ರಾಜಾಜಿನಗರ: ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಅವರ ಸ್ಪರ್ಧೆಯಿಂದ ಗಮನ ಸೆಳೆಯುತ್ತಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿಕಾಂಗ್ರೆಸ್ ಹೊಸ ಪ್ರಯೋಗ ಮಾಡಿದೆ. ವಿಧಾನ ಪರಿಷತ್ತಿಗೆ ಸತತವಾಗಿ ಆಯ್ಕೆಯಾಗುತ್ತಿರುವ ಬಿ ಪುಟ್ಟಣ್ಣ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸಿದೆ. ಆರಂಭದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರಾದರೂ ನಂತರದಲ್ಲಿ ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಪುಟ್ಟಣ್ಣ ಪರವಾಗಿ ಕೆಲಸ ಮಾಡುತ್ತಿರುವುದು ಹೊಸ ಉತ್ಸಾಹ ಮೂಡಿಸಿದೆ.
ಜೆಡಿಎಸ್ ಇಲ್ಲಿ ಖ್ಯಾತ ವೈದ್ಯ ಒಕ್ಕಲಿಗರ ಸಂಘದ ಮುಖಂಡ ಡಾ. ಆಂಜಿನಪ್ಪ ಅವರನ್ನು ಕಣಕ್ಕಿಳಿಸಿದೆ. ಇವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಒಕ್ಕಲಿಗ, ಲಿಂಗಾಯತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಸುರೇಶ್ ಕುಮಾರ್ ಅವರಿಗೆ ಅವಕಾಶ ಇಲ್ಲ ಎಂಬ ವರದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಸುರೇಶ್ ಕುಮಾರ್ ಮತ್ತೆ ಟಿಕೆಟ್ ಗಿಟ್ಟಿಸಿದ್ದು ಮತದಾರರ ಮನೆಗೆ ಎಡತಾಕುವಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಮೂವರೂ ಅಭ್ಯರ್ಥಿಗಳು ತಮ್ಮದೇ ಆದ ಮತ ಬ್ಯಾಂಕನ್ನು ಹೊಂದಿರುವ ಪರಿಣಾಮ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.




