ಈ ಚಿತ್ರದಲ್ಲಿ ಕಾಣುವ ವ್ಯಕ್ತಿ ಎನ್‌ಸಿಪಿ ಪಕ್ಷದ ಸಂಸದರಾದ ಮಹಮ್ಮದ್ ಫೈಸಲ್. ಲಕ್ಷದ್ವೀಪದಿಂದ ಆಯ್ಕೆಯಾಗಿದ್ದಾರೆ. ಕೇರಳದ ಕವರಟ್ಟಿ ನ್ಯಾಯಾಲಯ ಈತನನ್ನು ಕೊಲೆ ಪ್ರಯತ್ನದ ಆರೋಪದ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಶಿಕ್ಷೆಯ ಹಿನ್ನೆಲೆಯಲ್ಲಿ ಲೋಕಸಭಾ ಸೆಕ್ರೆಟರಿಯೇಟ್ ಈತನ ಸಂಸದ ಸ್ಥಾನವನ್ನು ಅಮಾನ್ಯಗೊಳಿಸಿ ಆದೇಶ ಹೊರಡಿಸಿತ್ತು.
ಏತನ್ಮಧ್ಯೆ ಈ ಸಂಸದ ಕೇರಳದ ಹೈಕೋರ್ಟಿನಲ್ಲಿ ತನಗೆ ವಿಧಿಸಲಾಗಿರುವ ಶಿಕ್ಷೆಗೆ ತಡೆಯಾಜ್ಞೆಯನ್ನು 25/1/2023 ರಂದು ಪಡೆದುಕೊಂಡಿರುತ್ತಾರೆ. ತಡೆಯಾಜ್ಞೆ ಹಿನ್ನೆಲೆಯಲ್ಲಿ ಈತನ ಲೋಕಸಭಾ ಸ್ಥಾನ ಮರುಸ್ಥಾಪನೆಗೊಳ್ಳಬೇಕಾಗಿತ್ತು. ಆದರೆ ಲೋಕಸಭಾ ಸೆಕ್ರೆಟರಿಯವರು ಈ ಕೆಲಸವನ್ನು ಮಾಡುವಲ್ಲಿ ವಿಫಲರಾದರು.
ನಮ್ಮ ಹಕ್ಕುಗಳು ಸಾರ್ವಜನಿಕರು ಸರ್ಕಾರ ಅಥವಾ ಖಾಸಗಿ ವ್ಯಕ್ತಿಗಳಿಂದ ಹರಣವಾದ ಸಂದರ್ಭದಲ್ಲಿ ಸಂವಿಧಾನ ಭಾರತೀಯ ಪ್ರಜೆಗೆ ನೀಡಿರುವ ಅಸ್ತ್ರ ಎಂದೇ ಪರಿಗಣಿಸಲಾಗಿರುವ 32ನೇ ವಿಧಿ ಅನ್ವಯ ಸುಪ್ರೀಂ ಕೋರ್ಟಿನಲ್ಲಿ ಲೋಕಸಭಾ ಸೆಕ್ರೆಟರಿಯವರ ಆದೇಶವನ್ನು ಪ್ರಶ್ನಿಸಿ, ಮೇಲ್ಮನವಿಯನ್ನು ಸಂಸದರು ಸಲ್ಲಿಸಿದರು.
ಗೌರವಾನ್ವಿತ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠ ಸಂಸದನ ಮನವಿಯನ್ನ ಅಂಗೀಕರಿಸಿ ಲೋಕಸಭಾ ಸೆಕ್ರೆಟರಿಯೇಟಿನ ಆದೇಶವನ್ನು ರದ್ದುಗೊಳಿಸಿದೆ.
ಇದೇ ಸಂವಿಧಾನ, ಇದೇ ಕಾನೂನು, ಇದೇ ನ್ಯಾಯ ವಿತರಣಾ ಪದ್ಧತಿ, ಕಾಂಗ್ರೆಸ್ ಪಕ್ಷದ ಸಂಸದ ರಾಹುಲ್ ಗಾಂಧಿಗೂ ಅನ್ವಯವಾಗುತ್ತದೆ. ರಾಹುಲ್ ಗಾಂಧಿಗೂ ನ್ಯಾಯಾಲಯ ತಕ್ಷಣವೇ ಜೈಲಿಗೆ ಕಳುಹಿಸಿಲ್ಲ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ. ನ್ಯಾಯಾಂಗ ಹೋರಾಟವನ್ನು ಅವರ ವಕೀಲರು ಮುಂದುವರೆಸುತ್ತಾರೆ.
