿದೆ. ಅಂದ ಮಾತ್ರಕ್ಕೆ ಬೆಳೆಯಾಗಿದೆ ಎಂದು ಅರ್ಥವೇ? ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಹಣ ನೀಡಬೇಕು ಎಂಬ ಕಾಳಜಿ ಇದ್ದರೆ ಕೇಂದ್ರ ತಂಡ ರಾಜ್ಯದ ಅಕಾರಿಗಳು, ಸಚಿವರು, ಮುಖ್ಯಮಂತ್ರಿಯವರ ಜೊತೆ ಕೂಲಂಕುಶವಾಗಿ ಚರ್ಚೆ ಮಾಡಬೇಕಿತ್ತು. ನೆಪ ಮಾತ್ರಕ್ಕೆ ಕಾಟಾಚಾರಕ್ಕೆ ಅಧ್ಯಯನ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಸುಮಾರು 32 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. 17 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಚಕಾರವೆತ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಆಧರಿಸಿ ಎನ್‍ಡಿಆರ್‍ಎಫ್ ಅಡಿ ನೀಡಬೇಕಾದ ಹಣವನ್ನಾದರೂ ಮುಂಗಡವಾಗಿ ನೀಡಬೇಕಿತ್ತು ಅಥವಾ ವಿಶೇಷ ಅನುದಾನವನ್ನಾದರೂ ನೀಡಬೇಕಿತ್ತು. ಅದನ್ನು ಮಾಡಿಲ್ಲ. ಆದರೆ, ಈಗ ಬಿಜೆಪಿ ರಾಜಕಾರಣ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಬರ ಪರಿಸ್ಥಿತಿಗೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಸರ್ವ ಪಕ್ಷ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು. ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರದ ಎಲ್ಲಾ ಸಚಿವರು ದೆಹಲಿಗೆ ಹೋಗಿ ಪ್ರಯತ್ನಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಮಳೆ ನಿಂತು ಮೂರು ತಿಂಗಳಾಗಿದೆ, ಆಗಿನಿಂದಲೇ ಬರ ಪರಿಸ್ಥಿತಿ ಇದೆ. ಬಿಜೆಪಿಯವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಈಗ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಬಿಟ್ಟು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಿಜೆಪಿಯವರು ಮೊದಲು ಹಣ ಕೊಡಿಸಲಿ ಎಂದು ಆಗ್ರಹಿಸಿದರು.




