ಕರ್ನಾಟಕ ವಿಧಾನಮಂಡಲದ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಯಿಂದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ

2 years ago

ಅಧಿಕಾರಿಗಳು ಪೂರಕ ಮಾಹಿತಿಯೊಂದಿಗೆ ಸಿದ್ಧತೆಯಲ್ಲಿರಬೇಕು: ಎಡಿಸಿ ಮಹಮ್ಮದ್ ಝುಬೇರ್

ಬಳ್ಳಾರಿ: ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಇದೇ ಸೆಪ್ಟೆಂಬರ್ 27 ರಂದು ಜಿಲ್ಲೆಗೆ ಆಗಮಿಸಲಿದ್ದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮುದಾಯದವರ ಅಭಿವೃದ್ಧಿಗಾಗಿ ಹಮ್ಮಿಕೊಂಡ ವಿವಿಧ ಯೋಜನೆ, ಕಾರ್ಯಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಪೂರಕ ಮಾಹಿತಿಯೊಂದಿಗೆ ಸಿದ್ಧರಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಸೂಚಿಸಿದರು.

ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಇವರ ನೇತೃತ್ವದ 19 ಜನ ಸದಸ್ಯರನ್ನೊಳಗೊಂಡ ಸಮಿತಿಯು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಸೆ.27 ರಂದು ಆಗಮಿಸಲಿರುವ ಸಮಿತಿಯ ಸದಸ್ಯರನ್ನು ಗಡಿಭಾಗದಲ್ಲಿ ಆಹ್ವಾನಿಸಬೇಕು. ಶಿಷ್ಠಾಚಾರ ಪಾಲಿಸಿ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು ಎಂದರು.

ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದ ಈ ಸಮಿತಿಯಲ್ಲಿ ವಿಧಾನಮಂಡಲದ ಸದಸ್ಯರುಗಳಾದ ಬಿ.ಜಿ. ಗೋವಿಂದಪ್ಪ, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಅಬ್ಬಯ್ಯ ಪ್ರಸಾದ, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಮಾನಪ್ಪ ಡಿ. ವಜ್ಜಲ, ಬಸನಗೌಡ ದದ್ದಲ, ಅನಿಲ್ ಚಿಕ್ಕಮಾದು, ಬಸವರಾಜ್ ಮತ್ತಿಮೂಡ್, ಎನ್. ಶ್ರೀನಿವಾಸಯ್ಯ, ಕೆ.ಸಿ. ವೀರೇಂದ್ರ ಪಪ್ಪಿ, ಪ್ರಕಾಶ ಕೋಳಿವಾಡ, ಕೃಷ್ಣ ನಾಯಕ, ಸಿಮೆಂಟ್ ಮಂಜು, ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ರಾಜೇಂದ್ರ ರಾಜಣ್ಣ, ವೈ.ಎಂ. ಸತೀಶ್ ಹಾಗೂ ಜಗದೇವ್ ಗುತ್ತೇದಾರ್ ಅವರು ಒಳಗೊಂಡಿದ್ದಾರೆ. ಸದಸ್ಯರ ಆಪ್ತರೊಂದಿಗೆ ಸಮನ್ವಯತೆ ಸಾಧಿಸಿ, ಅಗತ್ಯ ಮಾಹಿತಿ ಮತ್ತು ಸೌಲಭ್ಯ ಒದಗಿಸಬೇಕು ಎಂದರು.

ಸೆ.27 ರಂದು ಬೆಳಿಗ್ಗೆ 10.30 ಗಂಟೆಗೆ ಜಿಪಂ ನಜೀರ್ಸಾಬ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದು, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ತಮ್ಮ ಇಲಾಖೆಗಳ ಯೋಜನೆಗಳ ಪ್ರಗತಿ ಮಾಹಿತಿ, ಕಾಮಗಾರಿಗಳ ಸ್ಥಿತಿಗತಿ ಹಾಗೂ ಇತರೆ ಸಮಗ್ರ ವಿವರಗಳನ್ನು ಸಿದ್ಧತೆಯಲ್ಲಿಟ್ಟುಕೊಳ್ಳುವಂತೆ ಸೂಚಿಸಿದರು. 

ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ, ಬಳಕೆಯಾಗದ ಅನುದಾನ, ಯೋಜನೆ ಮತ್ತು ಸೌಲಭ್ಯ ವಿತರಣೆಯಲ್ಲಿ ವಿಳಂಬ ಹಾಗೂ ವಿವಿಧ ಯೋಜನೆಗಳ ಮಾಹಿತಿ ಸಮರ್ಪಕವಾಗಿ ಒದಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ ಉಪಕ್ರಮ, ವಿದ್ಯಾರ್ಥಿವೇತನ, ಮಕ್ಕಳನ್ನು ಮುನ್ನಲೆಗೆ ತರಲು ಅನುಷ್ಠಾನಗೊಳಿಸಿದ ರೂಪು-ರೇಷೆಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿನ ವಸತಿ ಶಾಲೆಗಳಿಗೆ ಭೇಟಿ ನೀಡಬೇಕು. ಅಲ್ಲಿನ ಗುಣಮಟ್ಟದ ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಿಸಬೇಕು. ಯಾವುದೇ ದೂರು ಉಲ್ಲೇಖವಾಗಬಾರದು ಎಂದರು.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಡೆದ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣಗಳು, ಭೂಒಡೆತನ ಯೋಜನೆ, ನಿಗಮಗಳಡಿ ನೀಡುವ ವಿವಿಧ ಸಾಲ-ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲಾ ವಿವರ ಹಾಗೂ ಇತರೆ ಮಾಹಿತಿಯೂ ಒಳಗೊಂಡು ಉತ್ತರಿಸಲು ಸಿದ್ಧರಿರಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಸಮಿತಿಯ ಸದಸ್ಯರು ಪರಿಶಿಷ್ಟರ ಕಾಲೋನಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆಗಳು ಕೂಡ ಇದ್ದು. ಹಾಗಾಗಿ ಅಧಿಕಾರಿಗಳು ಪರಿಶಿಷ್ಟರ ಕಾಲೋನಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಚರಂಡಿ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು. ಆಯಾ ಸಾಲಿನ ಯೋಜನೆಗಳ ಕಾರ್ಯಪ್ರಗತಿ ವಿವರ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಎಎಸ್ಪಿ ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ., ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply