ಎಸ್‌‍ಐಟಿ ತನಿಖೆ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ: ಡಿ.ಕೆ.ಶಿವಕುಮಾರ್‌

1 year ago

ಬೆಂಗಳೂರು: ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿರುವುದಾಗಿ ಹೇಳಿರುವ ಬಗ್ಗೆ  ಎಸ್‌‍ಐಟಿ ತನಿಖೆ ನಡೆಸುತ್ತಿರುವ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌  ವಿಧಾನಸಭೆಗೆ ತಿಳಿಸಿದರು.

ನಿಯಮ 69ರಡಿ ವಿ.ಸುನೀಲ್‌ಕುಮಾರ್‌ ವಿಷಯ ಪ್ರಸ್ತಾಪಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್‌, ನಿಮಗಿಂತ ಹೆಚ್ಚು ನಮ್ಮ ಶಾಸಕರು ಗೌರವ ಹೊಂದಿದ್ದಾರೆ. ನಮ್ಮ ಶಾಸಕಾಂಗ ಸಭೆಯಲ್ಲೂ ಭಕ್ತ-ಭಗವಂತನ ನಡುವಿನ ಸಂಬಂಧ ಹಾಳಾಗಬಾರದು ಎಂಬ ಚರ್ಚೆಯಾಗಿದೆ ಎಂದರು.

ಮಾತು ಬಿಡದ ಧರ್ಮಸ್ಥಳದ ಮಂಜುನಾಥ, ಕಾಸು ಬಿಡದ  ತಿಮ್ಮಪ್ಪ ಎಂಬ ಮಾತಿದೆ. ಧರ್ಮಸ್ಥಳದ ಬಗ್ಗೆ ನನಗೆ ನಂಬಿಕೆ, ಭಕ್ತಿ ಇದೆ. ಲಕ್ಷಾಂತರ ಭಕ್ತರು ಆರಾಧಿಸುತ್ತಾರೆ. ಅಲ್ಲಿ ಅನ್ನದಾಸೋಹ ನಡೆಯುತ್ತದೆ. ಅಲ್ಲಿ ನಡೆಯುತ್ತಿರುವ ಸೇವೆ ಬಗ್ಗೆ ಅನುಮಾನವಿಲ್ಲ. ಕ್ಷೇತ್ರದ ಬಗ್ಗೆಯಾಗಲಿ, ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಬಗ್ಗೆಯಾಗಲಿ ಅಲ್ಲಿನ ಪರಂಪರೆಯ ಬಗ್ಗೆ ನಿಮಗಿಂತ ಹೆಚ್ಚು ಕಾಳಜಿ ಇದೆ.

ಸಾಮಾಜಿಕ ಮಾಧ್ಯಮದಲ್ಲಿ  ಅಪಪ್ರಚಾರವಾಗುತ್ತಿದೆ. ರೋಷ-ದ್ವೇಷ ಏನೂ ಇಲ್ಲ.  ಧರ್ಮಸ್ಥಳದ ಬಗ್ಗೆ ನಮ ನಂಬಿಕೆ ಅಚಲವಾಗಿದೆ ಎಂದರು.

ಬಿಜೆಪಿ ಹಿರಿಯ ಶಾಸಕ ಎಸ್‌‍.ಸುರೇಶ್‌ಕುಮಾರ್‌ ಮಾತನಾಡಿ, ಶಿವಕುಮಾರ್‌ ಭಕ್ತನಾಗಿ ಹೇಳಿದ್ದಾರೆಯೋ, ಡಿಸಿಎಂ ಆಗಿ ಹೇಳಿದ್ದಾರೋ ಗೊತ್ತಿಲ್ಲ. ಎಸ್‌‍ಐಟಿ ರಚನೆ ಮಾಡುವ ಹಿಂದಿನ ದಿನ ದಕ್ಷಿಣ  ಕನ್ನಡ ಪೊಲೀಸರೇ ತನಿಖೆ ನಡೆಸಲು ದಕ್ಷರಾಗಿದ್ದಾರೆ  ಎಂದು ಹೇಳಿದ್ದರು. ಸರ್ಕಾರದ ಹೇಳಿಕೆ ನೋಡಿದರೆ ಹೇಳಿಕೆಗೂ ನಡುವಳಿಕೆಗೂ ಸಂಬಂಧವಿಲ್ಲದಂತಾಗಿದೆ. ಅನಾಮಿಕನನ್ನು ಎಸ್‌‍ಐಟಿ ಕಸ್ಟಡಿಯಲ್ಲಿಟ್ಟುಕೊಳ್ಳಬೇಕು. ಧರ್ಮಸ್ಥಳಕ್ಕೆ ನುಗ್ಗುತ್ತೇವೆ ಎಂದು ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕ್ರಮವಾಗಲಿಲ್ಲ ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವುಗೊಳಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರಸಾರವಾಗುತ್ತಿದೆ ಎಂದರು.

Leave a Reply