ಪಿತೃಪ್ರಧಾನ ವ್ಯವಸ್ಥೆಯ ಧ್ವಂಸ ಮತ್ತು ಪಿತೃಪ್ರಧಾನತೆಯ ಉತ್ತೇಜನ
ಭಾರತೀಯ ಸಮಾಜದ ಭಿನ್ನ ಪ್ರವೃತ್ತಿಗಳು
ಇಂಗ್ಲಿಷ್ ಮೂಲ: ರಾಮ್ ಪುನಿಯಾನಿ | ಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿ
ವಸಾಹತುಶಾಹಿ ಪೂರ್ವ ಭಾರತದಲ್ಲಿ ವಿಶಾಲ ಹಿಂದೂ ಸಮಾಜ ಮನುಸ್ಮೃತಿಯ ನಿಯಮಗಳಿಂದ ಆಳಲ್ಪಡುತ್ತಿತ್ತು, ಅಲ್ಲಿ ಜಾತಿ ಮತ್ತು ಲಿಂಗ ಶ್ರೇಣೀಕರಣವೇ ಅದರ ಮೌಲ್ಯಗಳ ತಿರುಳಾಗಿತ್ತು. ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ಶಿಕ್ಷಣ, ಸಾರಿಗೆ ಮತ್ತು ಆಧುನಿಕ ಆಡಳಿತಗಳು ಬೇರೂರಿದಾಗ, ಪ್ರಜಾಪ್ರಭುತ್ವದ ಮೊಳಕೆಗಳು ಚಿಗುರಲಾರಂಭಿಸಿದವು. ಈ ಬದಲಾವಣೆಗಳು ಉದಯೋನ್ಮುಖ ಜಾತ್ಯತೀತ ರಾಷ್ಟ್ರೀಯತೆಯ ಪರಿಕಲ್ಪನೆಯ ಸುತ್ತ ಕೇಂದ್ರೀಕೃತವಾಗಿದ್ದವು. ಕಾರ್ಮಿಕರ ಹಕ್ಕುಗಳ ಹೋರಾಟ, ಶಿಕ್ಷಣ ಮತ್ತು ಆ ಮೂಲಕ ದಲಿತರು ಹಾಗೂ ಮಹಿಳೆಯರ ಸಬಲೀಕರಣ ಮತ್ತು ಧರ್ಮ, ಜಾತಿ, ಭಾಷೆ ಹಾಗೂ ಲಿಂಗಭೇದವಿಲ್ಲದೆ ಎಲ್ಲರಿಗೂ ಸಮಾನ ಪೌರತ್ವ ಕಲ್ಪಿಸುವ ಪರಿಕಲ್ಪನೆಗಳು ಇದರ ವಿವಿಧ ಅಂಗಗಳಾಗಿದ್ದವು. ಆದರೆ ಈ ಎಲ್ಲಾ ಪ್ರಕ್ರಿಯೆಗಳಿಗೂ ಗಣ್ಯರು, ಜಮೀನ್ದಾರರು ಮತ್ತು ಪುರೋಹಿತಶಾಹಿ ವರ್ಗಗಳಿಂದ ವಿರೋಧವೂ ವ್ಯಕ್ತವಾಯಿತು. ಪ್ರಜಾಸತ್ತಾತ್ಮಕ ಒಲವುಗಳನ್ನು ಸ್ಥೂಲವಾಗಿ ಭಗತ್ ಸಿಂಗ್, ಅಂಬೇಡ್ಕರ್ ಮತ್ತು ಗಾಂಧಿಯವರು ಪ್ರತಿನಿಧಿಸಿದರೆ; ಇವುಗಳನ್ನು ವಿರೋಧಿಸಿದವರು ಮುಸ್ಲಿಂ ಲೀಗ್, ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ನಲ್ಲಿ (RSS) ಕಾಣಿಸಿಕೊಂಡರು.
