ಯಾರೋ ವ್ಯಕ್ತಿಗಳಿಗಾಗಿ ಧಾರ್ಮಿಕ ಕೇಂದ್ರದ ಬಗ್ಗೆ, ಧರ್ಮದ ಬಗ್ಗೆ ಮಾತಾಡುವುದು ಸರಿಯಲ್ಲ
ಬೆಂಗಳೂರು: ಧರ್ಮಸ್ಥಳದ ಬಳಿ ಸಾವಿರಾರು ಶವಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ. ಆದರೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಭಾಗದಲ್ಲಿ ಸಾವಿರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಲಿ ಎಂದು ಆಗ್ರಹಿಸುತ್ತೇನೆ. ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು ಎಂದರು.
ದಕ್ಷಿಣ ಭಾರತದಲ್ಲಿ ತಿರುಪತಿ ಹಾಗೂ ಧರ್ಮಸ್ಥಳ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕನೊಬ್ಬ ವೀಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾನೆ. ಈ ನಡುವೆ ಕೇರಳ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕೇರಳ ಸರ್ಕಾರ ಅಲ್ಲಿನ ದೇವಸ್ಥಾನಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ, ಶಬರಿಮಲೆ ಅಯ್ಯಪ್ಪ ದೇವಾಲಯದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಯಾವುದೇ ಕೊಲೆಯಾಗಿದ್ದರೆ ಸ್ಥಳೀಯ ಪೊಲೀಸ್ ಠಾಣೆ ತನಿಖೆ ಮಾಡುತ್ತದೆ ಎಂದರು.
ಸಾವಿರಾರು ಶವಗಳು ಸಿಕ್ಕಿದೆ ಎಂದರೆ, ಅವರ ಕುಟುಂಬದವರು ದೂರು ದಾಖಲಿಸುತ್ತಾರೆ. ಅಂತಹ ಪ್ರಕರಣ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ದೇವಾಲಯ ಮಾತ್ರವಲ್ಲದೆ, ಚರ್ಚ್, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಬಳಿ ಅನೇಕರು ಸಾಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ. ಯಾರೋ ಒಬ್ಬರಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಧರ್ಮಕ್ಕೆ ಅಪಮಾನ ಮಾಡಲು ವಿವಾದ ಮಾಡುವುದು ಸರಿಯಲ್ಲ. ಇದರಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ವಿಚಾರವೇ ಬರುವುದಿಲ್ಲ. ಆದರೂ ಪದೇ ಪದೆ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಯಾವುದೇ ವ್ಯಕ್ತಿ ತಪ್ಪು ಮಾಡಿದರೆ, ಆ ವ್ಯಕ್ತಿಯ ಬಗ್ಗೆ ಆರೋಪ ಮಾಡಲಿ. ಆದರೆ ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿ ಮಾಡಿ ಮಾತಾಡುವುದು ಸರಿಯಲ್ಲ. ಎಸ್‌ಐಟಿ ತಂಡಕ್ಕೆ ಸರ್ಕಾರ ಬೇರಾವುದೇ ಜವಾಬ್ದಾರಿ ವಹಿಸಬಾರದು. ಈ ತಂಡದ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದರು.
ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೇ ಹೊರತು, ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರೂ ಧರ್ಮಸ್ಥಳದ ದೇವಾಲಯವನ್ನು ಗುರಿ ಮಾಡಬಾರದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮಗಿಂತಲೂ ಹೆಚ್ಚಿನ ದೈವಭಕ್ತರು. ಅವರು ದೇವರ ಇಚ್ಛೆಯಂತೆಯೇ ನಡೆದುಕೊಳ್ಳಲಿ. ಧರ್ಮಸ್ಥಳದ ದೇವಾಲಯದ ಬಗ್ಗೆ ಮನಸ್ಸಿಗೆ ಬಂದಂತೆ ಮಾತಾಡುವುದು ತಪ್ಪು. ಇಂತಹ ಮಾತುಗಳು ಯಾವುದೇ ಸಚಿವರಿಗೆ ಶೋಭೆ ತರುವುದಿಲ್ಲ ಎಂದರು.




