ಬೆಂಗಳೂರು: ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ ಖಂಡನೀಯ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.
- ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಬರ ವರದಿ ಸಲ್ಲಿಕೆ: ಡಾ.ಜಿ.ಪರಮೇಶ್ವರ್
- ರೈಲ್ವೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ ಖಂಡನೀಯ: ಎಂ ಬಿ ಪಾಟೀಲ್
- ಗಾಂಧೀಜಿಯವರ ಅಸ್ಪೃಶ್ಯತೆಯ ಹೋರಾಟಕ್ಕೆ ನಾರಾಯಣಗುರುಗಳೇ ಪ್ರೇರಣೆ: ಬಿ ಕೆ ಹರಿಪ್ರಸಾದ್
- ಧ್ವನಿ ಇಲ್ಲದವರ ಬದುಕಿಗೆ ಅಕ್ಷರದ ಮೊಳೆ ಜೋಡಿಸಿ ಬದುಕು ಕಟ್ಟಿಕೊಟ್ಟ ಜಾಣಗೆರೆ ವೆಂಕಟರಾಮಯ್ಯ
- ಪಿತೃಪ್ರಧಾನ ವ್ಯವಸ್ಥೆಯ ಧ್ವಂಸ ಮತ್ತು ಪಿತೃಪ್ರಧಾನತೆಯ ಉತ್ತೇಜನ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ರೈಲ್ವೆ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿ ಎತ್ತಲಿದ್ದೇವೆ ಎಂದರು.
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ದೇಶದ ಅತಿಸಾಂದ್ರತೆ ಇರುವ 7 ಪ್ರಮುಖ ರೈಲ್ವೆ ಮಾರ್ಗಗಳನ್ನು ಚತುಷ್ಪಥ ಮಾರ್ಗಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಯನ್ನು ಪ್ರಕಟಿಸಿದ್ದಾರೆ. ಆ 7 ರೈಲ್ವೆ ಮಾರ್ಗಗಳೆಂದರೆ, ದೆಹಲಿ – ಹೌರಾ, ಹೌರಾ – ಚೆನ್ನೈ, ಚೆನ್ನೈ – ಮುಂಬೈ,ಮುಂಬೈ – ದೆಹಲಿ,ದೆಹಲಿ – ಚೆನ್ನೈ, ಮುಂಬೈ – ಹೌರಾ, ದೆಹಲಿ – ಗುವಾಹಟಿ. ದೇಶದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಯಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ ಒಂದೇ ಒಂದು ಮಾರ್ಗವೂ ಇಲ್ಲದಿರುವುದು ಅತ್ಯಂತ ಖಂಡನೀಯ ಎಂದರು.
ರಾಜ್ಯದಿಂದ ಆಯ್ಕೆಯಾದ ವಿ.ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ. ಆದರೂ ಕರ್ನಾಟಕದ ರೈಲ್ವೆ ಹಕ್ಕುಗಳಿಗೆ ಈ ನಿರ್ಲಕ್ಷ್ಯ ಏಕೆ? ದಕ್ಷಿಣ ಭಾರತದಲ್ಲೇ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಪದೇಪದೇ ಅನ್ಯಾಯವಾಗುತ್ತಿರುವುದು ಏಕೆ? ಎಂದು ಕೇಳಿದರು.
ರಾಜ್ಯ ಸರ್ಕಾರ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ ಸಹಕಾರ ನೀಡಲು ಸಿದ್ಧವಿದ್ದರೂ, ಕರ್ನಾಟಕದ ಬೇಡಿಕೆಗಳಿಗೆ ಕೇಂದ್ರದ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ತುಮಕೂರು–ದಾವಣಗೆರೆ ಏಕಪಥ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಮಾಡುವಂತೆ ಪದೇಪದೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹೈಸ್ಪೀಡ್ ರೈಲು ಯೋಜನೆಗಳಲ್ಲಿಯೂ ಕರ್ನಾಟಕಕ್ಕೆ ನಿರೀಕ್ಷಿತ ಆದ್ಯತೆ ದೊರೆತಿಲ್ಲ ಎಂದರು.