- ಪಿತೃಪ್ರಧಾನ ವ್ಯವಸ್ಥೆಯ ಧ್ವಂಸ ಮತ್ತು ಪಿತೃಪ್ರಧಾನತೆಯ ಉತ್ತೇಜನ
- ರಾಜನಾಗದ ರಾಜಕುಮಾರ ನೇಮಾರ್
- ಕಿಚ್ಚ ಸುದೀಪ್ರಿಂದ ಅಭಿಮಾನಿಗಳಿಗೆ ಭಾವುಕ ಪತ್ರ
- ನೇಪಾಳ ದುರಂತದಲ್ಲಿ ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರದ ಮನವಿ
- ಅಸಾಧಾರಣ ಸಾಧಕ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಪ್ರಮುಖ ಅಂಗಗಳಲ್ಲಿ ಕಾರ್ಮಿಕರ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟಗಳು ಮತ್ತು ದಲಿತರು ಹಾಗೂ ಮಹಿಳೆಯರ ಶಿಕ್ಷಣ ಸೇರಿದ್ದವು. ಮಹಿಳಾ ಶಿಕ್ಷಣದ ವಿಷಯಕ್ಕೆ ಬಂದರೆ, ಅದು ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರೊಂದಿಗೆ ಆರಂಭವಾಯಿತು. ತಮ್ಮ ಗುರಿಗಳನ್ನು ತಲುಪುವ ಹಾದಿಯಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅನುಭವಿಸಿದ ಕಷ್ಟಗಳು ಎಲ್ಲರಿಗೂ ತಿಳಿದಿರುವಂತಹುದು. ಅಂಬೇಡ್ಕರ್ ಅವರ ಚಳವಳಿಗಳಲ್ಲಿ ಮಹಿಳೆಯರ ಉತ್ತಮ ಪಾಲ್ಗೊಳ್ಳುವಿಕೆ ಇತ್ತು. ಹಾಗೆಯೇ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವಳಿಗಳಲ್ಲೂ ಮಹಿಳೆಯರ ಉಪಸ್ಥಿತಿ ಗಣನೀಯವಾಗಿತ್ತು. ಆದರೆ ಗಣ್ಯ ವರ್ಗಗಳ ವಿರೋಧಿಗಳು ಈ ಎಲ್ಲಾ ಪ್ರಕ್ರಿಯೆಗಳನ್ನು ವಿರೋಧಿಸಿದವು. ಆ ಸಂಘಟನೆಗಳೆಂದರೆ ಮುಸ್ಲಿಂ ಲೀಗ್ ಮತ್ತು ಆರ್‌ಎಸ್‌ಎಸ್. ಇವು ಮೂಲತಃ ಪುರುಷ ಪ್ರಧಾನ ಸಂಘಟನೆಗಳಾಗಿದ್ದವು. ನಮ್ಮ ಸಂವಿಧಾನ ಅತ್ಯಂತ ಸೂಕ್ತವಾಗಿ ಎರಡೂ ಲಿಂಗಗಳಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳನ್ನು ನೀಡಿತು.
ಮುಸ್ಲಿಂ ಲೀಗ್‌ನ ಸಿದ್ಧಾಂತ ಪಾಕಿಸ್ತಾನದಲ್ಲಿ ವಿನಾಶವನ್ನುಂಟುಮಾಡಿದರೆ, ಭಾರತದಲ್ಲಿ ಮಹಿಳೆಯರ ಸಮಾನತೆಯನ್ನು ವಿರೋಧಿಸಿದ ಪ್ರಮುಖ ಸಂಘಟನೆ ಆರ್‌ಎಸ್‌ಎಸ್. 