ಬೆಂಗಳೂರು: ಬೆಳಿಗ್ಗೆ 11.30ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡ ನಂತರ ವಿಕ್ರಂ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಕಾಲವಶರಾಗಿದ್ದಾರೆ.
ಅಮೆರಿಕದಲ್ಲಿರುವ ಪುನೀತ್ ಹಿರಿಯ ಪುತ್ರಿ ಬಂದ ನಂತರ ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ. ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲು ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಷ್ ನಂತರ ಇದೇ ಸ್ಥಳದಲ್ಲಿ ಅವರ ಸ್ಮಾರಕ ನಿರ್ಮಾಣವಾಗಲಿದೆ.
ಈ ನಡುವೆ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ನೀಡಲಾಗಿದ್ದು, ಭಾರೀ ಸಂಖ್ಯೆಯ ಅಭಿಮಾನಗಳು ಬಂದ ಕಾರಣದಿಂದಾಗಿ ಲಾಠಿಚಾರ್ಜ್ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪುನೀತ್ ಸಾವಿನ ನಂತರ ಪ್ರತಿಕ್ರಿಯಿಸಿದ ರಾಘವೇಂದ್ರ ರಾಜ್ ಕುಮಾರ್, ರಾಜ್ ಕುಮಾರ್ ಅವರ ಸಾವಿನ ನಂತರ ಅವರಿಗೆ ಗೌರವಯುತವಾಗಿ ಕಳಿಸಿಕೊಡುವಲ್ಲಿ ನಾವೆಲ್ಲ ವಿಫಲರಾಗಿದ್ದೇವೆ. ಇದೀಗ ಪುನೀತ್ ರಾಜ್ ಕುಮಾರ್ ಅವರನ್ನು ಕಳಿಸಿಕೊಡುವ ಸಮಯದಲ್ಲಿ ಅಂತಹ ಘಟನೆಗಳು ಆಗಬಾರದು ಎಂದು ಮತ್ತು ಶಾಂತಿ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.
ಪ್ರಧಾನಿ, ಗೃಹ ಸಚಿವ ಸೇರಿದಂತೆ ನಟರು, ಗಾಯಕರು, ಪೋಷಕ ನಟರು, ಒಡನಾಡಿಗಳು ಪುನೀತ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳ ತುಂಬ ಪುನೀತ್ ರಾಜ್ ಕುಮಾರ್ ಆವರಿಸಿಕೊಂಡಿದ್ದು, ಯಾವುದೇ ಜಾಲತಾಣಗಳಲ್ಲೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಟ್ರೆಂಡಿಂಗ್ ಆಗಿದೆ.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಕುರಿತು ಅಸಮಾಧಾನ
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಸುವ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಪಕ್ಕದಲ್ಲಿರುವ ಕಲಾಗ್ರಾಮದಲ್ಲಿ ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ ಮತ್ತು ಡಾ.ಸಿದ್ದಲಿಂಗಯ್ಯ ಅವರನ್ನು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಇದಕ್ಕೂ ಮುನ್ನ ಡಾ.ರಾಜ್ ಕುಮಾರ್ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. ಅನಂತರ ಪಾರ್ವತಮ್ಮ ರಾಜ್ ಕುಮಾರ್ ಮತ್ತು ಅಂಬರೀಷ್ ಅವರ ಅಂತ್ಯ ಸಂಸ್ಕಾರವನ್ನು ಕೂಡ ಅಲ್ಲೇ ನೆರವೇರಿಸಲಾಗಿತ್ತು. ಇದಕ್ಕೆ ಕೂಡ ಆ ಕಾಲದಲ್ಲೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮತ್ತೊಮ್ಮೆ ಸರ್ಕಾರಿ ಸ್ಥಳ, ಕಲಾಕೇಂದ್ರಗಳಲ್ಲಿ ಗಣ್ಯ ವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಯುತ್ತಿದೆ.