ಕರ್ನಾಟಕದ ಕೈಗಾರಿಕಾ, ಕೃಷಿ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನಿಸಿದರೆ, ಬೆಂಗಳೂರು–ವಿಜಯಪುರ, ಬೆಂಗಳೂರು–ಹೊಸಪೇಟೆ, ಬೆಂಗಳೂರು–ಹುಬ್ಬಳ್ಳಿ, ಬೆಂಗಳೂರು–ಶಿವಮೊಗ್ಗ, ಬೆಂಗಳೂರು–ಕಲಬುರಗಿ, ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಮಂಗಳೂರು ಪ್ರಮುಖ ರೈಲ್ವೆ ಮಾರ್ಗಗಳನ್ನು ಹಂತ ಹಂತವಾಗಿ ಚತುಷ್ಪಥಗೊಳಿಸುವುದು ಅತ್ಯಗತ್ಯ ಎಂದರು.
ನಮ್ಮ ರೈತರು ಬೆಳೆಯುವ ದ್ರಾಕ್ಷಿ, ದಾಳಿಂಬೆ, ನಿಂಬೆ, ಕಾಫಿ, ಮೆಣಸು, ಏಲಕ್ಕಿ, ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ವೇಗವಾಗಿ, ಕಡಿಮೆ ವೆಚ್ಚದಲ್ಲಿ ತಲುಪಬೇಕು. ಕೈಗಾರಿಕೆಗಳಿಗೆ ಕಚ್ಚಾ ವಸ್ತು ಮತ್ತು ಸಿದ್ಧ ಉತ್ಪನ್ನಗಳ ಸಾಗಣೆ ಸುಗಮವಾಗಬೇಕು. ಸರಕು ಸಾಗಣೆ ಹೆಚ್ಚಿದಂತೆ ರೈಲ್ವೆಯ ಆದಾಯವೂ ಹೆಚ್ಚಬೇಕು; ರಾಜ್ಯದ ಆರ್ಥಿಕತೆಯೂ ಮತ್ತಷ್ಟು ವೇಗ ಪಡೆಯಬೇಕು ಎಂದರು.
ಇಂದು ಬೆಂಗಳೂರು ದೇಶದ ಆರ್ಥಿಕ ಚಟುವಟಿಕೆ, ವಿಜ್ಞಾನ–ತಂತ್ರಜ್ಞಾನ, R&D, ಬಂಡವಾಳ ಹೂಡಿಕೆ ಮತ್ತು ಅಪತ್ರತ್ಯಾಧುನಿಕ ತಯಾರಿಕಾ ವಲಯದ ಪ್ರಮುಖ ಕೇಂದ್ರವಾಗಿದೆ. ಕರ್ನಾಟಕ ದೇಶದ ಮುಂಚೂಣಿ ಕೈಗಾರಿಕಾ ರಾಜ್ಯ. ಇಂತಹ ರಾಜ್ಯಕ್ಕೆ ವಿಶ್ವದರ್ಜೆಯ ರೈಲ್ವೆ ಮೂಲಸೌಕರ್ಯ ನೀಡುವುದು ಕೇಂದ್ರದ ಕರ್ತವ್ಯವೂ ಹೌದು, ದೇಶದ ಆರ್ಥಿಕ ಹಿತಾಸಕ್ತಿಯೂ ಹೌದು ಎಂದರು.
ಕರ್ನಾಟಕ ಯಾರ ಬಳಿಯೂ ವಿಶೇಷ ಸವಲತ್ತು ಕೇಳುತ್ತಿಲ್ಲ; ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸ್ಪಷ್ಟವಾಗಿ ಧ್ವನಿ ಎತ್ತಲಾಗುವುದು ಎಂದರು.