1936ರಲ್ಲಿ ಲಕ್ಷ್ಮೀಬಾಯಿ ಕೇಳ್ಕರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮಹಿಳೆಯರಿಗೂ ಸದಸ್ಯತ್ವ ನೀಡುವಂತೆ ಆರ್‌ಎಸ್‌ಎಸ್ ಸರಸಂಘಚಾಲಕರನ್ನು ಕೇಳಿದಾಗ, ಅವರು ಅದನ್ನು ತಿರಸ್ಕರಿಸಿ ‘ರಾಷ್ಟ್ರ ಸೇವಿಕಾ ಸಮಿತಿ’ಯನ್ನು ಪ್ರಾರಂಭಿಸಲು ಹೇಳಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಹಿಳಾ ಸಂಘಟನೆಯಲ್ಲಿ ‘ಸ್ವಯಂ’ ಎಂಬ ಪದವೇ ಇರಲಿಲ್ಲ; ಅದು ‘ರಾಷ್ಟ್ರ ಸೇವಿಕಾ ಸಮಿತಿ’ ಎಂದಾಗಿತ್ತು. ಇದು ಮಹಿಳೆಯರು ಪುರುಷರಿಗೆ ಅಧೀನರಾಗಿರಬೇಕು ಎಂಬ ಸ್ಪಷ್ಟ ಸಂದೇಶ ನೀಡಿತು. ಭಾರತೀಯ ಸಂವಿಧಾನ ನಮ್ಮ ಪ್ರಾಚೀನ ವೈಭವದ ಇತಿಹಾಸದ ಮೌಲ್ಯಗಳನ್ನು (ಅಂದರೆ ಮನುಸ್ಮೃತಿಯನ್ನು) ಹೊಂದಿಲ್ಲ ಎಂಬ ಕಾರಣಕ್ಕಾಗಿ ಆರ್‌ಎಸ್‌ಎಸ್ ಪರಿವಾರ ಸಂವಿಧಾನವನ್ನು ವಿರೋಧಿಸಿತು. ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ನೀಡುವ ‘ಹಿಂದೂ ಕೋಡ್ ಬಿಲ್’ನ ಮೂಲ ಕರಡನ್ನು ಆರ್‌ಎಸ್‌ಎಸ್ ಪರಿವಾರ ಸಂಪೂರ್ಣವಾಗಿ ವಿರೋಧಿಸಿತು.
2026ರ ಆಗಸ್ಟ್ 23ರಂದು ಪುಣೆಯಲ್ಲಿ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ರಾಹುಲ್ ಗಾಂಧಿಯವರ ‘ವಿದ್ಯಾರ್ಥಿನಿಯರ ಧ್ವನಿ’ (ಛಾತ್ರೋಂ ಕಿ ಗೂಂಜ್) ಕಾರ್ಯಕ್ರಮವನ್ನು ನೋಡಿದಾಗ ಇದೆಲ್ಲವೂ ನೆನಪಿಗೆ ಬರುತ್ತದೆ. ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ಮಹಿಳೆಯರು/ಹೆಣ್ಣುಮಕ್ಕಳ ಸಮಾನತೆಯ ದಿಕ್ಕಿನಲ್ಲಿ ಸಾಕಷ್ಟು ಕೆಲಸಗಳಾದವು, ಆದರೆ ಅದೇ ಸಮಯದಲ್ಲಿ ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತದ ಹಿಡಿತವನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಅದರಲ್ಲಿ ಒಂದು ಗೀತಾ ಪ್ರೆಸ್; ಇದು ಮನುಸ್ಮೃತಿ ಆಧಾರಿತ ಪುಸ್ತಕಗಳನ್ನು ಲಕ್ಷಾಂತರ ಪ್ರತಿಗಳಲ್ಲಿ ಪ್ರಕಟಿಸಿತು. ಈ ಸಿದ್ಧಾಂತಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳಿಂದ ಇಂತಹ ಇನ್ನಿತರ ಚಟುವಟಿಕೆಗಳು ಮತ್ತು ಸಂದೇಶಗಳು ಸತತವಾಗಿ ಪ್ರಸಾರವಾದವು.
