ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಅ.25ರಂದು ಡಬಲ್ ಧಮಾಕಾ. ಅಂದು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದು, ಇನ್ನೊಂದೆಡೆ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ’ ಆ್ಯಪ್ ಲೋಕಾರ್ಪಣೆಯಾಗಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಕ್ಟೋಬರ್ 25ರಂದು ನಾನು ದೆಹಲಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ನನ್ನ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ’ ಆ್ಯಪ್ ಲೋಕಾರ್ಪಣೆಯಾಗಲಿದೆ. ಈ ಆ್ಯಪ್ ಜನರಿಗೆ ಅವರ ವಿಚಾರಗಳನ್ನು ಮಾತಿನ ಮೂಲಕ ಹೇಳಿಕೊಳ್ಳಲು ವೇದಿಕೆ ಕಲ್ಪಿಸಲಿದೆ. ಅದರಲ್ಲಿ ಮೊದಲ ಧ್ವನಿ ನನ್ನದೇ ಎಂದಿದ್ದಾರೆ.
ತಲೈವಾ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ಅವರು, ಭಾರತದ ಅತ್ಯುನ್ನತ ಚಲನಚಿತ್ರ ಗೌರವ 51 ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿದ್ದಾರೆ. ಪ್ರಶಸ್ತಿಯನ್ನು 2019ರ ಎಪ್ರಿಲ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಪ್ರದಾನ ಮಾಡಿರಲಿಲ್ಲ.
ಈ ಮೂಲಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಎರಡನೇ ಕನ್ನಡಿಗ ಎಂಬ ಸಾಧನೆ ಕನ್ನಡಿಗರಿಗು ಮತ್ತು ರಜನಿಕಾಂತ್ ಹೆಮ್ಮೆ ಪಡುವಂತಾಗಿದೆ.
ಕೆ.ಬಾಲಚಂದರ್ ನಿರ್ದೇಶಿದ್ದ’ಅಪೂರ್ವ ರಾಗಂಗಳ್’ ತಮಿಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. 2 ನೇ ಚಿತ್ರದಲ್ಲಿ ಪುಟ್ಟಣ್ಣ ನಿರ್ದೇಶನದ ಕನ್ನಡದ ‘ಕಥಾ ಸಂಗಮ’ದಲ್ಲಿ ನಟಿಸಿದ್ದರು. ಇವರು ಇದುವರೆಗೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದು ಸೇರಿದಂತೆ 160ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ”ದರ್ಬಾರ್” ಹೆಸರಿನ ತ್ರಿಭಾಷಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಯನತಾರ , ಸುನಿಲ್ ಶೆಟ್ಟಿ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.