ಆದರೂ ಸಹ ಕಾಂಗ್ರೆಸ್ ಮುಖಂಡರು, ಫೇಸ್ಬುಕ್ಕಿನ ಕಾಂಗ್ರೆಸ್ ಪಕ್ಷದ ನಾಯಕರು, ವಕ್ತಾರರು, ಪರಗತಿಪರರು ಹಗಲು ರಾತ್ರಿ ಫೇಸ್ಬುಕ್ಕಿನಲ್ಲಿ ರಾಹುಲ್ ಗಾಂಧಿಯ ಮಾನಹಾನಿ ಪ್ರಕರಣದ ಶಿಕ್ಷೆಯ ಕುರಿತಾಗಿ ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಹೀಗಾದರೆ ಹಿರಿಯರಾದ ಅವರ ಆರೋಗ್ಯ ಏನಾಗಬಹುದು. ರಾಹುಲ್ ಗಾಂಧಿ ಅವರಿಗೆ ಏನೂ ಆಗುವುದಿಲ್ಲ ಚಿಂತಿಸಬೇಡಿ.
ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ರಾಹುಲ್ ಗಾಂಧಿಯವರಿಗೆ ವಿಧಿಸಿಲ್ಲ. ಬದಲಾಗಿ ಪ್ರಧಾನಿ ಮೋದಿ ಅವರ ಜಾತಿ / ಮೋದಿ ಸಮುದಾಯದ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಅಪರಾಧದ ಮೇಲೆ ಮಾನಹಾನಿ ಪ್ರಕರಣ ಸಾಬೀತಾಗಿ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಈ ಕೇಸು ಉನ್ನತ ನ್ಯಾಯಾಲಯಗಳಲ್ಲಿ ಸುಲಭವಾಗಿ ಬಗೆಹರಿಸಬಲ್ಲ ಚಾಣಾಕ್ಷರು ಕಾಂಗ್ರೆಸ್ ಪಕ್ಷದ ವಕೀಲರ ಪಟ್ಟಿಯಲ್ಲಿ ಇದ್ದಾರೆ. ಈ ಪ್ರಕರಣವನ್ನು ಹಿಡಿದುಕೊಂಡು ಕಾಂಗ್ರೆಸ್ ಪಕ್ಷ ಮೈಲೇಜ್ ತೆಗೆದುಕೊಳ್ಳಲು ನಿಜಕ್ಕೂ ಸಾಧ್ಯವಾಗುವುದಿಲ್ಲ.
ಪ್ರತಿದಿನ ಬಿಜೆಪಿ ಮುಖಂಡರು ಮಾತನಾಡುವ ಭಾಷೆ, ಶೈಲಿ, ಬಾಡಿ ಲಾಂಗ್ವೇಜ್ ಆ ಭಕ್ತರಿಗೆ ಪ್ರೀತಿ. ಇವುಗಳಲ್ಲಿ ಮಾನಹಾನಿ ಉಂಟಾಗುವ ಮಾತುಗಳಿದ್ದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು, ಕಾನೂನು ನೂರಾರು ಪ್ರಕರಣಗಳನ್ನು ದಾಖಲಿಸಲು ಅವಕಾಶವಿದೆ.
ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರಗಳು, ಹಗರಣಗಳು, ಬೆಲೆ ಏರಿಕೆ ಇವುಗಳನ್ನು ವಿರೋಧಿಸಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಕುರಿತು ತಾವು ಯಾವ ರೀತಿಯ ನಿರ್ಣಯ ಕೈಗೊಳ್ಳುತ್ತೇವೆ ಮತ್ತು ತಮ್ಮ ಪಕ್ಷದ ಪ್ರಣಾಳಿಕೆ ಏನು ಎಂಬುದರ ಮೇಲೆ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗುತ್ತದೆ. ಪ್ರಾದೇಶಿಕ ಪಕ್ಷಗಳು ಎಲ್ಲಾ ರಾಜ್ಯಗಳಲ್ಲಿ ಬಲಾಢ್ಯವಾಗಿ ಬೆಳೆದಿದ್ದು ಅವುಗಳನ್ನು ಹೈಜಾಕ್ ಮಾಡುವ ಕುತ್ಸಿತ ಮನೋಭಾವವನ್ನು ಕಾಂಗ್ರೆಸ್ ತೊರೆದು ಪಕ್ಷ ಸಂಘಟನೆ ಮಾಡಬೇಕು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಏನು ಹಾಗೂ ಇತ್ತೀಚೆಗೆ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಏನು, ಎಲ್ಲಿ ವಿಫಲವಾಗಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನವನ್ನು ಕಾಂಗ್ರೆಸ್ ಪಕ್ಷ ಮಾಡಿಕೊಳ್ಳಬೇಕು. ಸತತ ಎರಡು ಚುನಾವಣೆಗಳಿಂದ ಉತ್ತರ ಪ್ರದೇಶದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಪ್ರಿಯಾಂಕಾ ಗಾಂಧಿಯ ಸಾಧನೆಯನ್ನು ಕೂಡ ಒರೆಗೆ ಹಚ್ಚಿ ನೋಡುವ ಕೆಲಸವನ್ನು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮಾಡಿದರೆ ಚೆನ್ನ.
– ಜಿ ಟಿ ನರೇಂದ್ರ ಕುಮಾರ್, ವಕೀಲರು ಮತ್ತು ಕಾನೂನು ಸಲಹೆಗಾರರು, ಬೆಂಗಳೂರು