ರೂಪ್ ಕನ್ವರ್ ಅವರನ್ನು ಪತಿಯ ಚಿತೆಯ ಮೇಲೆ ಸುಟ್ಟುಹಾಕಿದ (ಸತಿ ಪದ್ಧತಿ) ಘಟನೆ ನಮಗೆ ನೆನಪಾಗುತ್ತದೆ. ಬಹುತೇಕ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ಈ ದುರಂತ ಘಟನೆಯನ್ನು ನ್ಯಾಯಯುತವಾಗಿ ಖಂಡಿಸಿದರೆ, ಬಿಜೆಪಿ ಉಪಾಧ್ಯಕ್ಷರಾಗಿದ್ದ ವಿಜಯರಾಜೆ ಸಿಂಧಿಯಾ ಅವರು “ಸತಿ ಹೋಗುವುದು ಭಾರತದ ವೈಭವಯುತ ಸಂಪ್ರದಾಯ ಮತ್ತು ಅದು ಮಹಿಳೆಯರ ಹಕ್ಕು” ಎಂಬ ಘೋಷಣೆಯೊಂದಿಗೆ ಸಂಸತ್ತಿನವರೆಗೆ ಮೆರವಣಿಗೆ ನಡೆಸಿದರು. ಆದರೆ ಸ್ವತಃ ಅವರೇ ತಮ್ಮ ಪತಿಯ ಮರಣದ ನಂತರ ಈ ‘ಹಕ್ಕನ್ನು’ ಚಲಾಯಿಸಲಿಲ್ಲ ಎಂಬುದು ಗಮನಾರ್ಹ! ನಂತರ, ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ಮುಖ್ಯಸ್ಥೆ ಮೃದುಲಾ ಸಿನ್ಹಾ ಅವರು ಸ್ಯಾವಿ (Savvy) ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ (ಏಪ್ರಿಲ್ 1994), “ಅತ್ಯಂತ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಮಹಿಳೆಯರು ಮನೆಯಿಂದ ಹೊರಗೆ ಕೆಲಸ ಮಾಡಬಾರದು” ಎಂದು ಹೇಳಿದ್ದರು. ಅವರು ಗಂಡಂದಿರು ಹೆಂಡತಿಯರನ್ನು ಹೊಡೆಯುವುದನ್ನು ಮತ್ತು ವರದಕ್ಷಿಣೆ ಪದ್ಧತಿಯನ್ನೂ ಸಮರ್ಥಿಸಿಕೊಂಡಿದ್ದರು.
ಪುಣೆ ಸಭೆಯಲ್ಲಿ ರಾಹುಲ್ ಗಾಂಧಿಯವರು ಹೆಣ್ಣುಮಕ್ಕಳ ಮಾತುಗಳನ್ನು ಆಲಿಸಿದರು. ಆ ಹೆಣ್ಣುಮಕ್ಕಳು ತಮ್ಮ ಭದ್ರತೆಯ ಸಮಸ್ಯೆಗಳು, ಶಿಕ್ಷಣಕ್ಕೆ ಎದುರಾಗುವ ಅಡೆತಡೆಗಳು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಲ್ಲಿನ ತೊಡಕುಗಳು ಹಾಗೂ ಸಮಾಜದ ವಿವಿಧ ಒತ್ತಡಗಳ ನಡುವೆ ಒಬ್ಬ ಸಂಪೂರ್ಣ ನಾಗರಿಕರಾಗಿ ಬದುಕಲು ಇರುವ ಅಡೆತಡೆಗಳನ್ನು ಸ್ಪಷ್ಟವಾಗಿ ವಿವರಿಸಿದರು. ರಾಹುಲ್ ಗಾಂಧಿ ಆ ಸಭೆಯನ್ನು ಒಂದು ಸಮಾಜ ಸುಧಾರಣಾ ಪ್ರಕ್ರಿಯೆಯನ್ನಾಗಿ ಪರಿವರ್ತಿಸಿದರು. ಮಹಿಳೆಯರ ಸಮಾನತೆಯ ದಿಕ್ಕಿನಲ್ಲಿ ಸಾಮಾಜಿಕ ಪ್ರಕ್ರಿಯೆಗಳನ್ನು ಮುನ್ನಡೆಸುವ ಒಂದು ಉತ್ತಮ ಪ್ರಯತ್ನ ಅದಾಗಿತ್ತು. ಈ ಉದ್ದೇಶಕ್ಕಾಗಿ ಹೋರಾಡುತ್ತಿರುವ ಮಹಿಳಾ ಸಂಘಟನೆಗಳಿಗೆ ಆ ಸಭೆಯ ಉತ್ಸಾಹ ಮತ್ತು ಸಂದೇಶ ಹೆಚ್ಚಿನ ಚೈತನ್ಯವನ್ನು ತುಂಬುತ್ತದೆ.
