ಮಲ್ಲೇಶ್ವರಂನಲ್ಲಿ ನೇರಾನೇರ ಸ್ಪರ್ಧೆ

3 years ago

ಮಲ್ಲೇಶ್ವರಂ: ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ಸ್ಪರ್ಧೆಯ ಮೂಲಕ ದೇಶದ ಗಮನ ಸೆಳೆದಿರುವ ಈ ಕ್ಷೇತ್ರ ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿಪ್ರಮುಖ ಹೆಸರು ಗಳಿಸಿದೆ. ಒಮ್ಮೆ ಸಿಪಿಐನಿಂದ ಕಾರ್ಮಿಕ ಮುಖಂಡ ಎಂ ಎಸ್ ಕೃಷ್ಣನ್ ಆಯ್ಕೆಯಾಗಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಂ ಆರ್ ಸೀತಾರಾಮ್ ಸತತವಾಗಿ ಎರಡು ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದರು. ಆನಂತರದಲ್ಲಿ ಮೂರು ಬಾರಿ ಆಯ್ಕೆಯಾಗಿ ದಾಖಲೆ ಮಾಡಿರುವ ಅಶ್ವಥ್ ನಾರಾಯಣ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ನಾಲ್ಕು ಅವಧಿಯಲ್ಲೂ ಅಶ್ವಥ್ ನಾರಾಯಣ್ ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಬದಲಾಗಿರುವುದು ವಿಶೇಷ. ಈ ಕ್ಷೇತ್ರ ಕೂಡ ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿ. ಹಿಂದೊಮ್ಮೆ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಮರುದಿನವೇ ವಿದೇಶಕ್ಕೆ ತೆರಳಿ ನಾಪತ್ತೆಯಾಗಿದ್ದರು.

ಇಂತಹ ಹೊಂದಾಣಿಕೆ ಕ್ಷೇತ್ರದಲ್ಲಿ ಈ ಬಾರಿ ಒಪ್ಪಂದದ ಸದ್ದಿಲ್ಲ. ಒಕ್ಕಲಿಗ ಬ್ರಾಹ್ಮಣ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಕಾಂಗ್ರೆಸ್ ಹೊಸ ಮುಖ ಅನೂಪ್ ಅಯ್ಯಂಗಾರ್ ಅವರನ್ನು ಕಣಕ್ಕಿಳಿಸುವ ಮೂಲಕ ತನ್ನ ಸಾಂಪ್ರದಾಯಿಕ ಮತ ಬ್ಯಾಂಕಿನ ಜೊತೆಗೆ ಬ್ರಾಹ್ಮಣ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದು ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವಂತೆ ಕಂಡುಬರುತ್ತದೆಯಾದರು ಜೆಡಿಎಸ್ ನಿಂದ ಸ್ಪರ್ಧಿಸಿರುವ ಯುವಕ ಉತ್ಕರ್ಷ ಕುಮಾರ್ ಪಡೆಯುವ ಮತಗಳು ಗೆಲುವನ್ನು ನಿರ್ಧರಿಸಲಿದೆ.

Leave a Reply