ಚಿಕ್ಕಪೇಟೆಯಲ್ಲಿ ಚತುಷ್ಕೋನ ಸ್ಪರ್ಧೆ

4 years ago

ಚಿಕ್ಕಪೇಟೆ: ಬೆಂಗಳೂರಿನ ಹೃದಯ ಭಾಗದ ಮತ್ತೊಂದು ವಾಣಿಜ್ಯ ಪ್ರದೇಶವಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಈ ಬಾರಿ ಚತುಷ್ಕೋನ ಸ್ಪರ್ಧೆಯಿಂದ ಗಮನ ಸೆಳೆಯುತ್ತಿದೆ. ಪ್ರತಿ ಬಾರಿ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡುತ್ತಿತ್ತು. ಇದೆ ಮೊದಲ ಬಾರಿಗೆ ಜೆಡಿಎಸ್ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಉಡುಗೊರೆಗಳ ಮೂಲಕ ದೊಡ್ಡ ರೀತಿಯ ಸದ್ದು ಮಾಡಿದ ಕೋಟ್ಯಾಧಿಪತಿ ಕೆ ಜಿ ಎಫ್ ಬಾಬು ಇದೀಗ ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇವರಾಜ್ ಇದು ತಮ್ಮ ಕೊನೆಯ ಚುನಾವಣೆ ಎಂದು ಕ್ಷೇತ್ರದಲ್ಲಿ ಭರಾಟೆಯ ಪ್ರಚಾರ ನಡೆಸುತ್ತಿದ್ದರೆ, ಕೊನೆಯ ಹಂತದವರೆಗೆ ಟಿಕೆಟ್ ಕೈತಪ್ಪಲಿದೆ ಎನ್ನಲಾಗಿದ್ದ ಬಿಜೆಪಿಯ ಉದಯ್ ಗರುಡಾಚಾರ್ ಕೊನೆ ಕ್ಷಣದಲ್ಲಿ ಟಿಕೆಟ್ ಗಿಟ್ಟಿಸಿದ್ದು ಬಿರುಸಿನ ಪ್ರಚಾರ ನಡೆಸಿದ್ದಾರೆ. ನೆರೆಯ ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದ ಇಮ್ರಾನ್ ಪಾಷಾ ಇಲ್ಲಿಂದ ಕಣಕ್ಕಿಳಿದಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಸ್ಪರ್ಧೆ ಮಾಡಿದ್ದು ಅಖಾಡಕ್ಕೆ ರಂಗು ಬಂದಿದೆ.

ವ್ಯಾಪಾರಿಗಳು ಕೂಲಿ ಕಾರ್ಮಿಕರು ಅಲ್ಪಸಂಖ್ಯಾತರು ಮತ್ತು ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಮತದಾರರ ನಾಡಿ ಮಿಡಿತ ಹಿಡಿಯುವುದು ತುಂಬಾ ಕಷ್ಟ ಹೀಗಾಗಿ ಯಾರೇ ಗೆದ್ದರೂ ಅಂತರ ಕೇವಲ ಕೆಲವೇ 100 ಮತಗಳು ಮಾತ್ರ.

Leave a Reply