ಇಂದಿನ ಭಾರತದಲ್ಲಿ ಆರ್‌ಎಸ್‌ಎಸ್ ಪರಿವಾರ ಕೇವಲ ಭಾರತೀಯ ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಮಾತ್ರವಲ್ಲದೆ, ಮಹಿಳೆಯರು ಮತ್ತು ದಲಿತರ ವಿಚಾರದಲ್ಲಿ ಹಿಮ್ಮುಖ ಸಾಮಾಜಿಕ ಸಂಬಂಧಗಳನ್ನು ಉತ್ತೇಜಿಸುತ್ತಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ದ್ವೇಷವನ್ನು ಹರಡುವುದು ಬಹಿರಂಗವಾಗಿಯೇ ಕಾಣಿಸುತ್ತಿರುವಾಗ, ಮಹಿಳೆಯರ ವಿಷಯದಲ್ಲಿ ಮನುಸ್ಮೃತಿಯ ಮೌಲ್ಯಗಳನ್ನು ಉತ್ತೇಜಿಸುವುದೂ ಅಲ್ಲಿ ಸ್ಪಷ್ಟವಾಗಿದೆ. ಇದನ್ನು ಪುಣೆ ಸಭೆಯಲ್ಲಿ ಸರಿಯಾಗಿಯೇ ಎತ್ತಿ ತೋರಿಸಲಾಯಿತು. ಇಲ್ಲಿ ರಾಹುಲ್ ಗಾಂಧಿಯವರು ಮೂರು ಸ್ಪಷ್ಟ ಉದಾಹರಣೆಗಳನ್ನು ನೀಡಿದರು. ಮೊದಲನೆಯದಾಗಿ ಡಾ. ಮೋಹನ್ ಭಾಗವತ್ ಅವರ ಹೇಳಿಕೆ— “ರೇಪ್‌ಗಳು ಇಂಡಿಯಾದಲ್ಲಿ ನಡೆಯುತ್ತವೆ, ಭಾರತದಲ್ಲಲ್ಲ.” ಖಂಡಿತವಾಗಿಯೂ ಭಾರತ ಎಂದರೆ ಸಂವಿಧಾನದ ಮೌಲ್ಯಗಳ ಕಡೆಗಿನ ಬದಲಾವಣೆಯ ಪ್ರಕ್ರಿಯೆಗಳಿಂದ ಪ್ರಭಾವಿತವಾಗದ ಗ್ರಾಮೀಣ ಪ್ರದೇಶಗಳು ಎಂದು ಅವರು ಅರ್ಥೈಸಿದ್ದಾರೆ. ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಅವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಇನ್ನು ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರ ಪ್ರಕಾರ, ಶೇಕಡಾ 70 ರಷ್ಟು ರೇಪ್‌ಗಳು ಮಹಿಳೆಯರ ಕಾರಣದಿಂದಲೇ ನಡೆಯುತ್ತವೆಯಂತೆ! ಇವರೆಲ್ಲರ ನಾಯಕ ನಿಸ್ಸಂದೇಹವಾಗಿ ನರೇಂದ್ರ ಮೋದಿಯವರು. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳು ನಿಂದನೀಯ ಪದಗಳನ್ನು ಬಳಸಿದ್ದಕ್ಕೆ ಅವರು ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಗಂಡುಮಕ್ಕಳು ಅದೇ ಕೆಲಸ ಮಾಡಿದಾಗ ಅವರಿಗೆ ಅದು ಸಾಮಾನ್ಯವಾಗಿ ಕಾಣುತ್ತದೆ. ನಮ್ಮ ಮಹಿಳಾ ಕುಸ್ತಿಪಟುಗಳ ದುಸ್ಥಿತಿಯನ್ನು ಅವರು ನಿರ್ಲಕ್ಷಿಸಿದ ರೀತಿ ಅತ್ಯಂತ ಅಸಹ್ಯಕರವಾಗಿದೆ.
