ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಆದೇಶದ ಪ್ರತಿ ತಮ್ಮ ಕೈ ಸೇರಿದೆ. ಹಾಗಾಗಿ ಗ್ರಾಮಗಳಲ್ಲೆಲ್ಲಾ ವಿಜಯೋತ್ಸವ ಆಚರಿಸಿ ಎಂದು ಸಮುದಾಯದ ಜನತೆಗೆ ಕೂಡಲ ಸಂಗಮ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಕರೆ ನೀಡಿದ್ದಾರೆ.
ಮೀಸಲಾತಿ ಸಿಗುವವರೆಗೂ ಮಠಕ್ಕೆ ಮರಳುವುದಿಲ್ಲ ಎನ್ನುವ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಿಸಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಈಗ ಮೀಸಲಾತಿ ಆದೇಶ ಪ್ರತಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಠಕ್ಕೆ ಮರಳುತ್ತಿದ್ದೇನೆ. ಸಚಿವ ಸಂಪುಟ ನಿರ್ಣಯ ಬಂದ ಕೂಡಲೇ ವಿಜಯೋತ್ಸವ ಸರಿಯಲ್ಲ, ಆದೇಶದ ಪ್ರತಿ ಸಿಗುವವರೆಗೂ ವಿಜಯೋತ್ಸವ ಬೇಡ ಎಂದಿದ್ದೆ. ಈಗ ಪ್ರತಿ ಸಿಕ್ಕಿದ್ದು ವಿಜಯೋತ್ಸವ ಆಚರಿಸಬಹುದು ಎಂದರು.
ತಮ್ಮ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದ ಶ್ರೀಗಳು, ವೀರಶೈವ ಲಿಂಗಾಯತ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಆದೇಶ ಪ್ರತಿಯನ್ನು ಸ್ವೀಕರಿಸಿ ಸಮುದಾಯದ ಪರವಾಗಿ ಸಿಎಂ ಬೊಮ್ಮಾಯಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ನೀತಿ ಸಂಹಿತೆ ಜಾರಿಗೂ ಮೊದಲೇ ನ್ಯಾಯ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇದರ ಶ್ರೇಯಸ್ಸು ಎಲ್ಲರಿಗೂ ಸಿಗಬೇಕು. ಇದು ಮೊದಲ ಜಯ ನಮ್ಮನ್ನು 2ಡಿ ಗೆ ಸೇರಿಸಿದ್ದು, ಚುನಾವಣೆ ಮುಗಿದ ಬಳಿಕ ಒಬಿಸಿ ಮೀಸಲಾತಿಗೆ ಹೋರಾಟ ಆರಂಭವಾಗಲಿದೆ. ಇದೀಗ ಆದೇಶ ಪ್ರತಿಯನ್ನು ಸ್ವೀಕರಿಸಿದ್ದು, ಅಂಬೇಡ್ಕರ್, ಬಸವಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಾನು ಮಠಕ್ಕೆ ತೆರಳಲಿದ್ದೇನೆ ಎಂದರು.
ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಮೀಸಲಾತಿ ತೀರ್ಮಾನ ಕೈಗೊಂಡಿದೆ. ನಮಗೆ ಸರ್ಕಾರದ ಪ್ರಮುಖರು ಫೋನ್ ಮಾಡಿ ಈ ಮೀಸಲಾತಿ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎನ್ನುವ ಡಿಕೆ ಶಿವಕುಮಾರ್ ಮಾತು ಸತ್ಯಕ್ಕೆ ದೂರವಾದದ್ದು. ನಮಗೆ ಯಾರು ಒಪ್ಪಿಕೊಳ್ಳುವಂತೆ ಫೋನ್ ಮಾಡಿಲ್ಲ, ನಮ್ಮ ಸರ್ಕಾರ ಬಂದ ಮೇಲೆ ಈಗ ಮಾಡಿರೋ ಮೀಸಲಾತಿ ನಿರ್ಣಯ ರದ್ದು ಮಾಡುತ್ತೇವೆ ಅನ್ನೋದು ತಪ್ಪು. ಅವರ ಸರ್ಕಾರ ಬಂದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಅದು ಬಿಟ್ಟು ಈ ರೀತಿಯ ಹೇಳಿಕೆ ಕೊಡೋದು ಸರಿಯಲ್ಲ ಎಂದರು.
ಇದೇ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರು ದೊಡ್ಡ ಶಕ್ತಿ. ಶಿವಕುಮಾರ್ ಅನ್ನೋ ಮನುಷ್ಯನಿಗೆ ಧಮ್ ತಾಕತ್ ಅನ್ನೋದು ಇದ್ದರೆ ಮೀಸಲಾತಿ ತೆಗೀಲಿ ನೋಡೋಣ, ಅವರು ಏನಾದರೂ ತೆಗೆದರೆ ಸರ್ವನಾಶ ಆಗಿ ಹೋಗುತ್ತಾರೆ. ಅವರ ಬ್ರದರ್ಸ್ ಗಾಗಿ ಈ ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆ ರೀತಿ ಮಾಡಿದರೆ ಅವರು ಮೆಕ್ಕಾ ಮದೀನಕ್ಕೆ ಹೋಗಬೇಕಾಗುತ್ತದೆ. ಅವರ ಸಮುದಾಯವೇ ಅವರಿಗೆ ಮತ ಹಾಕಲ್ಲ, ಹುಷಾರು ಎಂದು ಡಿಕೆ ಶಿವಕುಮಾರ್ ಗೆ ಎಚ್ಚರಿಕೆ ನೀಡಿದರು.




