ಮಂಗಳೂರು: ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ. ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗುತ್ತದೆ ಎಂಬುದು ಇನ್ನೊಂದು ಅರ್ಥ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಹೇಳಿದರು.
ವಾಮಂಜೂರಿನ ಮಂಗಳಜ್ಯೋತಿ ಜಂಕ್ಷನ್ ಬಳಿ ಅಂಧಕಾರದಲ್ಲಿ ಮುಳುಗಿದ ಸಮಾಜವನ್ನು ಬೆಳಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಇದರ ನೇತೃತ್ವದಲ್ಲಿ ಆಯೋಜಿಸಿದ ಯಶಸ್ವಿ ಹಾಗೂ ಅತ್ಯಂತ ಅರ್ಥಗರ್ಭಿತ ಬೆಳಕಿನ ಹಬ್ಬ ಸೌಹಾರ್ದ ದೀಪಾವಳಿಯ ಸಂಭ್ರಮ – 2023ರ ಕಾರ್ಯಕ್ರಮ ನಡೆಯಿತು. ಸೌಹಾರ್ದ ದೀಪಾವಳಿ ಸಂಭ್ರಮ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಗಿಲನ್, ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಪ್ರಗತಿಪರ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ. ವಸಂತ್ ಕುಮಾರ್ ಮಾತನಾಡಿ, ಬೆಳಕು ಎಲ್ಲರಿಗೂ ಬೇಕು. ಹಾಗಾಗಿ ಬೆಳಕಿನ ಹಬ್ಬಕ್ಕೆ ಜಾತಿ-ಧರ್ಮ ಎಂಬುದಿಲ್ಲ. ದಾರಿ ತಪ್ಪುತ್ತಿರುವ ಯುವಕರಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಿಸಬೇಕು. ಸಮಾಜ ಎಂಬ ಮೂರಕ್ಷರದಲ್ಲಿ ಸಂಬ೦ಧಗಳು ಮಾನವನಲ್ಲಿ ಜನಿಸಬೇಕು ಎಂಬ ಅರ್ಥ ಅಡಗಿದೆ. ಅದೇ ಸಮಾಜ ಭಾವನೆ. ಸಂಸ್ಕಾರ ಎಂದರೆ ಬರೇ ದೇವಸ್ಥಾನ ಕಟ್ಟುವುದು ಮೂರ್ತಿ ಕೆತ್ತುವುದಲ್ಲ. ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಎಂದರು.
ಮ೦ಗಳೂರಿನ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಸುದೀಪ್ ಪೌಲ್ ಮಾತನಾಡಿ, ಭಾರತದ ಇತಿಹಾಸ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಕಂಡಿದೆ. ಆಗ ಎಲ್ಲರೂ ಪ್ರೀತಿ, ಸಾಮರಸ್ಯ, ಭಾವೈಕ್ಯತೆಯಿಂದ ಜೀವಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಬದಲಾಗಿದೆ. ದೀಪಾವಳಿ ಎಲ್ಲ ಧರ್ಮದ ಗಡಿ ಮೀರಿ ಆಚರಿಸುವ ಹಬ್ಬವಾಗಲಿ ಎಂದು ಶುಭ ಹಾರೈಸಿದರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ Roy Castelino ಅಧ್ಯಕ್ಷತೆ ವಹಿಸಿದ್ದರು. ಕು. ಲತೀಕ್ಷಾ ಸ್ವಾಗತ ನೃತ್ಯ ಮಾಡಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ Sunil Kumar Bajal ಸ್ವಾಗತಿಸಿ ಪ್ರಸ್ತಾವಿಕ ಮಾತನ್ನಾಡಿದರು. ಕಾರ್ಪೊರೇಟರ್ Abdul Latheef Kandak , ಮಂಗಳಜ್ಯೋತಿಯ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಲಕ್ಷ್ಮಣ್ ವಾಮಂಜೂರು, ಮಂಗಳೂರು ಬೆಥನಿ ಸಿಸ್ಟರ್ ಪ್ರೊವಿನ್ಸಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೋನ್ಸಾ, Manjula Nayak (ಜಂಟಿ ಕಾರ್ಯದರ್ಶಿ), ಡಾಲ್ಫಿ ಡಿ’ಸೋಜ(ಕೋಶಾಧಿಕಾರಿ) ಹಾಗೂ ಇತರ ಹಿರಿಯ ಗಣ್ಯರು, ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. Manojkumar Vamanjoor ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಮತ್ತು ಬಳಗದವರು ಸೌಹಾರ್ದ ನೃತ್ಯ ಪ್ರದರ್ಶಿಸಿದರು.