ಹಿಂದೂ ರಾಷ್ಟ್ರೀಯವಾದಿಗಳ ಮೂಲ ಸಿದ್ಧಾಂತವನ್ನು ರಾಹುಲ್ ಗಾಂಧಿ ಸರಿಯಾಗಿಯೇ ಬಹಿರಂಗಗೊಳಿಸಿದರು. ಆರ್‌ಎಸ್‌ಎಸ್ ಪರಿವಾರ ಮನುಸ್ಮೃತಿಯನ್ನು ಎತ್ತಿಹಿಡಿಯುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಮನುಸ್ಮೃತಿಯ ಪ್ರಕಾರ ಹೆಣ್ಣು ಮಗು ಬಾಲ್ಯದಲ್ಲಿ ತಂದೆಯ ನಿಯಂತ್ರಣದಲ್ಲಿ, ಯೌವನದಲ್ಲಿ ಗಂಡನ ನಿಯಂತ್ರಣದಲ್ಲಿ ಮತ್ತು ವಿಧವೆಯಾದರೆ ಮಗನ ನಿಯಂತ್ರಣದಲ್ಲಿ ಇರಬೇಕು. “ಹೆಣ್ಣುಮಕ್ಕಳಿಗೆ ತಮ್ಮದೇ ಆದ ‘ಸ್ವಯಂ’ (ಸ್ವಂತಿಕೆ/ಅಸ್ತಿತ್ವ) ಇರಬೇಕು” ಎಂಬ ಗಾಂಧಿಯವರ ಮಾತು ಅತ್ಯಂತ ನಿಖರವಾಗಿದ್ದು, ಸಭೆಯಲ್ಲಿದ್ದ ಹೆಣ್ಣುಮಕ್ಕಳಿಂದ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಭೆ ಮಹಿಳೆಯರ ಸಮಾನತೆಯ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಬೇಕು. ಸಭೆಯ ಸಂದೇಶ ಅತ್ಯಂತ ಸ್ಪಷ್ಟವಾಗಿತ್ತು. ಅದು ಹೆಣ್ಣುಮಕ್ಕಳ ಆಶಯಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ವ್ಯಕ್ತಪಡಿಸಿತು. ಸಾಮಾನ್ಯ ಅರ್ಥದ ‘ರಾಜಕೀಯ’ ಮಾಡದೆ, ರಾಹುಲ್ ಗಾಂಧಿಯವರು ಆಳವಾದ ಸಾಮಾಜಿಕ ನೆಲೆಯಲ್ಲಿ ಮಾತನಾಡಿದರು. ಮಹಿಳೆಯರ ಸಮಾನತೆಯ ಹೋರಾಟಗಳ ಮೂಲಕ ರೂಪಾಂತರಗೊಳ್ಳಬೇಕಾದ ಸಾಮಾಜಿಕ ರಚನೆಯ ಬಗ್ಗೆ ಅವರು ಒತ್ತಿ ಹೇಳಿದರು. ಹೆಣ್ಣುಮಕ್ಕಳು ಸಮಾನತೆ ಮತ್ತು ಘನತೆಯಿಂದ ಮುಕ್ತವಾಗಿ ಬದುಕಬೇಕಾದರೆ ಗಂಡುಮಕ್ಕಳೂ ಬದಲಾಗಬೇಕು, ಮಹಿಳೆಯರು ಮಾನವಕುಲದ ಅರ್ಧಭಾಗ ಹಾಗೂ ಭಾರತದ ಅರ್ಧಭಾಗ ಎಂದು ಆ ಹೆಣ್ಣುಮಕ್ಕಳು ಸ್ಪಷ್ಟಪಡಿಸಿದರು. ಹಿಂದೂ ರಾಷ್ಟ್ರೀಯತಾವಾದಿ ಮನಸ್ಥಿತಿಯ ಹಿಡಿತದಲ್ಲಿರುವ ಭಾರತ ಬದಲಾಗಬೇಕಿದೆ ಮತ್ತು ಭಾರತೀಯ ಸಂವಿಧಾನದ ಮೌಲ್ಯಗಳಿಗೆ ಬಲ ತುಂಬಬೇಕಿದೆ. ಆರ್‌ಎಸ್‌ಎಸ್ ಪರಿವಾರದ ಹೆಚ್ಚುತ್ತಿರುವ ಶಕ್ತಿ ಪ್ರಶ್ನಿಸಲು ಇದು ಮತ್ತೊಂದು ಪ್ರಮುಖ ಕಾರಣವಾಗಿದೆ.




