ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದೀಗ ಕುತೂಹಲಕರ ಘಟ್ಟ ತಲುಪಿವೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ನಾಯಕರು ಸೆಪ್ಟೆಂಬರ್ 15 ರಿಂದ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಲು ವೇದಿಕೆ ನಿರ್ಮಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮತ್ತು ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಈ ಪಾದಯಾತ್ರೆ ನಡೆಯಲಿದೆ.
ಸೆಪ್ಟೆಂಬರ್ 15ರಂದು ಕೂಡಲಸಂಗಮದಿಂದ ಆರಂಭವಾಗಲಿರುವ ಪಾದಯಾತ್ರೆ ಬಳ್ಳಾರಿಯಲ್ಲಿ ಅಂತ್ಯವಾಗಲಿದೆ. ಮಾಜಿ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಜಿ.ಎಂ. ಸಿದ್ದೇಶ್ವರ್ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಲ್ಲ ಸಮಾನ ಮನಸ್ಕ ನಾಯಕರು ಮತ್ತು ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಿರುವ ಇವರು ಇದಕ್ಕೆ ಹೈಕಮಾಂಡ್ ಅನುಮತಿ ಪಡೆದುಕೊಳ್ಳಲು ಯತ್ನಾಳ್ ನೇತೃತ್ವದಲ್ಲಿ ಸೋಮವಾರ ನಿಯೋಗವೊಂದು ದೆಹಲಿಗೆ ತೆರಳಲಿದೆ.
ನಿಯೋಗ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಪಾದಯಾತ್ರೆಯ ಉದ್ದೇಶವನ್ನು ವಿವರಿಸಲಿದೆ. ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕೂಡ ಗಮನಕ್ಕೆ ತರಲಿದೆ.
ಉತ್ತರ ಕರ್ನಾಟಕದಲ್ಲಿ ನಡೆಯಲಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್, ಬಳ್ಳಾರಿ ಪಾದಯಾತ್ರೆಗೆ ಕೇಂದ್ರದ ನಾಯಕರು ಒಪ್ಪಿಗೆ ನೀಡಿದರೆ ನಾವು ಕೂಡ ಅದರಲ್ಲಿ ಭಾಗವಹಿಸುತ್ತೇವೆ ಎಂದರು.
ಪಕ್ಷದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಇರುವುದು ನನ್ನ ಗಮನಕ್ಕೂ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರನ್ನು ಕೇಂದ್ರದ ನಾಯಕರು ಕರೆಸಿ ಈ ಹಿಂದೆಯೂ ಚರ್ಚೆ ಮಾಡಿದ್ದಾರೆ. ಈಗಲೂ ಮತ್ತೊಂದು ಸುತ್ತಿನಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಎಲ್ಲರೂ ಭಿನ್ನಾಭಿಪ್ರಾಯ ಬಿಟ್ಟು ಒಟ್ಟಾಗಿ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಜನರು ಕೂಡ ನಮ್ಮಿಂದ ಅದನ್ನೇ ನಿರೀಕ್ಷೆ ಮಾಡುತ್ತಾರೆ ಎಂದರು.