ಪುನೀತ್ ರಾಜ್ ಕುಮಾರ್ ಜೀವನ ಯಾನ
ಪುನೀತ್ ರಾಜ್‍ಕುಮಾರ್, 17 ಮಾರ್ಚ್ 1975ರಂದು ಚೆನ್ನೈನಲ್ಲಿ ಜನಿಸಿದರು. ಬಾಲನಟ, ಹಿನ್ನೆಲೆ ಗಾಯಕ, ನಾಯಕ, ನಿರ್ಮಾಪಕ ಮತ್ತು ದೂರದರ್ಶನ ನಿರೂಪಕರಾಗಿ ಚಿತ್ರರಂಗ ಮತ್ತು ವಾಹಿನಿಗಳಲ್ಲಿ ಸಕ್ರಿಯವಾಗಿದ್ದರು.
ಪುನೀತ್ ಮೂಲ ಹೆಸರು ಲೋಹಿತ್. ಮಾಸ್ಟರ್ ಲೋಹಿತ್ ಹೆಸರಿನಲ್ಲಿ ಬಾಲ ಕಲಾವಿದನಾಗಿ ಅವರು ಸಾಕಷ್ಟು ಹೆಸರು ಗಳಿಸಿದ್ದರು. ಬೆಟ್ಟದ ಹೂವು ಚಿತ್ರಕ್ಕೆ ಬಾಲ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ದಾಖಲೆ ಅವರ ಹೆಸರಿನಲ್ಲಿದೆ. ಅವರು ಒಟ್ಟು 26 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇದಕ್ಕೂ ಮುನ್ನ ಬಾಲ್ ನಟನಾಗಿ ವಸಂತ ಗೀತ (1980), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಮೊದಲಾದ ಚಿತ್ರಗಳಲ್ಲಿ ಛಾಪುಮೂಡಿಸಿದ್ದರು.
ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ನಟನೆ ಅವರನ್ನು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾರಣವಾಯಿತು. ಲೋಹಿತ್, ಅಪ್ಪು ಆಗಿ ಕಡೆಗೆ ಪುನೀತ್ ಆಗಿ 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕರಾದರು. ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾ ಬಾಂಡ್, ಪವರ್ ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟರು. ಕನ್ನಡದ ಕೋಟ್ಯಧಿಪತಿ ಟೆಲಿವಿಷನ್ ಶೋ ನಿರೂಪಣೆ ಜನಪ್ರಿಯವಾಗಿತ್ತು.
ಪುನೀತ್ ಬಾಲ ನಟನಾಗಿ ಅಭಿನಯಿಸಿದ ಚಿತ್ರಗಳು
ಪ್ರೇಮದ ಕಾಣಿಕೆ
ಭಾಗ್ಯವಂತ
ಎರಡು ನಕ್ಷತ್ರಗಳು
ಬೆಟ್ಟದ ಹೂವು
ಚಲಿಸುವ ಮೋಡಗಳು
ಶಿವ ಮೆಚ್ಚಿದ ಕಣ್ಣಪ್ಪ
ಪರಶುರಾಮ್
ಯಾರಿವನು
ಭಕ್ತ ಪ್ರಹ್ಲಾದ
ವಸಂತ ಗೀತ
ನಾಯಕ ನಟನಾಗಿ ಅಭಿನಯಿಸಿದ ಚಿತ್ರಗಳು
ಅಪ್ಪು
ಅಭಿ
ವೀರ ಕನ್ನಡಿಗ
ಮೌರ್ಯ
ಆಕಾಶ್
ನಮ್ಮ ಬಸವ
ಅಜಯ್
ಅರಸು
ಮಿಲನ
ಬಿಂದಾಸ್
ವಂಶಿ
ರಾಜ್ ದ ಶೋಮ್ಯಾನ್
ಪೃಥ್ವಿ
ರಾಮ್
ಜಾಕಿ
ಹುಡುಗರು
ಪರಮಾತ್ಮ
ಅಣ್ಣ ಬಾಂಡ್
ಯಾರೇ ಕೂಗಾಡಲಿ
ನಿನ್ನಿಂದಲೇ
ಮೈತ್ರಿ
ಪವರ್ ಸ್ಟಾರ್
ಚಕ್ರವ್ಯೂಹ
ದೊಡ್ಮನೆ ಹುಡುಗ
ರಾಜಕುಮಾರ
ಅಂಜನಿ ಪುತ್ರ
ನಟಸಾರ್ವಭೌಮ
ಯುವರತ್ನ



